ಕರ್ನಾಟಕ ಹೈಕೋರ್ಟ್ ಸೇರಿದಂತೆ ಅದರ ಅಧೀನ ನ್ಯಾಯಾಲಯಗಳು ಹಾಗೂ ನ್ಯಾಯಮಂಡಳಿಗಳು ನೀಡಿದ್ದ ಎಲ್ಲಾ ಮಧ್ಯಂತರ ಆದೇಶಗಳ ಅವಧಿಯನ್ನುಮತ್ತೆ ನ.29ರವರೆಗೆ ವಿಸ್ತರಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರ ನೇತೃತ್ವದ ವಿಭಾಗೀಯ ಪೀಠ 2020ರ ಏಪ್ರಿಲ್ 16ರ ಆದೇಶವನ್ನು ನವೆಂಬರ್ 29 ರವರೆಗೆ ವಿಸ್ತರಿಸಿದೆ. ಕೋವಿಡ್- 19 ಹಿನ್ನೆಲೆಯಲ್ಲಿ ಮಧ್ಯಂತರ ಆದೇಶಗಳ ಕಾಲಾವಧಿಯನ್ನು ಏಪ್ರಿಲ್ ಆದೇಶದ ಮೂಲಕ ವಿಸ್ತರಿಸಲಾಗಿತ್ತು.
"ನ್ಯಾಯಾಲಯಗಳ ಮೆಟ್ಟಿಲೇರುವ ನಾಗರಿಕರ ಹಕ್ಕನ್ನು ಕಸಿದುಕೊಳ್ಳಬಾರದು ಎಂಬ ಏಕೈಕ ಉದ್ದೇಶದಿಂದ, ಸಂವಿಧಾನದ 226 ಮತ್ತು 227ನೇ ವಿಧಿ ಅಡಿಯಲ್ಲಿ ಕೆಲವು ನಿರ್ದೇಶನ ನೀಡಲಾಗಿದ್ದು ಆ ಮೂಲಕ ನಮ್ಮ ನ್ಯಾಯವ್ಯಾಪ್ತಿ ಚಲಾಯಿಸಲು ಪ್ರಸ್ತಾಪಿಸುತ್ತೇವೆ. ನ್ಯಾಯಾಲಯಗಳಿಗೆ ಮೊರೆ ಹೋಗುವಂತಿಲ್ಲ ಎಂಬ ಕಾರಣಕ್ಕಾಗಿ ದಾವೆ ಹೂಡುವವರು ತೊಂದರೆ ಅನುಭವಿಸಬಾರದೆಂಬ ಹಿನ್ನೆಲೆಯಲ್ಲಿ ಈ ನಿರ್ದೇಶನಗಳನ್ನು ನೀಡಬೇಕಾಗಿದೆ"
ಕರ್ನಾಟಕ ಹೈಕೋರ್ಟ್
ಆದೇಶದ ವಿವರ:
ಕರ್ನಾಟಕ ಹೈಕೋರ್ಟ್, ಎಲ್ಲಾ ಜಿಲ್ಲಾ ನ್ಯಾಯಾಲಯಗಳು, ಸಿವಿಲ್ ಕೋರ್ಟುಗಳು, ಕೌಟುಂಬಿಕ ನ್ಯಾಯಾಲಯಗಳು, ಕಾರ್ಮಿಕ ನ್ಯಾಯಾಲಯಗಳು, ಕೈಗಾರಿಕಾ ನ್ಯಾಯಮಂಡಳಿಗಳು ಮತ್ತು ಹೈಕೋರ್ಟ್ ಮೇಲ್ವಿಚಾರಣೆಗೊಳಪಟ್ಟ ರಾಜ್ಯದ ಎಲ್ಲಾ ಇತರ ನ್ಯಾಯಮಂಡಳಿಗಳಲ್ಲಿ ಒಂದು ತಿಂಗಳ ಒಳಗಾಗಿ ಮುಕ್ತಾಯಗೊಳ್ಳಲಿರುವ ಎಲ್ಲಾ ಮಧ್ಯಂತರ ಆದೇಶಗಳ ಅವಧಿ ವಿಸ್ತರಿಸಲಾಗಿದೆ.
ನವೆಂಬರ್ 29ರ ವರೆಗೆ ಈ ಆದೇಶಗಳು ಮುಂದುವರೆಯಲಿವೆ. ಯಾವ ಮಧ್ಯಂತರ ಆದೇಶಗಳು ನಿಗದಿತ ಕಾಲಾವಧಿಗೆ ಒಳಪಟ್ಟಿಲ್ಲವೋ ಹಾಗೂ ಮುಂದಿನ ಆದೇಶದವರೆಗೆ ಕಾರ್ಯನಿರ್ವಹಿಸಲಿವೆಯೋ ಅವುಗಳ ಮೆಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ.
ಒಂದು ತಿಂಗಳಲ್ಲಿ ಮುಕ್ತಾಯಗೊಳ್ಳುವ ಎಲ್ಲಾ ಜಾಮೀನು / ನಿರೀಕ್ಷಿತ ಜಾಮೀನು ಆದೇಶಗಳು ನವೆಂಬರ್ 29ರವರೆಗೆ ವಿಸ್ತರಣೆಗೊಳ್ಳಲಿವೆ.
ಹೈಕೋರ್ಟ್, ಜಿಲ್ಲಾ ಅಥವಾ ಸಿವಿಲ್ ನ್ಯಾಯಾಲಯಗಳು ಈಗಾಗಲೇ ಆದೇಶಿಸಿದ ಎಲ್ಲಾ ತೆರವು, ಸ್ವಾಧೀನ ಅಥವಾ ನೆಲಸಮಗೊಳಿಸುವಿಕೆ ಆದೇಶಗಳನ್ನು ನವೆಂಬರ್ 29 ರವರೆಗೆ ತಡೆಹಿಡಿಯಲಾಗಿರುತ್ತದೆ.
ಇದಲ್ಲದೆ, ಕಟ್ಟಡ ನೆಲಸಮಗೊಳಿಸುವಿಕೆ ಮತ್ತು ವ್ಯಕ್ತಿಗಳನ್ನು ತೆರವುಗೊಳಿಸುವಂತಹ ಪ್ರಕ್ರಿಯೆಯನ್ನು ನಿಧಾನಗೊಳಿಸುವಂತೆ ರಾಜ್ಯ ಸರ್ಕಾರ, ಅದರ ಸಂಸ್ಥೆಗಳು ಮತ್ತು ಅಂಗಗಳಿಗೆ ಕೋರ್ಟ್ ಸೂಚಿಸಿದೆ.
ಮತ್ತೊಂದು ಸೂಚನೆಯಲ್ಲಿ, ಪ್ರಮಾಣಿತ ಕಾರ್ಯವಿಧಾನಗಳ (ಎಸ್‌ಒಪಿ) ಮೂಲಕ ಚಾಲ್ತಿಯಲ್ಲಿರುವ ಕರ್ನಾಟಕದ ನ್ಯಾಯಾಲಯಗಳ ಪ್ರಸ್ತುತ ಸೀಮಿತ ಕಾರ್ಯನಿರ್ವಹಣೆ ಮೇಲೆ ಇದು ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
"1963ರ ಕಾಲಪರಿಮಿತಿ ಕಾಯಿದೆಯ ಸೆಕ್ಷನ್ 4ರ ಅಡಿಯಲ್ಲಿ ಕಾರ್ಯಸ್ಥಗಿತ ಅವಧಿಯ ವಿಸ್ತರಣೆ ಹೊರತಾಗಿಯೂ, ಕರ್ನಾಟಕ ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲಾ ನ್ಯಾಯಾಲಯಗಳು ಅಧಿಸೂಚಿತ ಪ್ರಮಾಣಿತ ಕಾರ್ಯವಿಧಾನಗಳ (ಎಸ್‌ಒಪಿ) ಮೂಲಕ ಕೆಲಸ ನಿರ್ವಹಿಸುತ್ತಿರಲಿವೆ."
ಕರ್ನಾಟಕ ಹೈಕೋರ್ಟ್