ಹೆಣ್ಣಾನೆ ಸುಭದ್ರೆ ಮಾಲೀಕತ್ವದ ಪ್ರಕರಣ: ಆಕ್ಷೇಪಣೆ ಸಲ್ಲಿಸಲು ಶ್ರೀಕೃಷ್ಣಮಠಕ್ಕೆ ಕೊನೆಯ ಅವಕಾಶ ಕಲ್ಪಿಸಿದ ಹೈಕೋರ್ಟ್‌

ಸುಭದ್ರೆಯನ್ನು ಉಡುಪಿ ಶ್ರೀಕೃಷ್ಣ ಮಠಕ್ಕೆ ಹಸ್ತಾಂತರಿಸಬೇಕು ಎಂದು ಪಿಸಿಸಿಎಫ್ ಆದೇಶಿಸಿದ್ದು, ಹಿರೇಕಲ್ಮಠಕ್ಕೆ ನೀಡಲಾಗಿದ್ದ ಅದರ ಮಾಲೀಕತ್ವದ ಪ್ರಮಾಣಪತ್ರ ಸಹ ರದ್ದುಪಡಿಸಿದ್ದರು. ಅದನ್ನು ಪ್ರಶ್ನಿಸಿ ಹಿರೇಕಲ್ಮಠವು ಹೈಕೋರ್ಟ್ ಮೆಟ್ಟಿಲೇರಿದೆ.
High Court of Karnataka
High Court of Karnataka
Published on

ಹೆಣ್ಣಾನೆ ‘ಸುಭದ್ರೆ‘ಯ ಮಾಲೀಕತ್ವದ ವಿಚಾರವಾಗಿ ದಾವಣಗೆರೆ ಜಿಲ್ಲೆ ಹೊನ್ನಾಳ್ಳಿಯ ಚನ್ನಬಸಪ್ಪಸ್ವಾಮಿ ಹಿರೇಕಲ್ಮಠ ಸಂಸ್ಥಾನ ಹಾಗೂ ಉಡುಪಿ ಶ್ರೀಕೃಷ್ಣಮಠದ ನಡುವಿನ ವಿವಾದ ಕುರಿತ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಶ್ರೀಕೃಷ್ಣಮಠಕ್ಕೆ ಕರ್ನಾಟಕ ಹೈಕೋರ್ಟ್ ಬುಧವಾರ ಕೊನೆಯ ಅವಕಾಶ ನೀಡಿದೆ.

ಹೆಣ್ಣಾನೆ ಸುಭದ್ರೆಯನ್ನು ಶ್ರೀಕೃಷ್ಣಮಠಕ್ಕೆ ಸ್ಥಳಾಂತರಿಸುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) 2025ರ ಸೆಪ್ಟಂಬರ್ 10ಕ್ಕೆ ಹೊರಡಿಸಿರುವ ಆದೇಶ ಪ್ರಶ್ನಿಸಿ ಹಿರೇಕಲ್ಮಠ ಸಂಸ್ಥಾನದ ಪ್ರತಿನಿಧಿ ಎಂ ಪಿ ಎಂ ಚನ್ನಬಸಯ್ಯ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು “ಹೆಣ್ಣಾನೆ ಸುಭದ್ರೆಯ ಆರೈಕೆಯನ್ನು ಸುದೀರ್ಘ 26 ವರ್ಷಗಳ ಕಾಲ ಮಾಡಲಾಗಿದ್ದು, ಗಾಯಗಳು ಮಾಸದ ಕಾರಣ ಸುಭದ್ರೆಯನ್ನು ಮೊದಲು ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಯಿತು. ಬಳಿಕ ಅದನ್ನು ಹಿರೇಕಲ್ಮಠ ಸಂಸ್ಥಾನದ ಸುಪರ್ದಿಗೆ ನೀಡಲಾಯಿತು. ಈ ಮಧ್ಯೆ, ಸುಭದ್ರೆಯನ್ನು ಶ್ರೀಕೃಷ್ಣ ಮಠಕ್ಕೆ ಹಸ್ತಾಂತರಿಸುವಂತೆ ಪಿಸಿಸಿಎಫ್ ಆದೇಶ ಮಾಡಿದ್ದಾರೆ. ಹೈಕೋರ್ಟ್ ಈ ಹಿಂದೆ ನೀಡಿದ್ದ ಆದೇಶದಂತೆ ಆರು ಮಂದಿ ಪಶು ವೈದ್ಯ ತಜ್ಜರ ತಂಡ ಸುಭದ್ರೆಯ ಆರೋಗ್ಯ ತಪಾಸಣೆ ನಡೆಸಿದ್ದು, ಹೆಣ್ಣಾನೆ ಆರೋಗ್ಯವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ” ಎಂದು ಪೀಠದ ಗಮನಕ್ಕೆ ತಂದರು.

