
ಕೋವಿಡ್ ಸೋಂಕು ತಗುಲಿದ ಕಾರಣ ಪರೀಕ್ಷೆಗೆ ಹಾಜರಾಗದ ಅಭ್ಯರ್ಥಿಯೊಬ್ಬರು 2020 ರ ಜೆಇಇ (ಅಡ್ವಾನ್ಸ್) ಪರೀಕ್ಷೆಯನ್ನು ಮತ್ತೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿ ಜಯಂತ್ ನಾಥ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಜಾರಿಗೊಳಿಸಿದೆ.
ಐಐಟಿ ಆಕಾಂಕ್ಷಿಯಾದ ಅರ್ಜಿದಾರ ಅನುಜ್ ಗುಪ್ತಾ, ಸೆಪ್ಟೆಂಬರ್ 2020ರಲ್ಲಿ ನಡೆದಿದ್ದ ಜೆಇಇ (ಮೇನ್ಸ್) ಪರೀಕ್ಷೆಯಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳ ವಿಭಾಗದ 96,187 ಸ್ಥಾನಗಳೊಳಗೆ ಒಂದು ಸ್ಥಾನ ಪಡೆದು ಮುಂದಿನ ಪರೀಕ್ಷೆಗೆ ಹಾಜರಾಗಲು ಅರ್ಹತೆ ಪಡೆದಿದ್ದರು. ಆದರೆ ಪರೀಕ್ಷೆಗೆ ಕೆಲವೇ ದಿನಗಳಿರುವಂತೆ ಅವರು ಮತ್ತವರ ಕುಟುಂಬದವರಿಗೆ ಕೋವಿಡ್ ದೃಢಪಟ್ಟಿತ್ತು. ಬಳಿಕ ಅವರಿಗೆ ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿರುವಂತೆ ಒತ್ತಾಯಿಸಲಾಗಿತ್ತು.
ಅರ್ಜಿದಾರರು ಐಐಟಿ-ದೆಹಲಿ ಸಂಸ್ಥೆಯ ಸಂಘಟನಾ ಅಧ್ಯಕ್ಷರಿಗೆ ಪತ್ರ ಬರೆದು ತಮ್ಮ ಸ್ಥಿತಿ ವಿವರಿಸಿ ಮತ್ತೊಂದು ದಿನ ಪರೀಕ್ಷೆ ಬರೆಯಲು ಕೋರಿದ್ದರು. ಅಲ್ಲದೆ ಜೈಪುರ ಪರೀಕ್ಷಾ ಕೇಂದ್ರವನ್ನು ಸಂಪರ್ಕಿಸಿದಾಗ ಕೋವಿಡ್- 19 ರೋಗಿಗಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ವ್ಯವಸ್ಥೆ ಮಾಡಿಲ್ಲ ಎಂದು ತಿಳಿದುಬಂದಿತು. ಜೆಇಇ ಪ್ರವೇಶ ಪರೀಕ್ಷೆಯಲ್ಲಿ ಸತತ ಎರಡು ವರ್ಷಗಳಲ್ಲಿ ಮಾತ್ರ ಎರಡು ಬಾರಿ ಪರೀಕ್ಷೆಗೆ ಹಾಜರಾಗಬಹುದೆಂದು ನಿಯಮವಿರುವ ಹಿನ್ನೆಲೆಯಲ್ಲಿ ಐಐಟಿಗಳಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಅವಕಾಶ ಕಳೆದುಕೊಳ್ಳುವ ಆತಂಕ ಅರ್ಜಿದಾರರದಾಗಿತ್ತು.
ಈ ನಡುವೆ ನ್ಯಾಯಾಲಯದ ಆದೇಶದ ಅನುಸಾರ ಕೋವಿಡ್ ರೋಗಿಗಳಿಗೆ ಮರುಪರೀಕ್ಷೆ ನಡೆಸುವ ಸಾಧ್ಯಾಸಾಧ್ಯತೆಗಳನ್ನು ಜಾಯಿಂಟ್ ಅಡ್ಮಿಷನ್ ಬೋರ್ಡ್ ಸಭೆಯಲ್ಲಿ ಚರ್ಚಿಸಲಾಗಿತ್ತು. ಮರುಪರೀಕ್ಷೆ ನಡೆಸಲು ಹಲವು ಅಡಚಣೆಗಳಿದ್ದು ಅದು ಕಾರ್ಯಸಾಧುವಲ್ಲ ಎಂದು ತಿಳಿದಬಂದಿತ್ತು. ಅರ್ಹತೆ ಮತ್ತು ನ್ಯಾಯಯುತ ಸ್ಪರ್ಧೆಯ ನಿಯಮ ಅತ್ಯಂತ ಮಹತ್ವದ್ದಾಗಿದೆ ಎಂದು ಮಂಡಳಿ ಅಭಿಪ್ರಾಯಟ್ಟಿತು. ಅಲ್ಲದೆ ಪರೀಕ್ಷೆಗೆಂದು ಉನ್ನತಮಟ್ಟದ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಅಗತ್ಯ ಇದೆ ಎಂದು ತಿಳಿಸಿತು. ಇದೇ ವೇಳೆ, ಜೆಇಇ (ಅಡ್ವಾನ್ಸ್ಡ್) ಪರೀಕ್ಷೆ 2020 ಗೆ ನೋಂದಾಯಿಸಿಕೊಂಡ ಆದರೆ ಪರೀಕ್ಷೆಯ ದಿನದಂದು ಗೈರು ಹಾಜರಾದ ಎಲ್ಲಾ ಅಭ್ಯರ್ಥಿಗಳು 2021ರ ಜೆಇಇ (ಅಡ್ವಾನ್ಸ್ಡ್) ಪರೀಕ್ಷೆ ಬರೆಯಲು ಅವಕಾಶ ನೀಡಿರುವುದಾಗಿ ಸ್ಪಷ್ಟಪಡಿಸಿದೆ. ಮಂಡಳಿಯ ನಿಲುವನ್ನು ಪರಿಗಣಿಸಿದ ನ್ಯಾಯಾಲಯ, ಪ್ರಸ್ತುತ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು.