ರಾಜ್ಯದಲ್ಲಿ ಆನೆಗಳೂ ಸೇರಿದಂತೆ ವನ್ಯಜೀವಿಗಳು ವಿದ್ಯುತ್ ತಂತಿ ತಗುಲಿ ಸಾವನ್ನಪ್ಪುತ್ತಿರುವುದಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಬೆಸ್ಕಾಂ ಸೇರಿದಂತೆ ರಾಜ್ಯದ ಎಲ್ಲ ಎಸ್ಕಾಂಗಳಿಗೆ ಶುಕ್ರವಾರ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ರಾಜ್ಯದಲ್ಲಿ ಆನೆಗಳು ಅಸಹಜವಾಗಿ ಸಾವಿಗೀಡಾಗುತ್ತಿರುವುದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ವರದಿ ಆಧರಿಸಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರಿದ್ದ ವಿಭಾಗೀಯ ಪೀಠ ನಡೆಸಿತು.
ರಾಜ್ಯದ ಎಲ್ಲಾ ಎಸ್ಕಾಂಗಳನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿಸಿ, ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿ ವಿಚಾರಣೆಯನ್ನು ಆಗಸ್ಟ್ 12ಕ್ಕೆ ಮುಂದೂಡಿತು.
ಸರ್ಕಾರದ ವಕೀಲರು “ವನ್ಯಜೀವಿಗಳ ಸಾವಿಗೆ ಅರಣ್ಯದಲ್ಲಿ ಅಳವಡಿಸಿರುವ ವಿದ್ಯುತ್ ತಂತಿಗಳು ಮುಖ್ಯ ಕಾರಣವಾಗಿದೆ. ಈ ವಿದ್ಯುತ್ ತಂತಿಗಳನ್ನು ನಿಗದಿತವಾಗಿ ನಿರ್ವಹಣೆ ಮಾಡದಿರುವುದು ಹಾಗೂ ಅರಣ್ಯದಂಚಿನ ಕೃಷಿ ಭೂಮಿಗಳಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡಿರುವುದು ಸಹ ಕಾರಣವಾಗಿದೆ. ನಿಗದಿತ ಎತ್ತರಕ್ಕಿಂತಲೂ ಕಡಿಮೆ ಎತ್ತರದಲ್ಲಿ ತಂತಿಗಳನ್ನು ಅಳವಡಿಸಲಾಗಿದೆ. ಇದರಿಂದ ವನ್ಯಜೀವಿಗಳ ಬದುಕಿಗೆ ಹಾನಿಯಾಗುತ್ತಿದೆ” ಎಂದರು.
“ಅಗತ್ಯ ಕ್ರಮಕೈಗೊಳ್ಳುವಂತೆ ಎಲ್ಲಾ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಹಲವು ಬಾರಿ ಅರಣ್ಯ ಇಲಾಖೆಯಿಂದ ಪತ್ರ ಬರೆಯಲಾಗಿದೆ. ಆದರೆ, ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಮತ್ತು ನಿರ್ವಹಣೆ ಕೆಲಸವನ್ನೂ ಆರಂಭಿಸಿಲ್ಲ” ಎಂದರು.
“ಆನೆಗಳನ್ನು ಅರಣ್ಯದಿಂದ ಹೊರ ಬರದಂತೆ ನಿಯಂತ್ರಿಸಲು ಹಳೆಯ ರೈಲ್ವೆ ಕಂಬಿಗಳ ಮೂಲಕ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಇದಕ್ಕಾಗಿ ಪ್ರತಿ ಒಂದು ಕಿಲೋ ಮೀಟರ್‌ಗೆ ಸುಮಾರು 1.6 ಕೋಟಿ ವೆಚ್ಚವಾಗುತ್ತಿದೆ. 3,426 ಕಿಲೋ ಮೀಟರ್ ಉದ್ದ ಸೋಲಾರ ಫೆನ್ಸಿಂಗ್ ಹಾಕಲಾಗಿದೆ. ಆನೆಗಳು ಸೇರಿ ಇತರೆ ವನ್ಯ ಜೀವಿಗಳನ್ನು ರಕ್ಷಣೆ ಮಾಡುವುದಕ್ಕಾಗಿ ಅರಣ್ಯ ಭಾಗದ ಸುತ್ತಲು ಮೂರು ಮೀಟರ್ ಆಳವಾದ 2,420 ಕಿಲೋ ಮೀಟರ್ ಕಂದಕ ನಿರ್ಮಾಣ ಮಾಡಲಾಗಿದೆ. ಆನೆಗಳು ನಾಡಿಗೆ ಬರದಂತೆ ಹಾಗೂ ಮಾನವ-ಆನೆ ಸಂಘರ್ಷ ತಡೆಯಲು ಕೊಡಗು, ಹಾಸನ, ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ರಾಮನಗರ ಬಂಡೀಪುರ ಮತ್ತು ಬನ್ನೇರುಘಟ್ಟ ಸೇರಿ 8 ಜಿಲ್ಲೆಗಳಲ್ಲಿ ಆನೆ ಕಾರ್ಯಪಡೆ ರಚನೆ ಮಾಡಲಾಗಿದೆ” ಎಂದರು.
