ಕೋವಿಡ್ ಹೊಡೆತದಿಂದ ಸುಧಾರಿಸಿಕೊಳ್ಳಲು ವರ್ಷಗಟ್ಟಲೇ ಸಮಯ ಬೇಕಿದೆ: ಯುವ ವಕೀಲೆ ಪ್ರಭಾವತಿ ಗೂಗಲ್‌

“ಕೊರೊನಾ ಎಲ್ಲವನ್ನೂ ನಾಶ ಮಾಡಿಬಿಟ್ಟಿದೆ. ಪತಿಯ ಆದಾಯ ಮೂಲ ಸರಿಯಾಗಿದ್ದವರಿಗೆ ಅಷ್ಟೇನು ಸಮಸ್ಯೆಯಾಗಿಲ್ಲ. ಉಳಿದವರು ಸಣ್ಣಪುಟ್ಟ ವೈಯಕ್ತಿಕ ಖರ್ಚುಗಳಿಗೂ ಸರ್ಕಸ್ ಮಾಡಬೇಕಾದ ಸ್ಥಿತಿ ಇದೆ.”
Prabhavati S Gugal
Prabhavati S Gugal

ಪ್ರತಿಷ್ಠೆ, ಕೀರ್ತಿ, ಹಣ ಸಂಪಾದನೆ, ಸಮಾಜದಲ್ಲಿ ಉತ್ತಮ ಬದುಕು ರೂಪಿಸಿಕೊಳ್ಳುವುದು ಹೀಗೆ ನಾನಾ ಕಾರಣಗಳಿಗೆ ಜನರು ವಿಭಿನ್ನ ಉದ್ಯೋಗಗಳಿಗೆ ಬೆನ್ನತ್ತುವುದು ಸಾಮಾನ್ಯ. ಉದ್ಯೋಗದ ಜೊತೆಜೊತೆಗೇ ಸಾಮಾಜಿಕ ಕಳಕಳಿ, ನೊಂದವರಿಗೆ ನೆರವಾಗುವ ಉದ್ದೇಶಗಳನ್ನು ಇಟ್ಟುಕೊಳ್ಳುವವರ ಸಂಖ್ಯೆ ವಿರಳವಾಗುತ್ತಿರುವ ಈ ದಿನಮಾನಗಳಲ್ಲಿ ಧಾರವಾಡದ ಯುವ ವಕೀಲೆ ಪ್ರಭಾವತಿ ಎಸ್‌ ಗೂಗಲ್‌‌‌ ಅವರು ಮಹಿಳಾ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಕಂಡು ವಕೀಲೆಯಾದವರು.

ವಿದ್ಯಾರ್ಥಿ ದಿಸೆಯಲ್ಲಿಯೇ ಸರ್ಕಾರೇತರ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಾ ಮಹಿಳೆಯರ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲಾರಂಭಿಸಿದ್ದ ಅವರು ಕಾನೂನಾತ್ಮಕ ಹೋರಾಟದ ಅನಿವಾರ್ಯತೆಯನ್ನು ಮನಗಂಡಿದ್ದರು. ಈ ಸಮಸ್ಯೆಗಳಿಗೆ ತನ್ನ ಮಿತಿಯಲ್ಲಿ ನೆರವಾಗಲು ವಕೀಲಿಕೆ ಆಯ್ದುಕೊಂಡಿದ್ದಾಗಿ ಹೇಳುವ ಅವರು ಕೋವಿಡ್‌ ಸಂದರ್ಭದಲ್ಲಿ ಮಹಿಳಾ ವಕೀಲೆಯರ ಬದುಕು-ಬವಣೆಯ ಕುರಿತು “ಬಾರ್‌ ಅಂಡ್‌ ಬೆಂಚ್‌” ಜೊತೆ ವಿವರವಾಗಿ ಮಾತನಾಡಿದ್ದಾರೆ.

Q

ಕೋವಿಡ್‌ನಿಂದಾಗಿ ವಕೀಲೆಯರ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು ಏನು?

