ಜಹಾಂಗೀರ್‌ಪುರಿ ತೆರವು ಕಾರ್ಯಾಚರಣೆ ಪ್ರಶ್ನಿಸಿ ಸುಪ್ರೀಂ ಮೊರೆ ಹೋದ ಸಿಪಿಎಂ ನಾಯಕಿ ಬೃಂದಾ ಕಾರಟ್

ನಿವಾಸಿಗಳು ಅವ್ಯಕ್ತ ಸಂಕಷ್ಟ, ಆಘಾತ ಮತ್ತು ನಷ್ಟ ಅನುಭವಿಸಿದ್ದು ಅದಕ್ಕೆ ಪ್ರತಿವಾದಿಗಳು ಜವಾಬ್ದಾರರಾಗಿರುತ್ತಾರೆ. ಸಂತ್ರಸ್ತರಿಗೆ ಸಮರ್ಪಕ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಒತ್ತಿ ಹೇಳಲಾಗಿದೆ.
ಜಹಾಂಗೀರ್‌ಪುರಿ ತೆರವು ಕಾರ್ಯಾಚರಣೆ ಪ್ರಶ್ನಿಸಿ ಸುಪ್ರೀಂ ಮೊರೆ ಹೋದ ಸಿಪಿಎಂ ನಾಯಕಿ ಬೃಂದಾ ಕಾರಟ್

ಉತ್ತರ ದೆಹಲಿಗೆ ಸೇರಿದ ಜಹಾಂಗೀರ್‌ಪುರಿಯ ಗಲಭೆ ಪೀಡಿತ ಪ್ರದೇಶದಲ್ಲಿ ನಡೆದಿರುವ ತೆರವು ಕಾರ್ಯಾಚರಣೆ ವಿರುದ್ದ ಸಿಪಿಎಂ ನಾಯಕಿ ಬೃಂದಾ ಕಾರಟ್‌ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಿದ್ದಾರೆ.

ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (NDMC) ಮತ್ತಿತರ ಪ್ರತಿವಾದಿಗಳ ಕ್ರಮಗಳು ಅತ್ಯಂತ ಅಕ್ರಮ, ಅಮಾನವೀಯ ಹಾಗು ಸಹಜ ನ್ಯಾಯದ ತತ್ವ, ಕಾನೂನುಗಳಿಗೆ ಹೊರತಾಗಿದ್ದು, ಸಂವಿಧಾನ ವಿರೋಧಿಯಾಗಿವೆ ಎಂದು ಮನವಿಯಲ್ಲಿ ಹೇಳಲಾಗಿದೆ.

"ಇಡೀ ಕ್ರಮ ಸಂಪೂರ್ಣವಾಗಿ ಮತ್ತು ಸ್ಪಷ್ಟವಾಗಿ ಅನಿಯಂತ್ರಿತವಾಗಿದ್ದು ಸಂವಿಧಾನದ 14, 19 ಹಾಗೂ 21ನೇ ವಿಧಿಯ ಉಲ್ಲಂಘನೆಯಾಗಿದೆ" ಎಂದು ಬೃಂದಾ ದೂರಿದ್ದಾರೆ.

Also Read
ಜಹಾಂಗೀರ್‌ಪುರಿ ಕಟ್ಟಡಗಳ ತೆರವು ಕಾರ್ಯಾಚರಣೆ: ಯಥಾಸ್ಥಿತಿಗೆ ಸುಪ್ರೀಂ ಕೋರ್ಟ್ ಆದೇಶ, ನಾಳೆ ವಿಚಾರಣೆ

ಅರ್ಜಿಯ ಪ್ರಮುಖಾಂಶಗಳು

  • ಕಾನೂನು ಮತ್ತು ಸಂವಿಧಾನವನ್ನು ಸಂಪೂರ್ಣ ನಿರ್ಲಕ್ಷಿಸಿ ನಿವಾಸಿಗಳ ಜೀವನೋಪಾಯಕ್ಕಾಗಿ ಇದ್ದ ಏಕೈಕ ಮನೆ ಮತ್ತು ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ. ಕೆಲಸ ಮಾಡುವ ಜನರು ಸಾಮಾನ್ಯವಾಗಿ ಅತ್ಯಂತ ಬಡವರು ಮತ್ತು ಸಮಾಜದ ಅಂಚಿನಲ್ಲಿರುವವರು. ಹೀಗಾಗಿ, ಪ್ರತಿವಾದಿಗಳ ಕ್ರಮವನ್ನು ವಿರೋಧಿಸಲು ಅಸಮರ್ಥರಾಗಿದ್ದಾರೆ.

  • ತೆರವು ಕಾರ್ಯಾಚರಣೆ ನಡೆಯುತ್ತಿರುವ ಪ್ರದೇಶದಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ಬಹುಪಾಲು ಜನರು ಮುಸ್ಲಿಮರಾಗಿರುವುದರಿಂದ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಧ್ವಂಸ ಕಾರ್ಯಾಚರಣೆ ನಡೆಸಲಾಗಿದೆ. ಪ್ರತಿವಾದಿಗಳು ಬಿ, ಎಚ್ ಮತ್ತು ಇತರ ಬ್ಲಾಕ್‌ಗಳಲ್ಲಿನ ಕಟ್ಟಡಗಳನ್ನು ಮುಟ್ಟಿಲ್ಲ. ಅವರು ನಿರ್ದಿಷ್ಟವಾಗಿ ಮತ್ತು ತಾರತಮ್ಯದಿಂದ ಕಾರ್ಯಾಚರಣೆ ಮಾಡಿದ್ದಾರೆ.

  • ಸುಪ್ರೀಂ ಕೋರ್ಟ್‌ನ ಯಥಾಸ್ಥಿತಿ ಆದೇಶದ ಹೊರತಾಗಿಯೂ ಬುಧವಾರವೂ ಕೆಲಕಾಲ ತೆರವು ಕಾರ್ಯಾಚರಣೆ ಮುಂದುವರೆದಿತ್ತು.

  • ಕೋಮು ರಾಜಕೀಯದಾಟದ ಭಾಗವಾಗಿ ತೆರವು ಕಾರ್ಯಾಚರಣೆ ನಡೆಯುತ್ತಿದೆ.

  • ನಿವಾಸಿಗಳು ಅವ್ಯಕ್ತ ಸಂಕಷ್ಟ, ಆಘಾತ ಮತ್ತು ನಷ್ಟ" ಅನುಭವಿಸಿದ್ದು ಅದಕ್ಕೆ ಪ್ರತಿವಾದಿಗಳು ಜವಾಬ್ದಾರರಾಗಿರುತ್ತಾರೆ. ಸಂತ್ರಸ್ತರಿಗೆ ಸಮರ್ಪಕ ಪರಿಹಾರ ನೀಡಬೇಕು.

  • ಆದ್ದರಿಂದ, ಎನ್‌ಡಿಎಂಸಿ ನೀಡಿದ ಪತ್ರ ರದ್ದುಗೊಳಿಸಿ ಯಾವುದೇ ಕ್ರಮಕ್ಕೆ ಮುಂದಾಗದಂತೆ ಪ್ರತಿವಾದಿಗಳಿಗೆ ನಿರ್ದೇಶಿಸಬೇಕು ಮತ್ತು ಅಕ್ರಮ ಕಟ್ಟಡದ ಸಂತ್ರಸ್ತರಿಗೆ ಪರಿಹಾರ ನೀಡಬೇಕು.

Related Stories

No stories found.
Kannada Bar & Bench
kannada.barandbench.com