ವಾಟ್ಸಾಪ್‌ ಮೂಲಕ ಕೋವಿಡ್ ನಿಯಮ ಉಲ್ಲಂಘನೆ ದೂರು: ಸಾಧ್ಯತೆ ಪರಿಶೀಲನೆಗೆ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಸಾಮಾಜಿಕ ನಿಯಮಗಳ ಉಲ್ಲಂಘನೆಯ ಕುರಿತಾದ ಚಿತ್ರಗಳ ಸಮೇತ ದೂರು ದಾಖಲಿಸಲು ಇದರಿಂದ ಅನುಕೂಲವಾಗಲಿದೆ ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದೆ.
Karnataka HC, COVID-19
Karnataka HC, COVID-19
Published on

ಕೋವಿಡ್‌ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿರುವ ಸಾಮಾಜಿಕ ಅಂತರ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ವಾಟ್ಸಾಪ್‌ ಮತ್ತು ಟೆಲಿಗ್ರಾಂಗಳ ಮೂಲಕ ದೂರು ದಾಖಲಿಸಲು ಅವಕಾಶ ಮಾಡಿಕೊಂಡುವಂತೆ ರಾಜ್ಯ ಸರ್ಕಾರಕ್ಕೆ ಶುಕ್ರವಾರ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ರಾಜ್ಯದಲ್ಲಿ ಸಾಮಾಜಿಕ ಅಂತರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಜನರು ದೂರು ನೀಡಲು ಅಹವಾಲು ಪರಿಹಾರ ವ್ಯವಸ್ಥೆ ಮಾಡಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ವಿಭಾಗೀಯ ಪೀಠಕ್ಕೆ ವಿವರಿಸಿದಾಗ ನ್ಯಾಯಾಲಯವು ಮೇಲಿನ ಸಲಹೆ ನೀಡಿತು.

“ಮೆಮೊದ ಜೊತೆಗೆ ಜೂನ್‌ 2ರಂದು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯಿದೆ ಅಡಿ ಅಹವಾಲು ಪರಿಹಾರ ವ್ಯವಸ್ಥೆ ಆರಂಭಿಸಿರುವುದನ್ನು ಉಲ್ಲೇಖಿಸಲಾಗಿದೆ. ಇದಕ್ಕೆ ಹೆಚ್ಚಿನ ಪ್ರಚಾರ ನೀಡುವಂತೆ ನಾವು ನಿರ್ದೇಶಿಸುತ್ತೇವೆ. ವಾಟ್ಸಾಪ್‌ ಮತ್ತು ಟೆಲಿಗ್ರಾಂ ಮೂಲಕವೂ ಮಾರ್ಗಸೂಚಿಗಳ ಉಲ್ಲಂಘನೆಗೆ ಸಂಬಂಧಿಸಿದ ದೂರು (ಸಾಮಾಜಿಕ ಅಂತರ ನಿಯಮಗಳ ಉಲ್ಲಂಘನೆ) ನೀಡಲು ಅವಕಾಶ ಮಾಡಿಕೊಡುವುದು ಸೂಕ್ತ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ. ನ್ಯಾಯಾಲಯದ ಸಲಹೆಗೆ ಅರ್ಜಿದಾರರ ಪರ ವಕೀಲರಾದ ಪುತ್ತಿಗೆ ರಮೇಶ್‌ ಮತ್ತು ಜಿ ಆರ್‌ ಮೋಹನ್‌ ಸಹಮತ ವ್ಯಕ್ತಪಡಿಸಿದರು.

Also Read
ಸಿಎಂ ಬಿಎಸ್‌ವೈ, ಸಚಿವರಿಂದ ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ: ಸರ್ಕಾರ ಕ್ರಮಕೈಗೊಳ್ಳದಿದ್ದರೆ ಕಠಿಣ ಕ್ರಮ ಎಂದ ಹೈಕೋರ್ಟ್

ಚಿತ್ರ ಸೆರೆ ಹಿಡಿಯಲಾದ ದಿನಾಂಕವನ್ನು ಪತ್ತೆ ಮಾಡುವುದು ಕಷ್ಟವಾಗಲಿದೆ. ಇಂಥ ವ್ಯವಸ್ಥೆಯಿಂದ ವಾಟ್ಸಾಪ್‌ನಲ್ಲಿ ಮಾಹಿತಿ ತುಂಬಿ ಹರಿಯಲಿದೆ ಎಂದು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಹೇಳಿದರು.

ಕಟ್ಟುನಿಟ್ಟಾಗಿ ಕೋವಿಡ್‌ ಮಾರ್ಗಸೂಚಿಗಳನ್ನು ಜಾರಿಗೊಳಿಸುವಂತೆ ಕೋರಿ ಸರ್ಕಾರೇತರ ಸಂಸ್ಥೆ ಲೆಟ್ಜ್‌ಕಿಟ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆ ಸಂದರ್ಭದಲ್ಲಿ ಪೀಠವು ಈ ಆದೇಶ ಹೊರಡಿಸಿದೆ. ಐದನೇ ಪ್ರತಿವಾದಿ (ಬಿಜೆಪಿ) ಇಂದಿನ ವಿಚಾರಣೆಯಲ್ಲಿ ಭಾಗವಹಿಸಿಲ್ಲ. ಹಿಂದಿನ ಆದೇಶಗಳನ್ನು ಪಾಲಿಸಲಾಗಿಲ್ಲ. ಮುಂದಿನ ವಿಚಾರಣೆಯ ಸಂದರ್ಭದಲ್ಲೂ ಐದನೇ ಪ್ರತಿವಾದಿ ಭಾಗವಹಿಸದಿದ್ದರೆ ಪದಾಧಿಕಾರಿಗಳ ಉಪಸ್ಥಿತಿಗೆ ಸೂಚಿಸಬೇಕಾಗುತ್ತದೆ” ಎಂದ ಪೀಠವು ವಿಚಾರಣೆಯನ್ನು ಜೂನ್‌ 10ಕ್ಕೆ ಮುಂದೂಡಿದೆ.

Kannada Bar & Bench
kannada.barandbench.com