[ಕೋವಿಡ್ ಲಸಿಕೆ] ಖಾಸಗಿ ಆಸ್ಪತ್ರೆಗಳಲ್ಲಿ ₹1,200 ಪಾವತಿಸಿ ಲಸಿಕೆ ಪಡೆಯುವ ಸ್ಥಿತಿಯಲ್ಲಿ ಬಡವರು ಇಲ್ಲ ಎಂದ ಹೈಕೋರ್ಟ್‌

ಆರ್ಥಿಕವಾಗಿ ಸುಸ್ಥಿತಿಯಲ್ಲಿ ಇರದ 18-44 ವಯೋಮಾನದ ವ್ಯಕ್ತಿಯು ಖಾಸಗಿ ಆಸ್ಪತ್ರೆಗಳಿಂದ ಲಸಿಕೆ ಪಡೆಯಲು ಆಗದೆ ಇರಬಹುದು. ಇದು ಸಮಾನತೆ ಹಕ್ಕು ಮತ್ತು ಜೀವಿಸುವ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.
[ಕೋವಿಡ್ ಲಸಿಕೆ] ಖಾಸಗಿ ಆಸ್ಪತ್ರೆಗಳಲ್ಲಿ ₹1,200 ಪಾವತಿಸಿ ಲಸಿಕೆ ಪಡೆಯುವ ಸ್ಥಿತಿಯಲ್ಲಿ ಬಡವರು ಇಲ್ಲ ಎಂದ ಹೈಕೋರ್ಟ್‌
Karnataka High Court, Vaccination

ರಾಜ್ಯದ 18-44 ವಯೋಮಾನದವರು 1,000 ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ತೆತ್ತು ಖಾಸಗಿ ಆಸ್ಪತ್ರೆಗಳಿಂದ ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿರುವ ಸದ್ಯದ ಲಸಿಕಾ ನೀತಿಯಿಂದ ಬಡವರಿಗೆ ಸಮಸ್ಯೆಯಾಗಬಹುದು. ಇದು ಸಂವಿಧಾನದ 14 ಮತ್ತು 21ನೇ ವಿಧಿಯ ಉಲ್ಲಂಘನೆಯಾಗಲಿದೆ ಎಂದು ಮಂಗಳವಾರ ಕರ್ನಾಟಕ ಹೈಕೋರ್ಟ್‌ ಹೇಳಿದೆ.

ರಾಜ್ಯ ಸರ್ಕಾರವು ಈಗ ಎರಡನೇ ಡೋಸ್‌ ನೀಡಲು ಮಾತ್ರ ನಿರ್ಧರಿಸಿರುವುದರಿಂದ 18-44 ವಯೋಮಾನದವರು ಖಾಸಗಿ ಆಸ್ಪತ್ರೆಗಳಲ್ಲಿ ಮೊದಲ ಡೋಸ್‌ ಪಡೆಯಬಹುದು ಎಂಬ ವಿಚಾರವನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರಿದ್ದ ವಿಭಾಗೀಯ ಪೀಠದ ಗಮನಿಸಿತು. ಈ ವೇಳೆ ನ್ಯಾಯಾಲಯವು ಮೇಲಿನಂತೆ ಹೇಳಿತು.

“ರಾಜ್ಯದಲ್ಲಿ 18-44 ವಯೋಮಾನದವರಿಗೆ ಮೊದಲೇ ಡೋಸ್‌ ನೀಡಲಾಗುತ್ತಿಲ್ಲ. ಆದರೆ ಅವರು ಖಾಸಗಿ ಆಸ್ಪತ್ರೆಗಳಲ್ಲಿ ಮೊದಲ ಡೋಸ್‌ ಪಡೆಯಬಹುದಾಗಿದೆ. ಹಣ ತೆತ್ತು ಜನರು ಲಸಿಕೆ ಪಡೆಯಬಹುದಾಗಿದೆ. ಪರಿಸ್ಥಿತಿ ಹೀಗಿರುವಾಗ ಕೇಂದ್ರ ಸರ್ಕಾರ ಮೌನವಾಗಿ ಉಳಿಯಬಹುದೇ” ಎಂದು ಪೀಠ ಪ್ರಶ್ನಿಸಿತು.