A

ಕೊರೊನಾದಿಂದ ಆರ್ಥಿಕ ತೊಂದರೆ ಆಗಿರುವುದು ಒಂದೆಡೆಯಾದರೆ ಇಡೀ ಕುಟುಂಬದ ಜವಾಬ್ದಾರಿ ನಮ್ಮ ಮೇಲೆಯೇ ಬಿದ್ದಿದೆ. ವಕೀಲಿಕೆಯ ಸಂಪರ್ಕ ಬಹುತೇಕ ಕಡಿತವಾಗಿದೆ. ಗ್ರಾಮೀಣ ಭಾಗದವರು ಮತ್ತು ಅವಿವಾಹಿತ ವಕೀಲೆಯರಿಗೆ ಹೇಳಿಕೊಳ್ಳಲಾಗದ ಸಾಕಷ್ಟು ಸಮಸ್ಯೆ ಎದುರಾಗಿವೆ. ಇವರಲ್ಲಿ ಬಹುತೇಕರು ಹಿರಿಯ ವಕೀಲರನ್ನು ಅವಲಂಬಿಸಿದ್ದರು. ಎಲ್ಲಾ ಚಟುವಟಿಕೆಗಳು ನಿಶ್ಚಲವಾಗಿರುವಾಗ ಹಿರಿಯ ವಕೀಲರಾದರೂ ಕಿರಿಯರತ್ತ ಮುಖ ಮಾಡುವುದು ಹೇಗೆ? ನನಗೆ ಗೊತ್ತಿರುವ ಮೂರ್ನಾಲ್ಕು ವಕೀಲೆಯರು ದೈನಂದಿನ ಖರ್ಚು-ವೆಚ್ಚಗಳನ್ನು ಭರಿಸಲಾಗದೇ ಧಾರವಾಡದಲ್ಲಿ ನೆಲೆಸಿದ್ದ ಮನೆಗಳನ್ನು ಖಾಲಿ ಮಾಡಿಕೊಂಡು ಊರಿಗೆ ತೆರಳಿದ್ದಾರೆ. ವಕೀಲರ ವೃತ್ತಿಯಲ್ಲಿ ಸಾಮಾನ್ಯವಾಗಿ ಮೊದಲ 4-5 ವರ್ಷಗಳಲ್ಲಿ ಹೆಚ್ಚಿನ ಆದಾಯ ಇರುವುದಿಲ್ಲ. ಕೆಲವೊಮ್ಮೆ ಫೋನ್‌ಗೆ ಕರೆನ್ಸಿ ಹಾಕಿಸುವಷ್ಟು ಹಣ ಸಿಕ್ಕರೆ ಅದೇ ಹೆಚ್ಚು. ಕೊರೊನಾ ಎಲ್ಲವನ್ನೂ ನಾಶ ಮಾಡಿಬಿಟ್ಟಿದೆ. ಪತಿಯ ಆದಾಯ ಮೂಲ ಸರಿಯಾಗಿದ್ದವರಿಗೆ ಅಷ್ಟೇನು ಸಮಸ್ಯೆಯಾಗಿಲ್ಲ. ಉಳಿದವರು ಸಣ್ಣಪುಟ್ಟ ವೈಯಕ್ತಿಕ ಖರ್ಚುಗಳಿಗೂ ಸರ್ಕಸ್‌ ಮಾಡಬೇಕಾದ ಸ್ಥಿತಿ ಇದೆ. ನನಗೆ ಗೊತ್ತಿದ್ದ ನಾಲ್ಕೈದು ಪುರುಷ ವಕೀಲರು ಕೊರೊನಾ ಸಂದರ್ಭದಲ್ಲಿ ತೀರಿಕೊಂಡರು. ಮಾನಸಿಕ ಒತ್ತಡ, ಕೌಟುಂಬಿಕ ಸಮಸ್ಯೆಗಳೂ ಸಾವಿಗೆ ಕಾರಣವಾಗಿರಬಹುದು ಎಂಬುದು ನನ್ನ ದೃಢ ನಂಬಿಕೆ.

