ಕೋವಿಡ್ ಸಾಂಕ್ರಾಮಿಕತೆಯ ನಡುವೆಯೇ ಏಪ್ರಿಲ್ 27ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡಲು ಕೋರಿ ಸಲ್ಲಿಸಲಾಗಿದ್ದ ಎರಡು ಮಧ್ಯಂತರ ಪ್ರವೇಶ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ಸಾಂವಿಧಾನಿಕ ಅಧಿಕಾರದ ಅಡಿ ನಡೆಸಬೇಕಾದ ಮುನಿಸಿಪಲ್ ಕಾರ್ಪೊರೇಷನ್ ಚುನಾವಣೆಗಳನ್ನು ನಡೆಸದೆ ಇರುವ ಬಗ್ಗೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಪ್ರಕರಣದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಹಾಗೂ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠವು ಚುನಾವಣೆ ಮುಂದೂಡಿಕೆಗೆ ಮನವಿ ಮಾಡಿ ಸಲ್ಲಿಸಿದ್ದ ಮಧ್ಯಂತರ ಪ್ರವೇಶ ಅರ್ಜಿಗಳನ್ನು ತಿರಸ್ಕರಿಸಿ ಆದೇಶಿಸಿತು.
“ಮಧ್ಯಪ್ರವೇಶಕಾರರು ಹತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಮುಂದೂಡುವಂತೆ ಗಂಭೀರ ಪರಿಹಾರ ಕೋರಿದ್ದಾರೆ. ಕಾನೂನಿನ ಯಾವ ನಿಬಂಧನೆಗಳಡಿ ತಡೆಯಾಜ್ಞೆಯ ಪರಿಹಾರವನ್ನು ಮಧ್ಯಪ್ರವೇಶಕಾರರು ಕೋರುತ್ತಿದ್ದಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ನಾವು ವಿಫಲರಾಗಿದ್ದೇವೆ, “ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಚುನಾವಣೆಗಳನ್ನು ಮುಂದೂಡುವಂತಹ ವಿಪರೀತ ಪರಿಸ್ಥಿತಿ ಇದೆಯೇ ಎನ್ನುವ ಬಗ್ಗೆ ನಿರ್ಧರಿಸುವ ಅಧಿಕಾರ ಚುನಾವಣಾ ಆಯೋಗದ ವ್ಯಾಪ್ತಿಗೆ ಒಳಪಟ್ಟದ್ದು ಎಂದ ಪೀಠವು, “ಕೋವಿಡ್ ಮೊದಲನೆಯ ಅಲೆಯ ಸಂದರ್ಭದಲ್ಲಿ ವಿಧಾನಸಭಾ ಚುನಾವಣೆಗಳೇ ನಡೆದಿವೆ ಎಂದರೆ ಈಗೇಕೆ ಸಾಧ್ಯವಿಲ್ಲ?” ಎಂದು ಅಭಿಪ್ರಾಯಪಟ್ಟಿತು.