ಸಿಎಂ ಬಿಎಸ್‌ವೈ, ಸಚಿವರಿಂದ ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ: ಸರ್ಕಾರ ಕ್ರಮಕೈಗೊಳ್ಳದಿದ್ದರೆ ಕಠಿಣ ಕ್ರಮ ಎಂದ ಹೈಕೋರ್ಟ್

“ರಾಜಕಾರಣಿಗಳು ಚುನಾವಣಾ ಸಮಾವೇಶಗಳು, ವಿವಿಧ ಕಾರ್ಯಕ್ರಮಗಳನ್ನು ಅಪಾರ ಜನರ ಸಮ್ಮುಖದಲ್ಲಿ ನಡೆಸುವ ಮೂಲಕ ಸೋಂಕು ವ್ಯಾಪಿಸಲು ಕಾರಣವಾಗುತ್ತಿದ್ದಾರೆ. ಇದರಿಂದ ಸೋಂಕನ್ನು ನಿಯಂತ್ರಿಸಲಾಗುತ್ತದೆಯೇ?” ಎಂದು ಪ್ರಶ್ನಿಸಿದ ಅರ್ಜಿದಾರರ ಪರ ವಕೀಲರು.
ಸಿಎಂ ಬಿಎಸ್‌ವೈ, ಸಚಿವರಿಂದ ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ: ಸರ್ಕಾರ ಕ್ರಮಕೈಗೊಳ್ಳದಿದ್ದರೆ ಕಠಿಣ ಕ್ರಮ ಎಂದ ಹೈಕೋರ್ಟ್
Karnataka HC

ಬೆಂಗಳೂರು ಮೆಟ್ರೊ ಎರಡನೇ ಹಂತದ ರೈಲು ಸಂಚಾರ ಪರಿವೀಕ್ಷಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಮತ್ತು ಸಚಿವರಾದ ಆರ್‌ ಅಶೋಕ್‌, ವಿ ಸೋಮಣ್ಣ ಹಾಗೂ ಬೆಳಗಾವಿಯಲ್ಲಿ ಹೋಮ ಹವನ ನಡೆಸಿದ್ದ ಬಿಜೆಪಿ ಶಾಸಕ ಅಭಯ್‌ ಪಾಟೀಲ್‌ ಅವರ ವಿರುದ್ಧದ ದೂರುಗಳನ್ನು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅಹವಾಲು ಪರಿಹಾರ ವ್ಯವಸ್ಥೆಗೆ ಸಲ್ಲಿಸಿ, ಒಂದೊಮ್ಮೆ ಅವರು ಕ್ರಮಕೈಗೊಳ್ಳದಿದ್ದರೆ ಕಟ್ಟುನಿಟ್ಟಿನ ಆದೇಶ ಹೊರಡಿಸುವುದಾಗಿ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಆದೇಶಿಸಿದೆ.

ಕಳೆದ ಮೇನಲ್ಲಿ ವಕೀಲ ಪುತ್ತಿಗೆ ರಮೇಶ್‌ ಅವರು ಲೆಟ್ಜ್‌ಕಿಟ್‌ ಫೌಂಡೇಶನ್‌ ಪರವಾಗಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ವಿಭಾಗೀಯ ಪೀಠ ನಡೆಸಿತು. ಈ ಸಂದರ್ಭದಲ್ಲಿ ಗೀತಾ ಮಿಶ್ರಾ ಅವರ ಪರವಾಗಿ ವಕೀಲ ಜಿ ಆರ್‌ ಮೋಹನ್‌ ಅವರು ಸಲ್ಲಿಸಿದ್ದ ಮಧ್ಯಪ್ರವೇಶ ಮನವಿಯನ್ನು ವಿಚಾರಣೆಗೆ ಎತ್ತಿಕೊಂಡಿದ್ದ ಪೀಠವು ಮೇಲಿನಂತೆ ಹೇಳಿತು.

