ವೈದ್ಯಕೀಯ ಉಪಕರಣ, ರೆಮ್‌ಡಿಸಿವಿರ್‌ ಒಳಗೊಂಡು ಕೋವಿಡ್‌ ಔಷಧಗಳಿಗೆ ಜಿಎಸ್‌ಟಿ ವಿನಾಯಿತಿ ಕೋರಿ ಸುಪ್ರೀಂನಲ್ಲಿ ಮನವಿ

ಕೋವಿಡ್‌ ಔಷಧಗಳು, ವೈದ್ಯಕೀಯ ಉಪಕರಣಗಳಿಗೆ ಜಿಎಸ್‌ಟಿ ವಿನಾಯಿತಿ ನೀಡುವ ಸಂಬಂಧ ಕೇಂದ್ರೀಯ ಜಿಎಸ್‌ಟಿ ಕಾಯಿದೆ 2017ರ ಸೆಕ್ಷನ್‌ 11ರ ಅಡಿ ತನಗಿರುವ ಅಧಿಕಾರ ಚಲಾಯಿಸುವಂತೆ ಕೇಂದ್ರಕ್ಕೆ ನಿರ್ದೇಶಿಸಲು ಸುಪ್ರೀಂನಲ್ಲಿ ಮನವಿ ಮಾಡಲಾಗಿದೆ.
GST, Supreme Court, Remdesivir
GST, Supreme Court, Remdesivir
Published on

ಕೋವಿಡ್‌ ಪರಿಸ್ಥಿತಿ ಬಿಗಡಾಯಿಸಿರುವ ಹಿನ್ನೆಲೆಯಲ್ಲಿ ಕೋವಿಡ್‌ಗೆ ಚಿಕಿತ್ಸೆ ನೀಡಲು ಬಳಸುವ ರೆಮ್‌ಡಿಸಿವಿರ್‌, ಟೋಸಿಲಿಜುಮಾಬ್, ಫಾವಿಪಿರಾವಿರ್‌ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಗೆ (ಜಿಎಸ್‌ಟಿ) ವಿನಾಯಿತಿ ಕಲ್ಪಿಸುವ ಸಂಬಂಧ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ.

ಕೋವಿಡ್‌ಗೆ ಸಂಬಂಧಿಸಿದ ವಿಚಾರಗಳ ಕುರಿತು ಸ್ವಯಂಪ್ರೇರಿತವಾಗಿ ಸುಪ್ರೀಂ ಕೋರ್ಟ್‌ ದಾಖಲಿಸಿಕೊಂಡಿರುವ ಮನವಿಗೆ ಪೂರಕವಾಗಿ ಸರ್ಕಾರೇತರ ಸಂಸ್ಥೆ ಪಬ್ಲಿಕ್‌ ಪಾಲಿಸಿ ಅಡ್ವೊಕೇಟ್ಸ್‌ ವಕೀಲರಾದ ಅಸ್ಥಾ ಶರ್ಮಾ ಅವರ ಮೂಲಕ ಮನವಿ ಸಲ್ಲಿಸಲಾಗಿದೆ.

ಕೋವಿಡ್‌ ದುರಂತದ ಹಿನ್ನೆಲೆಯಲ್ಲಿ ಕೋವಿಡ್‌ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳಿಗೆ ಜಿಎಸ್‌ಟಿ ವಿನಾಯಿತಿ ನೀಡುವ ಸಂಬಂಧ ಕೇಂದ್ರೀಯ ಜಿಎಸ್‌ಟಿ ಕಾಯಿದೆ 2017ರ ಸೆಕ್ಷನ್‌ 11ರ ಅಡಿ ತನಗಿರುವ ಅಧಿಕಾರ ಚಲಾಯಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಲು ಮನವಿ ಮಾಡಲಾಗಿದೆ.

"ಸರಕು ಮತ್ತು ಸೇವಾ ತೆರಿಗೆ ಒಕ್ಕೂಟದ ಶಿಫಾರಸ್ಸಿನ ಮೇರೆಗೆ ಅದು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಅಗತ್ಯ ಎಂದಾದರೆ ಸರಕು ಅಥವಾ ಸೇವೆ ಅಥವಾ ಈ ಎರಡರ ಮೇಲಿನ ತೆರಿಗೆ ರದ್ದು ಮಾಡುವ ಅಧಿಕಾರವನ್ನು ಕಾಯಿದೆಯಲ್ಲಿ ಕೇಂದ್ರ ಸರ್ಕಾರಕ್ಕೆ ಕಲ್ಪಿಸಲಾಗಿದೆ. ಸದ್ಯದ ಪರಿಸ್ಥಿತಿಯು ಗಂಭೀರವಾಗಿದ್ದು, ಸಾರ್ವಜನಿಕರ ಒಳಿತಿಗೆ ಅದಕ್ಕೆ ವಿನಾಯಿತಿ ನೀಡುವ ಮೂಲಕ ಕಲ್ಯಾಣ ರಾಜ್ಯದ ಬದ್ಧತೆ ಉಳಿಸಿಕೊಳ್ಳುವುದು ಆ ಮೂಲಕ ರಾಜ್ಯ ನಿರ್ದೇಶಕ ತತ್ವಗಳ ಭಾಗವಾದ ಸಾರ್ವಜನಿಕ ಆರೋಗ್ಯದ ಗುಣಮಟ್ಟವನ್ನು ಹೆಚ್ಚಿಸಬೇಕಿದೆ” ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಜಿಎಸ್‌ಟಿ ಸಮಿತಿಗೆ ಸಭೆ ನಡೆಸುವಂತೆ ಸೂಚಿಸುವ ಮೂಲಕ ಕಾಯಿದೆ ಸೆಕ್ಷನ್‌ 11ರಲ್ಲಿ ಉಲ್ಲೇಖಿಸಿರುವಂತೆ ಸಮಾಲೋಚನೆ ನಡೆಸಲು ನಿರ್ದೇಶಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

