ಅಗತ್ಯವಿರುವಷ್ಟು ಹಾಸಿಗೆಗಳ ಅಂದಾಜಿನೊಂದಿಗೆ ಸನ್ನದ್ಧವಾಗಿರಿ: ರಾಜ್ಯಕ್ಕೆ ಹೈಕೋರ್ಟ್‌ ನಿರ್ದೇಶನ

ಸಮಾಜದಲ್ಲಿ ಹಿಂದುಳಿದವರು ಮತ್ತು ಅಸಂಘಟಿತ ಕಾರ್ಮಿಕ ವಲಯದ ಮೇಲೆ ಲಾಕ್‌ಡೌನ್‌ ಉಂಟುಮಾಡಿರುವ ಪರಿಸ್ಥಿತಿಯ ಬಗ್ಗೆ ಗಮನ ಇಡುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.
Karnataka high court
Karnataka high court

ಜನರ ಬದುಕುವ ಹಕ್ಕನ್ನು ಎತ್ತಿಹಿಡಿಯುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೊಣೆಗಾರಿಕೆ ಎಂಬುದನ್ನು ನೆನಪಿಸಿರುವ ಕರ್ನಾಟಕ ಹೈಕೋರ್ಟ್‌ ಗುರುವಾರ ಹಾಸಿಗೆಗಳ ಪ್ರಮಾಣದಲ್ಲಿ ಹೆಚ್ಚಳ, ಆಮ್ಲಜನಕ ಲಭ್ಯತೆ ಮತ್ತು ಕೋವಿಡ್‌ ರೋಗಿಗಳಿಗೆ ರೆಮ್‌ಡಿಸಿವಿರ್‌ ಪೂರೈಕೆ ಸೇರಿದಂತೆ ಹಲವು ನಿರ್ದೇಶನಗಳನ್ನು ನೀಡಿದೆ.

“ನಾವು ಪ್ರಕರಣದ ವಿಚಾರಣೆಗೆ ಮುಂದಾಗುವುದಕ್ಕೂ ಮುನ್ನ ಸಂವಿಧಾನದ 21ನೇ ವಿಧಿಯಡಿ ಬದುಕುವ ಹಕ್ಕನ್ನು ಸಂರಕ್ಷಿಸುವ ಜವಾಬ್ದಾರಿ ಕೇಂದ್ರ, ರಾಜ್ಯ ಮತ್ತು ಇತರೆ ಸಂಸ್ಥೆಗಳ ಹೊಣೆಗಾರಿಕೆಯಾಗಿದೆ ಎಂಬುದನ್ನು ನೆನಪಿಸುವುದು ಮುಖ್ಯವಾಗಿದೆ. ಅತ್ಯಂತ ಕಟು ಪರಿಸ್ಥಿತಿಯನ್ನು ಇಂದು ನಾವು ಎದುರಿಸುತ್ತಿದ್ದೇವೆ. ಸೋಂಕಿಗೆ ತುತ್ತಾಗಿರುವವರು ಅತ್ಯುತ್ತಮ ಆರೋಗ್ಯ ಸೇವೆಗಾಗಿ ಸರ್ಕಾರದತ್ತ ಮುಖ ಮಾಡುತ್ತಾರೆ. ಕೋವಿಡ್‌ಗೆ ವಿಶೇಷ ಚಿಕಿತ್ಸೆ ಅಗತ್ಯವಿದೆ. ಎಲ್ಲರಿಗೂ ಅತ್ಯುತ್ತಮ ಚಿಕಿತ್ಸೆ ಕೊಡಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೆನಪಿಸುವುದು ಅಗತ್ಯವಾಗಿದೆ. ಸರ್ಕಾರಗಳು ಬಹುಮುಖ್ಯವಾಗಿ ಮೂಲಭೂತ ಹಕ್ಕುಗಳಲ್ಲಿ ಒಂದಾದ ಬದುಕುವ ಹಕ್ಕಿನೊಂದಿಗೆ ವ್ಯವಹರಿಸುತ್ತಿವೆ” ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ಅವರಿದ್ದ ವಿಭಾಗೀಯ ಪೀಠ ಹೇಳಿದೆ. ನ್ಯಾಯಾಲಯ ಹೊರಡಿಸಿದ ಪ್ರಮುಖ ನಿರ್ದೇಶನಗಳು ಇಂತಿವೆ:

ಕೋವಿಡ್‌ ರೋಗಿಗಳಿಗೆ ಹಾಸಿಗೆಗಳ ಸಂಖ್ಯೆ ಹೆಚ್ಚಿಸಿ

  • ಅಧಿಕಾರಿಗಳನ್ನು ಸಂಪರ್ಕಿಸಲು ಮತ್ತು ಜನರಿಗೆ ಲಭ್ಯವಾಗುವಂತೆ ಎಲ್ಲಾ ಹಾಸಿಗೆಗಳನ್ನು ಸ್ವಾಧೀನಪಡಿಸಿಕೊಳ್ಳಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ನ್ಯಾಯಾಲಯವು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಇದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ.

