ನ್ಯಾಯಾಲಯವನ್ನು ಹಗುರವಾಗಿ ಪರಿಗಣಿಸಲಾಗುತ್ತಿದೆ: ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಸುಪ್ರೀಂ ಕೆಂಡ

ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಅಳವಡಿಸಬೇಕೆಂದು ತಾನು ನೀಡಿದ್ದ ಆದೇಶವನ್ನು ಡಿಸೆಂಬರ್ 16ರೊಳಗೆ ಪಾಲಿಸಬೇಕು ಎಂದು ನ್ಯಾಯಾಲಯ ತಾಕೀತು ಮಾಡಿದೆ.
Police station, CCTV camera
Police station, CCTV camera
Published on

ದೇಶದ ಎಲ್ಲಾ ಪೊಲೀಸ್‌ ಠಾಣೆಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯಗೊಳಿಸಿ 2020ರಲ್ಲಿ ತಾನು ಹೊರಡಿಸಿದ್ದ ತೀರ್ಪನ್ನು ಪಾಲಿಸದ ಕೇಂದ್ರ ಸರ್ಕಾರ ಹಾಗೂ ವಿವಿಧ ರಾಜ್ಗ ಸರ್ಕಾರಗಳ ವಿರುದ್ಧ ಸುಪ್ರೀಂ ಕೋರ್ಟ್‌ ಮಂಗಳವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ [ಪೊಲೀಸ್‌ ಠಾಣೆಗಳಲ್ಲಿ ಸಕ್ರಿಯ ಸಿಸಿಟಿವಿ ಕೊರತೆ ಕುರಿತಾದ ಸ್ವಯಂ ಪ್ರೇರಿತ ಪ್ರಕರಣ].

ಕಸ್ಟಡಿ ಸಾವು ವ್ಯವಸ್ಥೆಯ ಕಪ್ಪು ಚುಕ್ಕೆಯಾಗಿದ್ದು ತಾನು ಈ ಹಿಂದೆ ನೀಡಿದ್ದ ಆದೇಶ ಜಾರಿಗೆ ತಂದ ಕುರಿತು ಕೇಂದ್ರ ಸರ್ಕಾರ ಅನುಪಾಲನಾ ಅಫಿಡವಿಟ್‌ ಕೂಡ ಸಲ್ಲಿಸಿಲ್ಲ. ಇದನ್ನು ನೋಡಿದರೆ ನ್ಯಾಯಲಯವನ್ನು ತುಂಬಾ ಹಗುರವಾಗಿ ಪರಿಗಣಿಸಿರುವಂತೆ ತೋರುತ್ತಿದೆ  ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಹೇಳಿತು.

Also Read
ಕಸ್ಟಡಿ ಸಾವು: ಠಾಣೆಗಳಲ್ಲಿ ಸಿಸಿಟಿವಿ ಕೊರತೆ ಕುರಿತು ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡ ಸುಪ್ರೀಂ ಕೋರ್ಟ್‌

ಪರಮವೀರ್ ಸಿಂಗ್ ಸೈನಿ ಮತ್ತು ಬಲ್ಜಿತ್ ಸಿಂಗ್ ನಡುವಣ ಪ್ರಕರಣದ ವಿಚಾರಣೆ ವೇಳೆ ದೇಶದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ರಾತ್ರಿ ವೀಕ್ಷಣೆ ಸೌಲಭ್ಯದೊಂದಿಗೆ ಸಕ್ರಿಯ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂಬ ನ್ಯಾಯಾಲಯದ ನಿರ್ದೇಶನಗಳ ಹೊರತಾಗಿಯೂ, ಎಂಟು ತಿಂಗಳ ಅವಧಿಯಲ್ಲಿ ರಾಜಸ್ಥಾನದಲ್ಲಿ 11 ಕಸ್ಟಡಿ ಸಾವುಗಳು ಸಂಭವಿಸಿವೆ ಎಂಬ ಪತ್ರಿಕಾ ವರದಿ ಆಧರಿಸಿ ಈ ವರ್ಷದ ಆರಂಭದಲ್ಲಿ ನ್ಯಾಯಾಲಯ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು.

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅನುಪಾಲನಾ ಅಫಿಡವಿಟ್‌ಗಳನ್ನು ಸಲ್ಲಿಸಬೇಕು ಎಂಬ ನ್ಯಾಯಾಲಯದ ಹಿಂದಿನ ನಿರ್ದೇಶನಗಳ ಕುರಿತು ಅನೇಕ ರಾಜ್ಯಗಳು ಪ್ರತಿಕ್ರಿಯಿಸಿಲ್ಲ ಎಂದು ನ್ಯಾ. ಮೆಹ್ತಾ ಅಸಮಾಧಾನ ವ್ಯಕ್ತಪಡಿಸಿದರು.

ಕೇವಲ 11 ರಾಜ್ಯಗಳು ಮಾತ್ರ ಈ ಆದೇಶ ಪಾಲಿಸಿವೆ ಎಂದು ಪ್ರಕರಣದಲ್ಲಿ ಅಮಿಕಸ್‌ ಕ್ಯೂರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ವಕೀಲ ಸಿದ್ಧಾರ್ಥ ದವೆ ಹೇಳಿದರು. ಇದೇ ವೇಳೆ ಮಧ್ಯಪ್ರದೇಶದ ಕಾರ್ಯವನ್ನು ನ್ಯಾಯಾಲಯ ಮೆಚ್ಚಿಕೊಂಡಿತು. ಇದಕ್ಕೆ ದವೆ ತಲೆದೂಗಿದರು.

