ಪಂಜಾಬ್ ಪೊಲೀಸರು ಶಿರೋಮಣಿ ಅಕಾಲಿದಳದ ಮುಖಂಡ ಬಿಕ್ರಮ್ ಮಜೀಠಿಯಾ ವಿರುದ್ಧ ದಾಖಲಿಸಿರುವ ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಸುಪ್ರೀಂ ಕೋರ್ಟ್ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಪಂಜಾಬ್‌ನ ಕಾಂಗ್ರೆಸ್ ಸರ್ಕಾರವು ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ರಾಜಕೀಯ ಎದುರಾಳಿಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠವು ನಡೆಸಿತು.
“ಸಿಮರ್ಜಿತ್ ಸಿಂಗ್ ಬೈನ್ಸ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ನಮ್ಮ ಗಮನಕ್ಕೆ ತರಲಾಗಿದೆ. ಆದರೆ, ಚುನಾವಣೆಯ ಹೊಸ್ತಿಲಲ್ಲಿ ಕ್ರಿಮಿನಲ್ ಪ್ರಕರಣಗಳು ಮುನ್ನಲೆಗೆ ಬರುತ್ತಿವೆ ಎಂದು ಹೇಳಲು ವಿಷಾದವಾಗುತ್ತದೆ” ಎಂದು ಸಿಜೆಐ ರಮಣ ಹೇಳಿದರು.
ಪಂಜಾಬ್ ಚುನಾವಣೆ ಫೆಬ್ರವರಿ 20ಕ್ಕೆ ನಡೆಯಲಿದ್ದು, ಫೆಬ್ರವರಿ 23ರವರೆಗೆ ಮಜೀಠಿಯಾ ಅವರನ್ನು ಬಂಧಿಸಬಾರದು ಎಂದು ಪೀಠವು ಹೇಳಿದೆ. “ಕೈಕಟ್ಟಿ ಕುಳಿತುಕೊಳ್ಳಿ, ಡ್ರಗ್ ಮಾಫಿಯಾ ನಿಯಂತ್ರಿಸಬೇಡಿ ಎಂದು ನಾವು ಹೇಳುತ್ತಿಲ್ಲ. ಫೆಬ್ರವರಿ 20ರಂದು ಚುನಾವಣೆ ನಡೆಯಲಿ. ಕನಿಷ್ಠ ಅವರು ನಾಮಪತ್ರ ಸಲ್ಲಿಸಲಿ” ಎಂದು ಸಿಜೆಐ ಹೇಳಿದರು.
ಫೆಬ್ರವರಿ 23ರಂದು ವಿಚಾರಣಾಧೀನ ನ್ಯಾಯಾಲಯದ ಮುಂದೆ ಶರಣಾಗುವಂತೆ ಹಾಗೂ ಸಾಮಾನ್ಯ ಜಾಮೀನಿಗೆ ಅರ್ಜಿ ಸಲ್ಲಿಸುವಂತೆ ಮಜೀಠಿಯಾಗೆ ನ್ಯಾಯಾಲಯವು ಸೂಚಿಸಿದೆ.
ಜನವರಿ 24ರಂದು ಮಜೀಠಿಯಾ ಅವರು ನಿರೀಕ್ಷಣಾ ಜಾಮೀನು ಕೋರಿದ್ದ ಮನವಿಯನ್ನು ವಜಾ ಮಾಡಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಮೂರು ದಿನಗಳ ಕಾಲಾವಕಾಶ ನೀಡಿತ್ತು.