  • ಕೋವಿಡ್‌ ಸೌಕರ್ಯ ಹೆಚ್ಚಿಸಲು ಸೇನೆ ಮತ್ತು ವಾಯು ಪಡೆ ಅಧಿಕಾರಿಗಳ ಜೊತೆ ಸಭೆ ನೆಡೆಸಲು ಸರ್ಕಾರಕ್ಕೆ ಸೂಚನೆ.

  • ಆಸ್ಪತ್ರೆ ಸೇರುವ ಅವಶ್ಯಕತೆ ಇಲ್ಲದ ಆದರೆ ಪ್ರತ್ಯೇಕವಾಸ ಅಗತ್ಯವಿರುವವರಿಗೆ ಕೋವಿಡ್‌ ಕೇಂದ್ರ ಬಳಸಲು ಪ್ರೇರೇಪಿಸಬೇಕು.

  • ಆಸ್ಪತ್ರೆಗೆ ಅಗತ್ಯವಿಲ್ಲದ ಆದರೆ ಪ್ರತ್ಯೇಕವಾಗಿರಲು ಬಯಸುವ ರೋಗಿಗಳಿಗೆ ಕೋವಿಡ್‌ ಕೇಂದ್ರ ಲಭ್ಯವಾಗುವಂತೆ ರಾಜ್ಯ ಮತ್ತು ಬಿಬಿಎಂಪಿ ಕ್ರಮವಹಿಸಬೇಕು.

ರಾಜ್ಯದ ಸಿದ್ಧತೆ

  • ವಿಪತ್ತು ನಿರ್ವಹಣಾ ಕಾಯಿದೆ (ಡಿಎಂ ಕಾಯಿದೆ) ಅಡಿ ಎಲ್ಲಾ ಪ್ರಾಧಿಕಾರಗಳು ರಾಜ್ಯದ ಸಿದ್ಧತೆಯ ಹೊಣೆ ಹೊರಬೇಕು.

  • ಬೆಂಗಳೂರು ಮತ್ತು ಇತರೆ ಜಿಲ್ಲೆಗಳಲ್ಲಿ ಹಾಸಿಗೆಗಳ ಅಗತ್ಯತೆ ಅರಿತು ಅವುಗಳನ್ನು ಸಿದ್ಧಪಡಿಸಿಕೊಂಡಿರಬೇಕು.

  • ಅಗತ್ಯವಿರುವ ಹಾಸಿಗೆಗಳ ಸಂಖ್ಯೆಯನ್ನು ಅಂದಾಜು ಮಾಡಲು ಮತ್ತು ಹಾಸಿಗೆಗಳ ಸಾಮರ್ಥ್ಯವನ್ನು ಹೆಚ್ಚಿಸಲು ತೆಗೆದುಕೊಂಡ ಕ್ರಮಗಳನ್ನು ರಾಜ್ಯ ಸರ್ಕಾರ ದಾಖಲೆಯಲ್ಲಿ ಸಲ್ಲಿಸಬೇಕು.

ರೆಮ್‌ಡಿಸಿವಿರ್‌

  • ಖಾಸಗಿ ಆಸ್ಪತ್ರೆಗಳಲ್ಲಿ ರೆಮ್‌ಡಿಸಿವಿರ್‌ನ ಬೇಡಿಕೆಯನ್ನು ನಿರ್ಬಂಧಿಸುವ ಸಂಬಂಧದ ಮಾನದಂಡಗಳನ್ನು ರಾಜ್ಯ ಸರ್ಕಾರ ದಾಖಲೆಯಲ್ಲಿ ಸಲ್ಲಿಸಬೇಕು. ಅಂತಹ ಮಾನದಂಡಗಳು ತರ್ಕಬದ್ಧವಾಗಿರಬೇಕು ಮತ್ತು ಸಂವಿಧಾನದ 14ನೇ ವಿಧಿಗೆ ಪೂರಕವಾಗಿರಬೇಕು.

  • ಎಲ್ಲಾ ಆಸ್ಪತ್ರೆಗಳಲ್ಲಿ ರೆಮ್‌ಡಿಸಿವಿರ್‌ ಅಗತ್ಯತೆ ಅರಿತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು.