Q

ಕೋವಿಡ್ ಹಿನ್ನೆಲೆಯಲ್ಲಿ ವಕೀಲರ ಸಂಘದಿಂದ ಯಾವ ತೆರನಾದ ನೆರವು ದೊರೆತಿದೆ?

A

ಕೆಲವು ದಾನಿಗಳ ನೆರವು ಪಡೆದು ಧಾರವಾಡ ಜಿಲ್ಲಾ ವಕೀಲರ ಸಂಘವು ಅಗತ್ಯವಿರುವವರಿಗೆ ಆಹಾರದ ಕಿಟ್‌ಗಳನ್ನು ವಿತರಿಸಿದೆ. ನಾನೂ ಒಮ್ಮೆ ಆಹಾರದ ಕಿಟ್‌ ಪಡೆದುಕೊಂಡಿದ್ದೇನೆ. 2010ರಿಂದ ಮುಂದಕ್ಕೆ ವಕೀಲಿಕೆ ನೋಂದಣಿ ಮಾಡಿಸಿರುವ ಕೆಲವರಿಗೆ ತಲಾ 5,000 ರೂಪಾಯಿಯನ್ನು ನೆರವಿನ ರೂಪದಲ್ಲಿ ನೀಡಿದ್ದಾರೆ. ನಾನೂ ಅದರ ಫಲಾನುಭವಿ. ಆದರೆ, ಜೀವನ ನಡೆಸಲು ರೂ 5,000 ರೂಪಾಯಿ ಸಾಕಾಗುತ್ತದೆಯೇ?

Q

ಕೋವಿಡ್‌ಗೂ ಮುಂಚಿನ ಬದುಕು ಹೇಗಿತ್ತು?

A

ಕೋವಿಡ್‌ಗೂ ಮುನ್ನ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದುದರಿಂದ ಕಕ್ಷಿದಾರರೊಂದಿಗೆ ಸಂಪರ್ಕ ಸಾಧಿಸುವುದು ಸುಲಭವಾಗಿತ್ತು. ಕೋವಿಡ್‌ನಿಂದ ಎಲ್ಲವೂ ಸ್ತಬ್ಧವಾಗಿರುವುದರಿಂದ ಯಾರೂ ಸಂಪರ್ಕಿಸುತ್ತಿಲ್ಲ. ಸಣ್ಣಪುಟ್ಟ ಖರ್ಚು-ವೆಚ್ಚಗಳಿಗೂ ನಿರ್ಬಂಧ ವಿಧಿಸಿಕೊಂಡಿದ್ದೇವೆ. ನಾನಾ ಕಾರಣಗಳಿಗೆ ಕೆಲವು ವಿಚಾರಗಳನ್ನು ಹೇಳಿಕೊಳ್ಳಲು ಮನಸ್ಸಾಗುವುದಿಲ್ಲ. ಅಗತ್ಯ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಕಷ್ಟವಾಗಿಬಿಟ್ಟಿದೆ.

Q

ನೀವು ವಕೀಲರಾಗುವ ನಿರ್ಧಾರ ಮಾಡಿದ್ದೇಕೆ?

