ಕೋವಿಡ್ ಎರಡನೇ ಅಲೆ ಸುನಾಮಿಯಂತೆ ಇದೆ. ತಜ್ಞರ ವರದಿಗಳ ಪ್ರಕಾರ ಮೇ ತಿಂಗಳ ಮಧ್ಯಭಾಗದ ಹೊತ್ತಿಗೆ ಇದು ಪರಾಕಾಷ್ಠೆ ತಲುಪಲಿರುವುದರಿಂದ ಇನ್ನೂ ಕೆಟ್ಟದ್ದು ಕಾದಿದೆ ಎಂದು ದೆಹಲಿ ಹೈಕೋರ್ಟ್ ಶನಿವಾರ ಆತಂಕ ವ್ಯಕ್ತಪಡಿಸಿದೆ. ಹೀಗಾಗಿ ಇದನ್ನು ಎದುರಿಸಲು ಕೇಂದ್ರ ಮತ್ತು ದೆಹಲಿ ಸರ್ಕಾರ ಹೇಗೆ ಸಿದ್ಧಗೊಂಡಿವೆ ಎಂದು ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರಿದ್ದ ಪೀಠ ಪ್ರಶ್ನಿಸಿದೆ.
“ಐಐಟಿ ದೆಹಲಿ ಪ್ರಕಾರ ಮಧ್ಯಭಾಗದಲ್ಲಿ ಸಾಂಕ್ರಾಮಿಕ ಪರಾಕಾಷ್ಠೆ ತಲುಪಲಿದೆ. ಇದು ಸುನಾಮಿ. ಸಾಮರ್ಥ್ಯ ಹೆಚ್ಚಿಸಲು, ತಕ್ಷಣ ಸ್ಪಂದಿಸಲು ಹೇಗೆ ಹೇಗೆ ಸಿದ್ಧತೆ ಮಾಡಿಕೊಂಡಿದ್ದೇವೆ? ಈ ರೋಗದಿಂದ ಸಾಯುವವರ ಸಂಖ್ಯೆ ಅಲ್ಪ ಪ್ರಮಾಣದ್ದು ಎಂದು ನಮಗೆ ತಿಳಿದಿದೆ. ಕೆಲವರು ಸಾಂದರ್ಭಿಕವಾಗಿ ಮೃತಪಡುತ್ತಾರೆ. ಎಲ್ಲಿ ಜನರನ್ನು ಉಳಿಸಿಕೊಳ್ಳಬಹುದಿತ್ತೋ ಅಲ್ಲಿ ಅವರನ್ನು ಕಳೆದುಕೊಳ್ಳುತ್ತಿದ್ದೇವೆ ಎನ್ನುವುದು ಉತ್ತಮ ಸಂಗತಿಯೇನೂ ಅಲ್ಲ. ಯಾರನ್ನು ಉಳಿಸಲು ಸಾಧ್ಯವೋ ಅವರನ್ನು ಸಾವಿನ ದವಡೆಯಿಂದ ಕಾಪಾಡುವುದು ನಮ್ಮ ಹೊಣೆ” ಎಂದು ನ್ಯಾಯಾಲಯ ಹೇಳಿದೆ.
ಪ್ರಸ್ತುತ ಅಲೆ ಇನ್ನೂ ಪರಾಕಾಷ್ಠೆಗೆ ತಲುಪಿಲ್ಲ ಎಂದು ತಜ್ಞರು ಹೇಳುತ್ತಿರುವುದರಿಂದ ಸಂಪನ್ಮೂಲ ವರ್ಧನೆ ಅಂದರೆ ಹಾಸಿಗೆ, ಔಷಧ, ವೈದ್ಯರು, ಅರೆವೈದ್ಯರು ಇತ್ಯಾದಿಗಳ ಬಗ್ಗೆ ಗಮನ ಹರಿಸುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಗಳಿಗೆ ಅದು ಸೂಚಿಸಿತು. ಈ ಹಂತದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಇದರ ಬಗ್ಗೆ ಸರ್ಕಾರಕ್ಕೆ ಅರಿವಿದೆ ಎಂದು ತಿಳಿಸಿದರು. ಸಾಧ್ಯವಾದ ಕಡೆಗಳಿಂದೆಲ್ಲಾ ಐವತ್ತು ಸಾವಿರ ಮೆಟ್ರಿಕ್ ಟನ್ ಆಮ್ಲಜನಕ ಆಮದು ಮಾಡಿಕೊಳ್ಳಲಾಗಿದೆ. ಆಮ್ಲಜನಕದ ಉತ್ಪಾದನೆಗೆ ಆದ್ಯತೆ ನೀಡಲಾಗಿದೆ ಎಂದರು.
ಕೋವಿಡ್ ರೋಗಿಗಳಿಗೆ ಆಮ್ಲಜನಕ ಕೊರತೆ ಮತ್ತು ಜೀವಹಾನಿ ಸಂಭವಿಸದಂತೆ ನೋಡಿಕೊಳ್ಳಲು ನಿರ್ದೇಶಿಸುವಂತೆ ಕೋರಿ ದೆಹಲಿಯ ಕೆಲ ಆಸ್ಪತ್ರೆಗಳು ಸಲ್ಲಿಸಿದ ಕೆಲ ಅರ್ಜಿಗಳನ್ನು ಕೂಡ ನ್ಯಾಯಾಲಯ ಈ ಸಂದರ್ಭದಲ್ಲಿ ವಿಚಾರಣೆ ನಡೆಸಿತು. ವಾದಗಳನ್ನು ಆಲಿಸಿದ ನ್ಯಾಯಾಲಯ ಆಮ್ಲಜನಕ ಸಾಗಣೆಗೆ ಟ್ಯಾಂಕರ್‌ಗಳು ಲಭ್ಯ ಇವೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಸೂಚಿಸಿತು. ಆಮ್ಲಜನಕ ಪೂರೈಕೆ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಸಮನ್ವಯದಿಂದ ಕಾರ್ಯ ನಿರ್ವಹಿಸುವುದನ್ನು ನಾವು ನಿರೀಕ್ಷಿಸುತ್ತೇವೆ ಎಂದು ಪೀಠ ಹೇಳಿತು.
ಇದಲ್ಲದೆ, ಎಲ್ಲಾ ಆಮ್ಲಜನಕ ಪೂರೈಕೆದಾರರು ಮತ್ತು ಮರು ಭರ್ತಿ ಮಾಡುವ ಕೇಂದ್ರಗಳು ದೆಹಲಿ ನೋಡಲ್ ಕಚೇರಿಗೆ ತಮ್ಮ ಸೇವೆಗಳ ಸಂಪೂರ್ಣ ವಿವರ ನೀಡುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಆಮ್ಲಜನಕ ಕೊರತೆ ಎದುರಿಸುತ್ತಿರುವ ಆಸ್ಪತ್ರೆಗಳಿಗೆ ಭದ್ರತೆ ಅಗತ್ಯವಿದ್ದರೆ ಅದನ್ನು ದೆಹಲಿ ಪೊಲೀಸರು ಒದಗಿಸಲಿದ್ದಾರೆ ಎಂದು ಅದು ಹೇಳಿದೆ.
ಮುಂದಿನ ವಿಚಾರಣೆ ಏಪ್ರಿಲ್ 26ಕ್ಕೆ ನಿಗದಿಯಾಗಿದೆ.