ಉತ್ತರ ಪ್ರದೇಶದಲ್ಲಿ ಕೋವಿಡ್ ಸಂಖ್ಯೆ ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ವಯೋಮಾನದ ನಾಗರಿಕರಿಗೆ ಮನೆ ಬಾಗಿಲಿಗೆ ಲಸಿಕೆ ತಲುಪಿಸುವ ಸಂಬಂಧ ಯೋಜನೆ ರೂಪಿಸುವಂತೆ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರಕ್ಕೆ ಅಲಾಹಾಬಾದ್ ಹೈಕೋರ್ಟ್ ಮಂಗಳವಾರ ಸಲಹೆ ನೀಡಿದೆ.
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದಕ್ಕೆ ಮುಖ್ಯ ನ್ಯಾಯಮೂರ್ತಿ ಗೋವಿಂದ ಮಾಥೂರ್ ಮತ್ತು ನ್ಯಾ. ಸಿದ್ಧಾರ್ಥ ವರ್ಮಾ ಅವರಿದ್ದ ವಿಭಾಗೀಯ ಪೀಠ ಆತಂಕ ವ್ಯಕ್ತಪಡಿಸಿದ್ದು, 45 ವರ್ಷ ಮೇಲ್ಪಟ್ಟವರು ಮಾತ್ರವಲ್ಲದೇ ಎಲ್ಲಾ ನಾಗರಿಕರಿಗೂ ಲಸಿಕೆ ಕೊಡಿಸಲು ಮುಂದಾಗುವಂತೆ ಸರ್ಕಾರಕ್ಕೆ ಸೂಚಿಸಿದೆ.
“45 ವರ್ಷ ಮೇಲ್ಪಟ್ಟವರಿಗೆ ಮಾತ್ರವಲ್ಲದೇ ಎಲ್ಲಾ ವಯೋಮಾನದವರಿಗೂ ಲಸಿಕೆ ನೀಡುವ ಕಾರ್ಯಸಾಧ್ಯತೆಯ ಬಗ್ಗೆ ಸರ್ಕಾರವನ್ನು ಪ್ರಶ್ನಿಸುವುದು ಸೂಕ್ತ ಎಂದು ನಾವು ಭಾವಿಸುತ್ತೇವೆ. ಉತ್ತರ ಪ್ರದೇಶ ಪ್ರೌಢಶಾಲೆ ಮತ್ತು ಮಧ್ಯಂತರ ಪರೀಕ್ಷೆಗಳಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವುದರ ಬಗ್ಗೆಯೂ ಸರ್ಕಾರ ಪರಿಶೀಲಿಸಬೇಕು. ಮನೆ ಬಾಗಿಲಿಗೆ ತೆರಳಿ ಲಸಿಕೆ ನೀಡುವ ಯೋಜನೆಯನ್ನು ರೂಪಿಸಬೇಕು. ಸಂಜೆ ವೇಳೆಯಲ್ಲಿ ಹೆಚ್ಚಿನ ಸಂದಣಿ ತಡೆಯುವ ನಿಟ್ಟಿನಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸುವ ಸಾಧ್ಯತೆಯನ್ನು ಪರಿಶೀಲಿಸಬೇಕು” ಎಂದು ಆದೇಶದಲ್ಲಿ ತಿಳಿಸಿದೆ.
ಕೋವಿಡ್ ಎರಡನೇ ಅಲೆಯನ್ನು ತಪ್ಪಿಸಲು ರಾಜ್ಯ ಸರ್ಕಾರವು ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದಿರುವ ನ್ಯಾಯಾಲಯವು “ಹೆಚ್ಚಾಗಿ ಜನರು ಸೇರುವ ಕಡೆ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿಲ್ಲ. ಇದು ಆತಂಕಕ್ಕೆ ಕಾರಣ” ಎಂದಿದೆ. ಕೋವಿಡ್ ಶಿಷ್ಟಾಚಾರಗಳ ಕುರಿತು ಸಾಮಾನ್ಯ ಜನರು ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕಿದೆ ಎಂದು ನ್ಯಾಯಾಲಯ ಹೇಳಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ದಂಡಾಧಿಕಾರಿಗಳಿಗೆ ಕೆಳಗಿನ ನಿರ್ದೇಶನಗಳನ್ನು ನ್ಯಾಯಾಲಯ ನೀಡಿದೆ. ಅವು ಇಂತಿವೆ:
ಪೊಲೀಸ್ ಅಧಿಕಾರಿಗಳೂ ಸೇರಿದಂತೆ ಇಡೀ ಜಿಲ್ಲಾಡಳಿತವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜನರು ಮಾಸ್ಕ್ ಧರಿಸುತ್ತಾರೆ ಎಂಬುದನ್ನು ಖಾತರಿಪಡಿಸಬೇಕು. ಇದಕ್ಕಾಗಿ ಪೊಲೀಸ್ ಮಹಾನಿರ್ದೇಶಕರು ತಮ್ಮ ಮಟ್ಟದಲ್ಲಿ ಯೋಜನೆ ರೂಪಿಸಬೇಕು.
ರಾಜ್ಯದ ಯಾವುದೇ ಪ್ರದೇಶದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ನೆರೆಯದಂತೆ ಪೊಲೀಸರನ್ನು ಒಳಗೊಂಡ ಜಿಲ್ಲಾಡಳಿತ ಎಚ್ಚರವಹಿಸಬೇಕು. ಯಾವುದಾದರೂ ಪ್ರದೇಶದಲ್ಲಿ ಜನಸಂದಣಿ ಕಂಡುಬರುತ್ತದೆ ಎನ್ನುವುದಾದರೆ ಆ ಪ್ರದೇಶವನ್ನು ಪೊಲೀಸರು ಸುತ್ತುವರಿಯಬೇಕು.
ಹೆಚ್ಚಿನ ಸಂಖ್ಯೆಯಲ್ಲಿ ಜನರು ಒಗ್ಗೂಡುವುದನ್ನು ನಿಯಂತ್ರಿಸಿಯೇ ಪಂಚಾಯಿತಿ ಚುನಾವಣೆಗಳನ್ನು ನಡೆಸಬೇಕು. ಉಮೇದುವಾರಿಕೆ ಸಲ್ಲಿಕೆ, ಪ್ರಚಾರ ಅಥವಾ ಮತದಾನದ ಸಂದರ್ಭದಲ್ಲೂ ಕೋವಿಡ್ ಶಿಷ್ಟಾಚಾರ ಪಾಲಿಸುವುದನ್ನು ಕಡ್ಡಾಯಗೊಳಿಸಬೇಕು ಎಂದಿರುವ ನ್ಯಾಯಾಲಯವು ಏಪ್ರಿಲ್ 8ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುವುದಾಗಿ ತಿಳಿಸಿದೆ.