A

ಸ್ವಲ್ಪ ತಿಳಿವಳಿಕೆ ಬಂದಾಗಿನಿಂದಲೂ ವಕೀಲಿಕೆ ಎಂದರೆ ಇಷ್ಟ. ಇದರ ಜೊತೆಗೆ ವಿದ್ಯಾರ್ಥಿನಿಯಾಗಿದ್ದಾಗಲೇ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್‌) ಜೊತೆ ಕೂಡಿ ಕೆಲಸ ಮಾಡುತ್ತಿದ್ದೆ. ಎಐಎಂಎಸ್‌ಎಸ್‌ ಮಹಿಳೆಯರ ಸಮಸ್ಯೆಗಳನ್ನು ಇಟ್ಟುಕೊಂಡು ಹೋರಾಟ ಮಾಡುತ್ತಿತ್ತು. ಮಹಿಳೆಯರು ಸಾಮಾನ್ಯವಾಗಿ ಎದುರಿಸುವ ಕೌಟುಂಬಿಕ ಸಮಸ್ಯೆಗಳು, ಪುರುಷ ಪ್ರಧಾನ ಸಮಾಜದ ಧೋರಣೆಗಳು, ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆ ಎನ್ನುವ ರೀತಿಯಲ್ಲಿ ನೋಡುವುದು, ಮಹಿಳೆಯರನ್ನು ಹಿಂಬಾಲಿಸುವುದು (stalking syndrome), ಅತ್ಯಾಚಾರದ ಬಗ್ಗೆ ಸಿನಿಮಾ, ಕಾರ್ಯಾಗಾರ, ಉಪನ್ಯಾಸದ ಮೂಲಕ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಕಾನೂನಾತ್ಮಕ ಸಮಸ್ಯೆಗಳು ಉದ್ಭವಿಸುತ್ತಿದ್ದವು. ಅಂಥವರಿಗೆ ನೈತಿಕ ಬೆಂಬಲದ ಜೊತೆಗೆ ಆರ್ಥಿಕವಾಗಿ ನೆರವಾಗುವ ದೃಷ್ಟಿಯಿಂದ ವಕೀಲೆಯಾದೆ. ಧಾರವಾಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ ಪ್ಯಾನಲ್‌ ಅಡ್ವೊಕೇಟ್‌ ಆಗಿದ್ದೇನೆ. ಗಂಭೀರ ಆರ್ಥಿಕ ಸಮಸ್ಯೆ ಎದುರಿಸುತ್ತಿರುವವರಿಗೆ ನೆರವು ಕಲ್ಪಿಸುವ ಯತ್ನ ಮಾಡುತ್ತಿದ್ದೇನೆ.

Q

ವರ್ಚುವಲ್ ಕಲಾಪಗಳಿಂದ ನಿಮಗೆ ಏನಾದರೂ ಅನುಕೂಲವಾಗಿತ್ತೇ/ಆಗುತ್ತಿದೆಯೇ?

A

ವರ್ಚುವಲ್‌ ಕಲಾಪದಲ್ಲಿ ನಾನು ಭಾಗಿಯಾಗಿಲ್ಲ. ಅಂತಹ ಕಲಾಪಗಳಲ್ಲಿ ಭಾಗಿಯಾದವರ ಅನುಭವಗಳು ಸಕಾರಾತ್ಮಕವಾಗಿಲ್ಲ. ಈ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಇನ್ನೂ ಸಾಕಷ್ಟು ಕೆಲಸವಾಗಬೇಕಿದೆ.

Q

ಭೌತಿಕ ನ್ಯಾಯಾಲಯದ ಚಟುವಟಿಕೆಗಳು ಆರಂಭವಾಗಿರುವುದರಿಂದ ಸಮಸ್ಯೆ ಕಡಿಮೆಯಾಗಿದೆ ಎನಿಸುತ್ತದೆಯೇ?

A

ಭೌತಿಕ ನ್ಯಾಯಾಲಯ ಆರಂಭವಾಗಿಬಿಟ್ಟ ಮಾತ್ರಕ್ಕೆ ಸಮಸ್ಯೆ ಬಗೆಹರಿಯುವುದಿಲ್ಲ. ಕೋವಿಡ್‌ ಪರಿಸ್ಥಿತಿ ನೀಡಿರುವ ಹೊಡೆತದಿಂದ ಸುಧಾರಿಸಿಕೊಳ್ಳಲು ವರ್ಷಗಟ್ಟಲೇ ಸಮಯ ಬೇಕಿದೆ. ಎಲ್ಲಾ ವರ್ಗಗಳ ಜನರು ಸಮಸ್ಯೆಗೆ ಸಿಲುಕಿದ್ದಾರೆ. ಜನರಲ್ಲಿ ಇನ್ನೂ ಆತಂಕ ದೂರವಾಗಿಲ್ಲ. ಧಾರವಾಡದಲ್ಲಿ ನಮ್ಮ ಜಿಲ್ಲಾ ನ್ಯಾಯಾಲಯ ಖಾಲಿ ಹೊಡೆಯುತ್ತಿದೆ. ಮೊದಲಿನ ಚಟುವಟಿಕೆ ಕಾಣುತ್ತಿಲ್ಲ.