“ಕೊಳೆಗೇರಿ ಮತ್ತಿತರ ಪ್ರದೇಶಗಳಲ್ಲಿ ನೆಲೆಸಿರುವ ಜನರಿಗೆ ಲಸಿಕೆ ಅಗತ್ಯವಿದ್ದು, 1,200 ರೂಪಾಯಿ ಪಾವತಿಸಿ ಅವರು ಲಸಿಕೆ ಪಡೆಯುವ ಸ್ಥಿತಿಯಲ್ಲಿ ಇಲ್ಲ. ಜನನಿಬಿಡ ಪ್ರದೇಶದಿಂದ ಹೊರಗಿರುವವರು ನಿರ್ದಿಷ್ಟ ಮೊತ್ತ ಪಾವತಿಸಿ ಮೊದಲ ಡೋಸ್‌ ಪಡೆಯುತ್ತಾರೆ. ಹೀಗಾಗಿ ನಾವು ಇದನ್ನು ಸಂವಿಧಾನದ 14 ಮತ್ತು 21ನೇ ವಿಧಿಯಡಿ ನೋಡುತ್ತೇವೆ” ಎಂದು ಪೀಠ ಹೇಳಿದೆ.

ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದಂತೆ ಬರೆಯಲಾಗಿದ್ದ ಎರಡು ಪತ್ರಗಳನ್ನು ಆಧರಿಸಿ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ಇದರ ವಿಚಾರಣೆಯನ್ನು ಪೀಠ ನಡೆಸಿತು.

Also Read
ಜನರಿಗೆ ಸತ್ಯ ಹೇಳಿ: ಲಸಿಕೆ ಲಭ್ಯತೆ ವಿಚಾರದಲ್ಲಿ ಜನತೆಗೆ ನೈಜ ಮಾಹಿತಿ ತಿಳಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

ಲಸಿಕಾ ಉತ್ಪಾದಕರು ರಾಜ್ಯಕ್ಕೆ ನಿಗದಿಪಡಿಸಿರುವ ಶೇ. 50 ಕೋಟಾದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆಯೇ ಎಂದು ಪೀಠ ಪ್ರಶ್ನಿಸಿತು. ಅಲ್ಲದೇ, ಹಣ ಪಾವತಿಸಿ ಖಾಸಗಿ ಆಸ್ಪತ್ರೆಯಲ್ಲಿ ಮೊದಲ ಡೋಸ್‌ ಪಡೆದ ವ್ಯಕ್ತಿ ಎರಡನೇ ಡೋಸ್‌ ಅನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಪಡೆದುಕೊಳ್ಳಬಹುದೇ ಎಂದು ಪ್ರಶ್ನಿಸಿತು. “ಇದಕ್ಕೆ ಯಾವುದೇ ನಿಯಂತ್ರಣವಿಲ್ಲ. ಹಾಗೆ ಮಾಡಬಹುದು” ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯಾ ಭಾತಿ ಹೇಳಿದರು.

ನಿಗದಿಪಡಿಸಿದ ಲಸಿಕಾ ಮಟ್ಟ ಮೀರದಂತೆ ಖಾಸಗಿ ಆಸ್ಪತ್ರೆಗಳ ಮೇಲೆ ರಾಜ್ಯ ಸರ್ಕಾರ ನಿಗಾ ಇಡಬೇಕು ಎಂದು ಪೀಠ ಹೇಳಿದ್ದು, ಇಂದು ಆಹಾರ ಭದ್ರತೆ ಮತ್ತು ಆಮ್ಲಜನಕ ವಿಚಾರದ ಕುರಿತು ವಿಚಾರಣೆ ಮುಂದುವರಿಸಲಿದೆ.

Related Stories

No stories found.
Kannada Bar & Bench
kannada.barandbench.com