“ವನ್ಯಜೀವಿಗಳ ಕಳ್ಳಬೇಟೆ ತಡೆ ಶಿಬಿರಗಳನ್ನು ಪ್ರಾರಂಭಿಸಲಾಗಿದ್ದು ಇದಕ್ಕಾಗಿ 1,922 ಸಿಬ್ಬಂದಿಯನ್ನು ನೇಮಕ ಮಾಡಿ ನಿಗಾ ವಹಿಸಲಾಗುತ್ತಿದೆ. ಆನೆಗಳ ವರ್ತನೆ ಮತ್ತು ಅವುಗಳ ಚಲನವಲನಗಳ ಮೇಲೆ ನಿಗಾ ವಹಿಸಲು ರೇಡಿಯೊ ಕಾಲರ್ ಅಳವಡಿಸುತ್ತಿದ್ದು, ಆನೆ-ಮಾನವ ಸಂಘರ್ಷ ತಡೆಯಲು ಗಸ್ತು ತಿರುಗುವುದಕ್ಕಾಗಿ 2,730 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಗ್ರಾಮೀಣರಿಗೆ ಆನೆಗಳು ನಾಡು ಪ್ರವೇಶಿಸುವುದನ್ನು ತಿಳಿಸಲು ಗಸ್ತು ಸಿಬ್ಬಂದಿ ನೇಮಕ ಮಾಡಲಾಗಿದೆ. ವನ್ಯಜೀವಿಗಳಿಗಾಗಿ ಆವಾಸ ಸ್ಥಾನ ಅಭಿವೃದಿ ಮಾಡಲು ಹುಲ್ಲುಗಾವಲು, ಬಿದಿರು ಬೆಳೆಸಲು ಕ್ರಮ ಕೈಗೊಳ್ಳಲಾಗಿದೆ. ಕೇರಳ, ತಮಿಳುನಾಡು ಮತ್ತು ಕರ್ನಾಟಕ ಅಧಿಕಾರಿಗಳೊಂದಿಗೆ ಅಂತಾರಾಜ್ಯ ಸಮಿತಿ ರಚನೆ ಮಾಡಲಾಗಿದೆ” ಎಂದು ಪೀಠಕ್ಕೆ ವಿವರಿಸಿದರು.
“ಆನೆಗಳ ಮೇಲೆ ನಿಗಾ ವಹಿಸಲು ಕೇಂದ್ರೀಕೃತ ವ್ಯವಸ್ಥೆ ರೂಪಿಸಿದ್ದು, ಆ ಮೂಲಕ ಡ್ಯಾಷ್ ಬೋರ್ಡ್‌ನಲ್ಲಿ ಯಾರು ಬೇಕಾದರೂ ಆನ್‌ಲೈನ್‌ನಲ್ಲಿ ಆನೆಗಳನ್ನು ಪರಿಶೀಲಿಸಿ ಸ್ಥಳೀಯರಿಗೆ ಎಚ್ಚರಿಕೆ ನೀಡಬಹುದಾಗಿದೆ. ಕ್ಯಾಂಪ್‌ಗಳಲ್ಲಿ ಕಾಡಾನೆಗಳನ್ನು ತಂದು ತರಬೇತಿಯನ್ನೂ ನೀಡಲಾಗುತ್ತಿದೆ” ಎಂದರು.
ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿರುವ ಹಿರಿಯ ವಕೀಲ ರಮೇಶ್ ಪುತ್ತಿಗೆ ಅವರು “2023ರಲ್ಲಿ ದೇಶದಲ್ಲಿ ನಡೆದ ಆನೆ ಗಣತಿಯ ಪ್ರಕಾರ 27 ಸಾವಿರ ಆನೆಗಳಿದ್ದು, ಅದರಲ್ಲಿ ಕರ್ನಾಟಕದಲ್ಲಿ 7,000 ಆನೆಗಳಿವೆ. ಆನೆ ಸಂತತಿ ರಾಜ್ಯದಲ್ಲಿ ಹೆಚ್ಚಾಗಿದ್ದು, ಗಂಡಾನೆ ಮತ್ತು ಹೆಣ್ಣಾನೆ ಸರಾಸರಿ ಸಮಾನವಾಗಿದೆ. ಆದರೆ, ವಯಸ್ಕ ಆನೆಗಳಲ್ಲಿ ಸರಾಸರಿಯಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಗಂಡಾನೆಗಳಿಗಿಂತಲೂ ಹೆಣ್ಣಾನೆಗಳ ಪ್ರಮಾಣ ಶೇ.50ರಷ್ಟು ಕಡಿಮೆಯಿದೆ. ಗಂಡಾನೆ ಕೊಂದು ದಂತ ಮತ್ತು ಮೂಳೆಗಳನ್ನು ಅಕ್ರಮ ವ್ಯಾಪಾರಕ್ಕೆ ಬಳಕೆ ಮಾಡಲಾಗುತ್ತಿದೆ” ಎಂದು ವಿವರಿಸಿದರು.
“ಅಶ್ವತ್ಥಾಮ ಆನೆ ಅನಾರೋಗ್ಯದಿಂದ ಮೃತಪಟ್ಟಿದೆ ಎಂದು ಹೇಳಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಸೋಲಾರ್ ತಂತಿ ತಗುಲಿ ಸಾವಿಗೀಡಾಗಿದೆ ಎಂದು ತಿಳಿದಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸೋಲಾರ್ ವಿದ್ಯುತ್ ತಡೆಗೋಡೆ ಹಾಕವುದಕ್ಕೂ ನಿರ್ಬಂಧವಿದೆ” ಎಂದರು.