  • ರೆಮ್‌ಡಿಸಿವಿರ್‌ ಅಗತ್ಯತೆ ಕುರಿತು ಕರ್ನಾಟಕ ಸಲ್ಲಿಸುವ ಕೋರಿಕೆಯನ್ನು ಪರಿಗಣಿಸಿ ಅಷ್ಟು ಬೇಡಿಕೆಯನ್ನು ರಾಜ್ಯಕ್ಕೆ ಕೇಂದ್ರ ಸರ್ಕಾರ ಪೂರೈಸಬೇಕು. ಈ ಸಂಬಂಧ ತಕ್ಷಣ ನಿರ್ಧಾರ ಮಾಡಬೇಕು.

  • ಪ್ರತಿ ಆಸ್ಪತ್ರೆಯ ಸಹಾಯವಾಣಿ ಕೇಂದ್ರದ ಬಳಿ ಉಪ ಔಷಧ ನಿಯಂತ್ರಕರ ಸಂಪರ್ಕ ಸಂಖ್ಯೆಯನ್ನು ಉಲ್ಲೇಖಿಸಬೇಕು. ರೋಗಿಗಳ ಸಂಬಂಧಿಕರು ಸಂಬಂಧಿತ ಆಸ್ಪತ್ರೆಯಲ್ಲಿ ರೆಮಿಡಿಸಿವಿರ್‌ ಸಿಗಲಿಲ್ಲವೆಂದರೆ ಅವರನ್ನು ಸಂಪರ್ಕಿಸಲು ಅನುಕೂಲವಾಗುತ್ತದೆ.

  • ರೆಮ್‌ಡಿಸಿವಿರ್‌ ಮತ್ತು ಆಮ್ಲಜನಕ ಮಿತಿ ಹೆಚ್ಚಿಸುವ ಸಂಬಂಧ ನಿರ್ಧಾರವನ್ನು ಕೇಂದ್ರ ಸರ್ಕಾರವು ಮೇ 3ರ ಒಳಗೆ ತಿಳಿಸಬೇಕು.

ಆಹಾರ ಭದ್ರತೆ, ಅಸಂಘಟಿತ ಕಾರ್ಮಿಕರಿಗೆ ಪರಿಹಾರ

  • ಆಹಾರ ಭದ್ರತೆ, ಕಾರ್ಮಿಕರಿಗೆ ಪರಿಹಾರ ವಿಚಾರಗಳಿಗೆ ಆದ್ಯತೆ ನೀಡಬೇಕು.

  • ಸಮಾಜದಲ್ಲಿನ ಬಡವರು ಮತ್ತು ಅಸಂಘಟಿತ ವಲಯದಲ್ಲಿರುವವರ ಮೇಲೆ ಲಾಕ್‌ಡೌನ್‌ ಬೀರಿರುವ ಪರಿಣಾಮವನ್ನು ಪರಿಶೀಲಿಸಬೇಕು.

  • ಸಮಾಜದ ಬಡವರಿಗೆ ಪರಿಸ್ಥಿತಿಯನ್ನು ಅರಿಯುವ ಸಂಬಂಧ ವಿವಿಧ ವಲಯಗಳ ಪ್ರಮುಖರ ಜೊತೆ ಅಡ್ವೊಕೇಟ್‌ ಜನರಲ್‌ ಸಭೆ ನಡೆಸುವುದು ಸೂಕ್ತ.

  • ಬಡವರಿಗೆ ಪಡಿತರ ಇತ್ಯಾದಿ ನೀಡುವ ಮೂಲಕ ಅವರಿಗೆ ನೆರವಾಗುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು.

ಪ್ರತಿ ಆಸ್ಪತ್ರೆಯಲ್ಲಿ ಸಹಾಯವಾಣಿ ಆರಂಭಿಸುವಂತೆ ಹಿಂದೆ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿತ್ತು. ಇದನ್ನು ಜಾರಿಗೊಳಿಸಿರುವ ಸಂಬಂಧ ತಕ್ಷಣ ವರದಿ ಸಲ್ಲಿಸುವಂತೆ ಪೀಠ ಪ್ರಶ್ನಿಸಿದೆ. ಸಹಾಯವಾಣಿ ಕೇಂದ್ರವು ಆಸ್ಪತ್ರೆಯಲ್ಲಿ ಹಾಸಿಗೆ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಮಾಹಿತಿ ನೀಡಲಿದೆ.