Also Read
ಅಸಹಾಯಕತೆ, ಅನಿಶ್ಚಿತತೆ, ನಿರಾಸೆ ನಮ್ಮಂತಹ ಯುವ ವಕೀಲರಲ್ಲಿ ಸಾಮಾನ್ಯವಾಗಿ ಬಿಟ್ಟಿದೆ: ಗಂಗಾಧರ್
Q

ಕೋವಿಡ್‌ ವ್ಯಾಪಿಸಿರುವ ಈ ಸಂದರ್ಭದಲ್ಲಿ ಮಹಿಳಾ ವಕೀಲರ ಸಮುದಾಯದಲ್ಲಿ ಯಾವ ತೆರನಾದ ಚರ್ಚೆ ಇದೆ?

A

ವಕೀಲರು, ಮಹಿಳಾ ವಕೀಲರು ಎಂದೇನಿಲ್ಲ. ನನಗೆ ತಿಳಿದಿರುವ ಮಟ್ಟಿಗೆ ಎಲ್ಲರಲ್ಲೂ ಆತಂಕ, ಹತಾಶೆ ಮನೆ ಮಾಡಿದೆ. ಜೀವನ ನಿರ್ವಹಣೆ ಕಷ್ಟವಾಗಿರುವುದರಿಂದ ನನಗೆ ಪರಿಚಿತರಾದ ಹಲವು ವಕೀಲರು ಹಾಗೂ ವಕೀಲೆಯರು ತಮ್ಮ ಊರುಗಳಿಗೆ ತೆರಳಿದ್ದಾರೆ. ಗೃಹ ನಿರ್ಮಾಣ ಸಾಲ ತೀರಿಸಲು, ಮಕ್ಕಳ ಶಾಲೆಯ ಫೀ ಕಟ್ಟಲು ಹಲವು ವಕೀಲೆಯರು ಶ್ರಮಪಡುತ್ತಿರುವುದನ್ನು ಕಂಡಿದ್ದೇನೆ. ಕೆಲಸ ಹುಡುಕಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ.

Q

ಕೋವಿಡ್‌ ಹೊರತಾಗಿ ನ್ಯಾಯಾಲಯಗಳಲ್ಲಿ ಮಹಿಳಾ ವಕೀಲರಿಗೆ ಮೂಲಸೌಲಭ್ಯ ಇವೆಯೇ?

A

ಕಲ್ಪಿಸಲಾಗಿರುವ ಸೌಲಭ್ಯಗಳ ಸಮರ್ಪಕ ನಿರ್ವಹಣೆಯಾಗುತ್ತಿಲ್ಲ. ಧಾರವಾಡದಲ್ಲಿ ಹೈಕೋರ್ಟ್‌ ಪೀಠ ಹಾಗೂ ಜಿಲ್ಲಾ ನ್ಯಾಯಾಲಯ ಸೇರಿ ಒಟ್ಟಾರೆ ಸುಮಾರು ೨೦೦ ಮಂದಿ ವಕೀಲೆಯರು ನೋಂದಣಿ ಮಾಡಿಸಿದ್ದಾರೆ ಎನ್ನಲಾಗುತ್ತಿದೆ. ಈ ಪೈಕಿ ಕನಿಷ್ಠ ೧೫೦ ಮಂದಿ ವಕೀಲಿಕೆಯಲ್ಲಿ ತೊಡಗಿದ್ದಾರೆ. ಜಿಲ್ಲಾ ನ್ಯಾಯಾಲಯದಲ್ಲಿ ಮಹಿಳಾ ವಕೀಲೆಯರಿಗೆ ಕನಿಷ್ಠ ದಿನಪತ್ರಿಕೆ ಓದಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿಲ್ಲ. ಪುರುಷ ವಕೀಲರು ಇರುವಲ್ಲಿಗೇ ತೆರಳಿ ಪತ್ರಿಕೆ ಓದಬೇಕಾಗಿದೆ.

Related Stories

No stories found.
Kannada Bar & Bench
kannada.barandbench.com