“ಕೋವಿಡ್‌ ಸಂಬಂಧಿತ ರೆಮ್‌ಡಿಸಿವಿರ್‌, ಟೋಸಿಲಿಜುಮಾಬ್, ಫಾವಿಪಿರಾವಿರ್‌ ಮಾತ್ರವಲ್ಲದೇ ಅದರ ಸಂಬಂಧಿ ಔಷಧಗಳು, ವೆಂಟಿಲೇಟರ್‌ ಮತ್ತು ಬಿಪಾಪ್ ಯಂತ್ರಗಳು, ಸೋಂಕು ನಿಯಂತ್ರಿಸಲು ಬಳಸುವ ವೈದ್ಯಕೀಯ ಚಿಕಿತ್ಸೆ, ನಿಯಂತ್ರಣ ಕ್ರಮಗಳು ಮತ್ತು ಪೂರಕ ವ್ಯವಸ್ಥೆಯ ಜೊತೆಗೆ ವೈದ್ಯಕೀಯ ಗ್ರೇಡ್‌ ಆಮ್ಲಜನಕ, ಆಮ್ಲಜನಕ ಉಪಕರಣ ಇತ್ಯಾದಿಗಳಿಗೆ ಜಿಎಸ್‌ಟಿ ವಿನಾಯಿತಿ ಕಲ್ಪಿಸುವ ಸಂಬಂಧ ತುರ್ತಾಗಿ ಸಭೆ ನಡೆಸಲು ಎರಡನೇ ಜಿಎಸ್‌ಟಿ ಸಮಿತಿಗೆ ನಿರ್ದೇಶಿಸಬೇಕು” ಎಂದು ಮನವಿಯಲ್ಲಿ ಕೋರಲಾಗಿದೆ.

Also Read
ಕೋವಿಡ್ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ವಿನಾಯಿತಿ ಕೋರಿ ಮನವಿ; ರಾಜ್ಯ ಸರ್ಕಾರ, ಬಿಬಿಎಂಪಿಗೆ ಹೈಕೋರ್ಟ್‌ ನೋಟಿಸ್‌

ರೆಮ್‌ಡಿಸಿವಿರ್‌ ಔಷಧಿಗೆ ಸಂಬಂಧಿಸಿದಂತೆ ಶೇ. 12ರಷ್ಟು ಜಿಎಸ್‌ಟಿ ವಿನಾಯಿತಿ ಕಲ್ಪಿಸಿದರೆ ಅದು ಇನ್ನಷ್ಟು ಅಗ್ಗವಾಗಲಿದೆ. ಕೋವಿಡ್‌ ಚಿಕಿತ್ಸೆಯಲ್ಲಿ ಅತ್ಯಂತ ಬೇಡಿಕೆಯ ಔಷಧವಾಗಿರುವ ರೆಮಿಡಿಸಿವಿರ್‌ಗೆ ಬೆಲೆ ಕಡಿಮೆಯಾಗುವುದರಿಂದ ಸಾರ್ವಜನಿಕರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದು ವಾದಿಸಲಾಗಿದೆ.

“ಸಾಂಕ್ರಾಮಿಕತೆ ಸಂದರ್ಭದಲ್ಲಿ ಆರೋಗ್ಯದ ಹಕ್ಕು ಮಹತ್ವ ಪಡೆಯುತ್ತದೆ. ತೀವ್ರವಾದ ಅನಾರೋಗ್ಯದ ಪ್ರಕರಣಗಳ ವಿರುದ್ಧ ಹೋರಾಡಲು ನಿರ್ಣಾಯಕವಾದ ಆರೋಗ್ಯ ಸೇವೆ ಮತ್ತು ಔಷಧಿಗಳ ಲಭ್ಯತೆಗೆ ಹೆಚ್ಚು ಮಹತ್ವ ನೀಡಬೇಕಿದೆ. ಇದು ಕಾಳಸಂತೆ ತಡೆಗಟ್ಟಲು, ಅಗತ್ಯ ಔಷಧಿಗಳ ಸಂಗ್ರಹಣೆ ಮತ್ತು ಇತರ ವೈದ್ಯಕೀಯ ಸಲಕರಣೆಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದಕ್ಕೆ ತಡೆಯೊಡ್ಡುತ್ತದೆ. ಇದರ ಜೊತೆಗೆ ನಾಗರಿಕರಿಗೆ ಔಷಧ ಕೈಗೆಟುಕುವ ವೆಚ್ಚದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕಿದೆ” ಎಂದು ಮನವಿಯಲ್ಲಿ ಹೇಳಲಾಗಿದೆ.

Kannada Bar & Bench
kannada.barandbench.com