Also Read
ವೈದ್ಯಕೀಯ ಉಪಕರಣ, ರೆಮ್‌ಡಿಸಿವಿರ್‌ ಒಳಗೊಂಡು ಕೋವಿಡ್‌ ಔಷಧಗಳಿಗೆ ಜಿಎಸ್‌ಟಿ ವಿನಾಯಿತಿ ಕೋರಿ ಸುಪ್ರೀಂನಲ್ಲಿ ಮನವಿ

ರಾಜ್ಯದಲ್ಲಿ ಕೋವಿಡ್‌ ಸೋಂಕಿತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ನ್ಯಾಯಾಲಯ ಸ್ವೀಕರಿಸಿದ ಎರಡು ಪತ್ರಗಳನ್ನು ಆಧರಿಸಿ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಪೀಠವು ಮೇಲಿನ ನಿರ್ದೇಶನಗಳನ್ನು ನೀಡಿತ್ತು.

ರಾಜ್ಯದಲ್ಲಿ ಶೇ. 75ರಷ್ಟು ರೋಗಿಗಳಿಗೆ ರೆಮ್‌ಡಿಸಿವಿರ್‌ ಔಷಧ ಸಿಗುತ್ತಿಲ್ಲ. ಪ್ರತಿ ತಿಂಗಳು 3 ಲಕ್ಷ ರೆಮ್‌ಡಿಸಿವಿರ್‌ ಅಗತ್ಯವಿದ್ದು, 1.82 ಲಕ್ಷ ಮಾತ್ರ ಕೇಂದ್ರದಿಂದ ಪೂರೈಕೆಯಾಗುತ್ತಿದೆ ಎಂದು ವಿಚಾರಣೆಯ ಸಂದರ್ಭದಲ್ಲಿ ಪೀಠಕ್ಕೆ ಮಾಹಿತಿ ನೀಡಲಾಯಿತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ರೆಮಿಡಿಸಿವಿರ್‌ಗೆ ಕೇಂದ್ರಕ್ಕೆ ಮನವಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿತು.

ಕರ್ನಾಟಕದಲ್ಲಿ ಗರಿಷ್ಠ ಪ್ರಮಾಣದ ಆಕ್ಸಿಜನ್ ಬಳಕೆಯು ದಿನಕ್ಕೆ 802 ಮೆಟ್ರಿಕ್‌ ಟನ್ ಎಂದು ಮಿತಿ ನಿಗದಿಗೊಳಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಬೇಡಿಕೆಯ ಹೋಲಿಕೆಯಲ್ಲಿ ಅಗಾಧ ಪ್ರಮಾಣದಲ್ಲಿ ಆಮ್ಲಜನಕವನ್ನು ರಾಜ್ಯಕ್ಕೆ ಪೂರೈಸಲಾಗುತ್ತಿದೆ. ಎಷ್ಟು ಬಳಕೆ ಮಾಡಬೇಕು ಎಂಬುದನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ ಎಂದು ರಾಜ್ಯ ಸರ್ಕಾರದ ಪರ ವಕೀಲ ವಿಕ್ರಮ್‌ ಹುಯಿಲಗೋಳ ಮಾಹಿತಿ ನೀಡಿದರು.

“ನಮಗೆ ಆಮ್ಲಜನಕ ಹೆಚ್ಚಾದರೆ ಬೇರೆ ರಾಜ್ಯಗಳಿಗೆ ನೀಡಲು ಸೂಚಿಸಲಾಗಿದೆ” ಎಂದು ಹುಯಿಲಗೋಳ ತಿಳಿಸಿದರು. ಇದಕ್ಕೆ ಪೀಠವು ರಾಜ್ಯಕ್ಕೆ ಅಗತ್ಯವಿರುವ ಮಟ್ಟದ ಆಮ್ಲಜನಕಕ್ಕೆ ಕೇಂದ್ರಕ್ಕೆ ಮನವಿ ಸಲ್ಲಿಸಿ ಎಂದಿತು.

ಕೋವಿಡ್‌ ರೋಗಿಗಳ ಆರೈಕೆ ಮತ್ತು ಕೊರೊನಾ ನಿಯಂತ್ರಿಸಲು ಶ್ರಮಿಸುತ್ತಿರುವ ವೈದ್ಯರು, ಅಧಿಕಾರಿಗಳು, ದಾದಿಯರು ಮಹತ್ವದ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ ಪೀಠವು ಬೆಂಗಳೂರು ಕೇಂದ್ರಿತವಾಗಿ ನಿರ್ದೇಶನಗಳನ್ನು ನೀಡಿದ್ದರೂ ಬೇರೆ ಜಿಲ್ಲೆಗಳಲ್ಲಿ ಪ್ರಕರಣಗಳು ಹೆಚ್ಚಾದರೆ ಇವುಗಳನ್ನು ಜಾರಿಗೊಳಿಸಬೇಕು ಎಂದಿದ್ದು, ಮೇ 5ಕ್ಕೆ ಪ್ರಕರಣ ಮುಂದೂಡಲಾಗಿದೆ.

Related Stories

No stories found.
Kannada Bar & Bench
kannada.barandbench.com