ಶ್ರೀಕೃಷ್ಣಮಠದ ಪರ ವಕೀಲರು “ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶಬೇಕು” ಎಂದು ಕೋರಿದರು. ಅದಕ್ಕೆ ಆಕ್ಷೇಪಣೆ ಸಲ್ಲಿಸಲು ಕೊನೆಯ ಅವಕಾಶ ನೀಡುತ್ತಿರುವುದಾಗಿ ಹೇಳಿದ ಪೀಠವು ನವೆಂಬರ್ 27ರೊಳಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಶ್ರೀಕೃಷ್ಣ ಮಠದ ಪರ ವಕೀಲರಿಗೆ ನಿರ್ದೇಶಿಸಿ, ವಿಚಾರಣೆಯನ್ನು ಡಿಸೆಂಬರ್ 2ಕ್ಕೆ ಮುಂದೂಡಿತು. ಅಲ್ಲದೇ ಸುಭದ್ರೆಯನ್ನು ಆತುರವಾಗಿ ಸ್ಥಳಾಂತರ ಮಾಡದಂತೆ ಸೆಪ್ಟೆಂಬರ್‌ 23ರಂದು ನೀಡಿದ್ದ ಮಧ್ಯಂತರ ಆದೇಶವನ್ನು ಪೀಠ ವಿಸ್ತರಿಸಿತು.

Also Read
ಆನೆಗಳ ಅಸಹಜ ಸಾವು ಪ್ರಕರಣ: ಎಸ್ಕಾಂಗಳಿಗೆ ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌

ಹೆಣ್ಣಾನೆ ಸುಭದ್ರೆಯನ್ನು 1993ರಿಂದ 2019ರವರೆಗೆ ಉಡುಪಿ ಶ್ರೀಕೃಷ್ಣಮಠ ಆರೈಕೆ ಮಾಡುತ್ತಿತ್ತು. ನಂತರ ಅದನ್ನು ಹಿರೇಕಲ್ಮಠ ಸಂಸ್ಥಾನಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲದೇ ಹಿರೇಕಲ್ಮಠಕ್ಕೆ ಸುಭದ್ರೆಯ ಮಾಲೀಕತ್ವ ಪ್ರಮಾಣಪತ್ರ ಸಹ ನೀಡಲಾಗಿತ್ತು. ಆದರೆ, ಸುಭದ್ರೆಯನ್ನು ಉಡುಪಿ ಶ್ರೀಕೃಷ್ಣ ಮಠಕ್ಕೆ ಹಸ್ತಾಂತರಿಸಬೇಕು ಎಂದು 2025ರ ಸೆಪ್ಟೆಂಬರ್‌ 10ರಂದು ಆದೇಶ ಹೊರಡಿಸಿದ್ದ ಪಿಸಿಸಿಎಫ್, ಹಿರೇಕಲ್ಮಠಕ್ಕೆ ನೀಡಲಾಗಿದ್ದ ಸುಭದ್ರೆಯ ಮಾಲಿಕತ್ವದ ಪ್ರಮಾಣಪತ್ರ ಸಹ ರದ್ದುಪಡಿಸಿದ್ದರು. ಅದನ್ನು ಪ್ರಶ್ನಿಸಿ ಹಿರೇಕಲ್ಮಠ ಸಂಸ್ಥಾನ ಹೈಕೋರ್ಟ್ ಮೆಟ್ಟಿಲೇರಿದೆ. 

Kannada Bar & Bench
kannada.barandbench.com