ಮೆಟ್ರೊ ಎರಡನೇ ಹಂತದ ರೈಲು ಸಂಚಾರ ಪರಿವೀಕ್ಷಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ, ಕಂದಾಯ ಸಚಿವ ಆರ್‌ ಅಶೋಕ್‌, ವಸತಿ ಸಚಿವ ವಿ ಸೋಮಣ್ಣ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕೋವಿಡ್‌ ಮಾರ್ಗಸೂಚಿಯ ಭಾಗವಾದ ಸಾಮಾಜಿಕ ಅಂತರ ನಿಯಮವನ್ನು ಉಲ್ಲಂಘಿಸಲಾಗಿತ್ತು. ಇನ್ನೊಂದು ಕಡೆ, ಬೆಳಗಾವಿಯ ದಕ್ಷಿಣದ ಬಿಜೆಪಿ ಶಾಸಕ ಅಭಯ್‌ ಪಾಟೀಲ್‌ ಅವರು ನಗರದ ಐವತ್ತು ಕಡೆ ನಿಯಮಗಳನ್ನು ಉಲ್ಲಂಘಿಸಿ ಹೋಮ-ಹವನ ಮಾಡಿಸಿದ್ದರು. ಸಕ್ಕರೆ ಮತ್ತು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಆಟೋ ಚಾಲಕರಿಗೆ ಆಹಾರದ ಕಿಟ್‌ಗಳನ್ನು ವಿತರಿಸುವಾಗ ಕೋವಿಡ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದರ ಕುರಿತು ಅರ್ಜಿದಾರರು ಪೊಲೀಸರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಲಾಗಿದೆ ಎಂಬುದನ್ನು ಪೀಠದ ಗಮನಕ್ಕೆ ತಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ದ್ವಿತೀಯ ಪುತ್ರ ಬಿ ವೈ ವಿಜಯೇಂದ್ರ ಅವರು ಕುಟುಂಬ ಸಮೇತವಾಗಿ ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸಿ ನಂಜನಗೂಡಿನ ನಂಜುಡೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದನ್ನು ಕಳೆದ ಮಂಗಳವಾರ (ಮೇ 25) ನಡೆದಿದ್ದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು. ಈ ಸಂಬಂಧ ರಾಜ್ಯ ಸರ್ಕಾರ ವರದಿ ಕೇಳಿದ್ದು, ಇನ್ನಷ್ಟೇ ವರದಿ ಕೈಸೇರಬೇಕಿದೆ. ಹೀಗಾಗಿ ವರದಿ ಸಲ್ಲಿಸಲು ಕಾಲಾವಕಾಶ ನೀಡುವಂತೆ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು ಪೀಠಕ್ಕೆ ಕೋರಿದರು.

Also Read
[ಅಮಿತ್ ಶಾ ರ‍್ಯಾಲಿ]ಸಾಮಾಜಿಕ ಅಂತರ ನಿಯಮ ಉಲ್ಲಂಘನೆಗೆ ಎಫ್‌ಐಆರ್‌ ಏಕಿಲ್ಲ? ಪೊಲೀಸ್ ಆಯುಕ್ತರಿಗೆ ಹೈಕೋರ್ಟ್‌ ಪ್ರಶ್ನೆ

“ಲಾಕ್‌ಡೌನ್‌ ಘೋಷಿಸಿ ಸಾಮಾನ್ಯ ಜನರನ್ನು ಮನೆಯಲ್ಲೇ ಇರುವಂತೆ ಸೂಚಿಸುವ ರಾಜಕಾರಣಿಗಳು ಚುನಾವಣಾ ಸಮಾವೇಶಗಳು, ವಿವಿಧ ಕಾರ್ಯಕ್ರಮಗಳನ್ನು ಅಪಾರ ಜನರ ಸಮ್ಮುಖದಲ್ಲಿ ನಡೆಸುವ ಮೂಲಕ ಸೋಂಕು ವ್ಯಾಪಿಸಲು ಕಾರಣವಾಗುತ್ತಿದ್ದಾರೆ. ಇದರಿಂದ ಸೋಂಕನ್ನು ನಿಯಂತ್ರಿಸಲಾಗುತ್ತದೆಯೇ?” ಎಂದು ಅರ್ಜಿದಾರರ ಪರ ವಕೀಲ ಜಿ ಆರ್‌ ಮೋಹನ್‌ ಪ್ರಶ್ನಿಸಿದರು. ಆಗ ಪೀಠವು ಅಹವಾಲು ಪರಿಹಾರ ವ್ಯವಸ್ಥೆಗೆ ದೂರು ಸಲ್ಲಿಸುವಂತೆ ಸೂಚಿಸಿ, ವಿಚಾರಣೆಯನ್ನು ಜೂನ್‌ 10ಕ್ಕೆ ಮುಂದೂಡಿತು.

ಕಳೆದ ಜನವರಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಬೃಹತ್‌ ಬಹಿರಂಗ ಚುನಾವಣಾ ಸಮಾವೇಶ ನಡೆಸಲಾಗಿತ್ತು. ಪೊಲೀಸರ ಸಮ್ಮುಖದಲ್ಲೇ ನಿಯಮ ಉಲ್ಲಂಘಿಸಿದ್ದರೂ ಯಾವುದೇ ಕ್ರಮಕೈಗೊಳ್ಳಲಾಗಿರಲಿಲ್ಲ ಎಂದು ಪ್ರತ್ಯೇಕ ರಿಟ್‌ ಮನವಿಯನ್ನು ಹೈಕೋರ್ಟ್‌ನಲ್ಲಿ ದಾಖಲಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಕಾಲಾವಕಾಶ ನೀಡುವಂತೆ ಸರ್ಕಾರವು ನ್ಯಾಯಾಲಯಕ್ಕೆ ಮನವಿ ಮಾಡಿತು.

Related Stories

No stories found.