ಉಳಿದ ರಾಜ್ಯಗಳು ತಳೆದಿರುವ ಮೌನವನ್ನು ಪೀಠ ಪ್ರಶ್ನಿಸಿತು. ಆಡಳಿತಾತ್ಮಕ ದಕ್ಷತೆಗೆ ಹೆಸರುವಾಸಿಯಾದ ಕೇರಳ ಸರ್ಕಾರ ವರದಿ ಸಲ್ಲಿಸದಿರುವ ಬಗ್ಗೆ ನ್ಯಾಯಮೂರ್ತಿ ಮೆಹ್ತಾ ಆಶ್ಚರ್ಯ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಕೂಡ ಆದೇಶ ಪಾಲಿಸಿರುವ ಕುರಿತು ಅಫಿಡವಿಟ್‌ ಸಲ್ಲಿಸಿಲ್ಲ ಎಂದು ದವೆ ಅವರು ಹೇಳಿದಾಗ ನ್ಯಾಯಾಲಯದ ಆದೇಶಗಳನ್ನು ಕೇಂದ್ರ ಸರ್ಕಾರ ಹಗುರವಾಗಿ ಪರಿಗಣಿಸುವಂತಿಲ್ಲ ಎಂದು ನ್ಯಾ. ನಾಥ್‌ ಗುಡುಗಿದರು.

ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ನಿರ್ದೇಶನದ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಅಗತ್ಯ ಅಫಿಡವಿಟ್‌ ಸಲ್ಲಿಸುವುದಾಗಿ ತಿಳಿಸಿದರು. ಆದರೆ ಕಾಗದಪತ್ರಗಳಿಗಿಂತ ಮಿಗಿಲಾಗಿ ನ್ಯಾಯಾಲಯದ ಆದೇಶ ಜಾರಿಗೆ ಬರಬೇಕಿದೆ ಎಂದು ನ್ಯಾ. ಮೆಹ್ತಾ ಒತ್ತಿ ಹೇಳಿದರು.

“ಅಫಿಡವಿಟ್‌ ಸಲ್ಲಿಸುವುದಲ್ಲ, ಆದೇಶದ ಪಾಲನೆಯಾಗಬೇಕು. ರಾಜಸ್ಥಾನದಲ್ಲಿ 8 ತಿಂಗಳಲ್ಲಿ ಪೊಲೀಸ್ ಠಾಣೆಗಳಲ್ಲಿ 11 ಕಸ್ಟಡಿ ಸಾವುಗಳು ಸಂಭವಿಸಿವೆ. ಇದನ್ನು ದೇಶ ಸಹಿಸಲು ಸಾಧ್ಯವಿಲ್ಲ. ಇದು ವ್ಯವಸ್ಥೆಗೆ ಕಳಂಕ” ಎಂದು ಅವರು ಹೇಳಿದರು.

ವಿಚಾರಣೆಯ ಸಮಯದಲ್ಲಿ, ಜೈಲು ಸುಧಾರಣೆಗಳ ಬಗ್ಗೆಯೂ ಪೀಠ ಚರ್ಚಿಸಿತು. ತೆರೆದ ಜೈಲುಗಳು ಜನದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಪುನರ್ವಸತಿಗೆ ಸಹಾಯ ಮಾಡಬಹುದು ಎಂದು ನ್ಯಾಯಮೂರ್ತಿ ಮೆಹ್ತಾ ಹೇಳಿದರು. ಇಂತಹ ಕ್ರಮಗಳು ರಾಜ್ಯದ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ನ್ಯಾಯಮೂರ್ತಿ ನಾಥ್ ಧ್ವನಿಗೂಡಿಸಿದರು.

Also Read
ಕಸ್ಟಡಿ ಸಾವು ಪ್ರಕರಣಗಳಲ್ಲಿ ಪೊಲೀಸರಿಗೆ ಜಾಮೀನು ನೀಡುವಾಗ ಕಠಿಣ ಧೋರಣೆ ಅನುಸರಿಸಬೇಕು: ಸುಪ್ರೀಂ ಕೋರ್ಟ್‌

ಇದೇ ವೇಳೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಅಫಿಡವಿಟ್‌ಗಳನ್ನು ಸಲ್ಲಿಸುವಂತಾಗಲು ಮೂರು ವಾರಗಳ ಕಾಲಾವಕಾಶ ಬೇಕಿದೆ ಎಂದು ಸಾಲಿಸಿಟರ್ ಜನರಲ್ ಕೋರಿದರು. ಇದಕ್ಕೆ ನ್ಯಾಯಾಲಯ ಸಮ್ಮತಿಸಿತು.

ಮುಂದಿನ ವಿಚಾರಣೆ ಹೊತ್ತಿಗೆ ಅಫಿಡವಿಟ್‌ ಸಲ್ಲಿಸದೆ ಉಳಿಯುವ ರಾಜ್ಯಗಳ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ನ್ಯಾಯಾಲಯದೆದುರು ಖುದ್ದು ಹಾಜರಾಗಿ ಏಕೆ ಆದೇಶ ಪಾಲಿಸಿಲ್ಲ ಎಂಬುದನ್ನು ವಿವರಿಸಬೇಕಾಗುತ್ತದೆ ಎಂದು ಹೇಳಿತು. ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 16ರಂದು ನಡೆಯಲಿದೆ.

Kannada Bar & Bench
kannada.barandbench.com