ಕೋವಿಡ್ ಹಿನ್ನೆಲೆ: ನಾಳೆಯಿಂದ 2 ವಾರಗಳ ಕಾಲ ವರ್ಚುವಲ್ ವಿಧಾನದ ಮೂಲಕ ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್

ಚಳಿಗಾಲದ ರಜೆ ಬಳಿಕ ನಾಳೆಯಿಂದ ಸುಪ್ರೀಂಕೋರ್ಟ್ ಕಾರ್ಯಾರಂಭ ಮಾಡಬೇಕಿತ್ತು.
ಕೋವಿಡ್ ಹಿನ್ನೆಲೆ: ನಾಳೆಯಿಂದ 2 ವಾರಗಳ ಕಾಲ ವರ್ಚುವಲ್ ವಿಧಾನದ ಮೂಲಕ ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್
Published on

ಕೋವಿಡ್‌ ಹಿನ್ನೆಲೆಯಲ್ಲಿ ನಾಳೆಯಿಂದ (ಜನವರಿ 3) ಎರಡು ವಾರಗಳವರೆಗೆ ವರ್ಚುವಲ್‌ ವಿಧಾನದಲ್ಲಿ ಪ್ರಕರಣಗಳ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ ನಿರ್ಧರಿಸಿದೆ. ಈ ಸಂಬಂಧ ಸರ್ವೋಚ್ಚ ನ್ಯಾಯಾಲಯ ಇಂದು (ಭಾನುವಾರ) ಸುತ್ತೋಲೆ ಹೊರಡಿಸಿದೆ.

ಚಳಿಗಾಲದ ರಜೆ ಬಳಿಕ ನಾಳೆಯಿಂದ ಸುಪ್ರೀಂಕೋರ್ಟ್‌ ಕಾರ್ಯಾರಂಭ ಮಾಡಬೇಕಿತ್ತು. ಪ್ರಸ್ತುತ ದೆಹಲಿಯಲ್ಲಿ 8,397 ಸಕ್ರಿಯ ಕೋವಿಡ್‌ ಪ್ರಕರಣಗಳು ಕಂಡುಬಂದಿದ್ದು ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವರ್ಚುವಲ್‌ ವಿಧಾನದ ಮೂಲಕ ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯ ನಿರ್ಧರಿಸಿದೆ.

Also Read
ವರ್ಚುವಲ್‌ ವಿಚಾರಣೆ ವೇಳೆ ಮಹಿಳೆ ಜೊತೆ ಚಕ್ಕಂದ: ತಮಿಳುನಾಡು ವಕೀಲರ ಪರಿಷತ್‌ನಿಂದ ಆರೋಪಿ ವಕೀಲ ವಜಾ

ಅಕ್ಟೋಬರ್ 7, 2021ರಂದು ಹೊರಡಿಸಲಾಗಿದ್ದ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವನ್ನು (ಎಸ್‌ಒಪಿ) ಮಾರ್ಪಡಿಸಿ ಭಾನುವಾರ ಸುತ್ತೋಲೆ ಹೊರಡಿಸಲಾಗಿದೆ. ಹಿಂದಿನ ಎಸ್‌ಒಪಿ ಪ್ರಕಾರ ಸೋಮವಾರ ಮತ್ತು ಶುಕ್ರವಾರ ಮಾತ್ರ ವರ್ಚುವಲ್‌ ವಿಚಾರಣೆ ನಡೆಯುತ್ತಿತ್ತು. ಭೌತಿಕ ಹಾಗೂ ವರ್ಚುವಲ್‌ ವಿಧಾನದ ವಿಚಾರಣೆಗೆ ಅವಕಾಶ ಕಲ್ಪಿಸುವ ಹೈಬ್ರಿಡ್‌ ವಿಚಾರಣೆಗಳು ಮಂಗಳವಾರ, ಬುಧವಾರ ಹಾಗೂ ಗುರುವಾರದಂದು ನಡೆಯುತ್ತಿದ್ದವು.

ಕೋವಿಡ್‌ ಪ್ರಕರಣಗಳ ಹೆಚ್ಚಳ ಹಾಗೂ ಕೋವಿಡ್‌ನ ರೂಪಾಂತರಿ ವೈರಸ್‌ ಒಮಿಕ್ರಾನ್‌ ಹರಡುತ್ತಿರುವ ಹಿನ್ನೆಲೆಯಲ್ಲಿ, ಕಲ್ಕತ್ತಾ ಹೈಕೋರ್ಟ್ ದೆಹಲಿ ಹೈಕೋರ್ಟ್‌ ವರ್ಚುವಲ್‌ ವಿಚಾರಣೆಗೆ ಒಲವು ತೋರಿದ್ದವು. ಬಾಂಬೆ ಹೈಕೋರ್ಟ್‌ ಹೈಬ್ರಿಡ್‌ ವಿಧಾನದ ಮೂಲಕ ವಿಚಾರಣೆ ನಡೆಸಲು ನಿರ್ಧರಿಸಿತ್ತು. ಆದರೆ ಮದ್ರಾಸ್‌ ಹೈಕೋರ್ಟ್‌ ಮಾತ್ರ (ವರ್ಚುವಲ್‌ ವಿಚಾರಣೆ ವೇಳೆ ವಕೀಲರೊಬ್ಬರ ಅಸಭ್ಯ ವರ್ತನೆಯ ಹಿನ್ನೆಲೆಯಲ್ಲಿ) ಹೈಬ್ರಿಡ್‌ ವಿಧಾನ ಸ್ಥಗಿತಗೊಳಿಸಿ ಸಂಪೂರ್ಣ ಭೌತಿಕ ವಿಚಾರಣೆಗೆ ಬದಲಾಗಲು ಕೆಲ ದಿನಗಳ ಹಿಂದೆ ನಿರ್ಧರಿಸಿತ್ತು. ಇತ್ತ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಎಲ್ಲಾ ಪೀಠಗಳು ಕೂಡ ನಾಳೆಯಿಂದ ಈ ತಿಂಗಳ 31ರವರೆಗೆ ವರ್ಚುವಲ್ ವಿಧಾನದಲ್ಲಿ ಕಾರ್ಯ ನಿರ್ವಹಿಸಲಿವೆ.

Kannada Bar & Bench
kannada.barandbench.com