ಉತ್ತರ ದೆಹಲಿಗೆ ಸೇರಿದ ಜಹಾಂಗೀರ್‌ಪುರಿಯ ಗಲಭೆ ಪೀಡಿತ ಪ್ರದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳಲು ಸುಪ್ರೀಂ ಕೋರ್ಟ್ ಬುಧವಾರ ಆದೇಶಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರೆದುರು ಪ್ರಕರಣವನ್ನು ಪ್ರಸ್ತಾಪಿಸಿದ ಹಿರಿಯ ನ್ಯಾಯವಾದಿ ದುಷ್ಯಂತ್ ದವೆ ಸರ್ವೋಚ್ಚ ನ್ಯಾಯಾಲಯದ ಆದೇಶದ ಹೊರತಾಗಿಯೂ ತೆರವು ಕಾರ್ಯಾಚರಣೆ ನಿಲ್ಲದೇ ಇರುವುದರಿಂದ “ಇದು ಭಯಾನಕ ಸಂದೇಶ” ನೀಡುತ್ತದೆ ಎಂದರು.
"ಗಲಭೆಗಳು ನಡೆದ ಜಹಾಂಗೀರ್‌ಪುರಿಯಲ್ಲಿ ಅಸಾಂವಿಧಾನಿಕ, ಅನಧಿಕೃತ ನೆಲಸಮ ಕಾರ್ಯಾಚರಣೆ ನಡೆಯುತ್ತಿದೆ. ಯಾವುದೇ ನೋಟಿಸ್ ನೀಡಲಾಗಿಲ್ಲ" ಎಂದು ಅವರು ಹೇಳಿದರು.
"ತೆರವು ಕಾರ್ಯಾಚರಣೆ ಕುರಿತು ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿದೆ. ನಾವು ಪ್ರಜಾಪ್ರಭುತ್ವದಲ್ಲಿದ್ದೇವೆ. ಸುಪ್ರೀಂ ಕೋರ್ಟ್ ಆದೇಶದ ನಂತರವೂ ತೆರವು ಕಾರ್ಯಾಚರಣೆ ನಿಲ್ಲಿಸಲಾಗುತ್ತಿಲ್ಲ ಎಂಬ ಭಯಾನಕ ತಪ್ಪು ಸಂದೇಶವನ್ನು ಇದು ಕಳುಹಿಸುತ್ತದೆ," ಎಂದು ದವೆ ವಿವರಿಸಿದರು.
ಆಗ ನ್ಯಾಯಾಲಯ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನಿರ್ದೇಶಿಸಿ ವಿಚಾರಣೆಗಾಗಿ ನಾಳೆಗೆ ಪ್ರಕರಣವನ್ನು ಪಟ್ಟಿ ಮಾಡಲಾಗುವುದು ಎಂದು ತಿಳಿಸಿತು. ಅಲ್ಲದೆ ಆದೇಶವನ್ನು ಕೂಡಲೇ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ತಲುಪಿಸಲಾಗುವುದು ಎಂದು ಕೂಡ ತಿಳಿಸಿತು.
ಅಲ್ಲದೆ ದಂಡನಾ ಕ್ರಮವಾಗಿ ವಸತಿ ಅಥವಾ ವಾಣಿಜ್ಯ ಆಸ್ತಿಯನ್ನು ನೆಲಸಮ ಮಾಡದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ಕೋರಿ ಜಾಮಿಯಾತ್- ಉಲಾಮಾ- ಇ- ಹಿಂದ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೂಡ ನಾಳೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ. ಪ್ರಕರಣವನ್ನು ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಪ್ರಸ್ತಾಪಿಸಿದ್ದರು.