
ತನ್ನ ಚ್ಯವನ್‌ಪ್ರಾಶ್ ಉತ್ಪನ್ನದ ವಿರುದ್ಧ ಪತಂಜಲಿ ಆಯುರ್ವೇದ್ ಅವಹೇಳನಕಾರಿ ಜಾಹೀರಾತು ನೀಡುತ್ತಿದೆ ಎಂದು ಆರೋಪಿಸಿ ಗ್ರಾಹಕ ಸರಕುಗಳ ದೈತ್ಯ ಕಂಪೆನಿ ಡಾಬರ್ ಮಂಗಳವಾರ ದೆಹಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದೆ.
ಅವಹೇಳನಕಾರಿ ಜಾಹೀರಾತನ್ನು ಪ್ರಕಟಿಸದಂತೆ ಪತಂಜಲಿಗೆ ಕೂಡಲೇ ಆದೇಶ ನೀಡುವಂತೆ ಅದು ನ್ಯಾಯಾಲಯವನ್ನು ಕೋರಿದ್ದು ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರು ಪ್ರತಿವಾದಿಗಳಿಗೆ ನೋಟಿಸ್ ನೀಡಿ ಪ್ರಕರಣವನ್ನು ಜನವರಿ ಕೊನೆಯ ವಾರಕ್ಕೆ ಮುಂದೂಡಿದ್ದಾರೆ.
ಮಧ್ಯಸ್ಥಿಕೆ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವಂತೆ ನ್ಯಾಯಮೂರ್ತಿಗಳು ಆರಂಭದಲ್ಲಿ ತಿಳಿಸಿದರಾದರೂ ಡಾಬರ್ ಕೂಡಲೇ ಪರಿಹಾರ ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲೇ ವಿಚಾರಣೆಗೆ ತೀರ್ಮಾನಿಸಿದರು.
ಪತಂಜಲಿ ಆಯುರ್ವೇದ ಸಂಸ್ಥಾಪಕ ಸ್ವಾಮಿ ರಾಮ್‌ದೇವ್ ಅವರನ್ನು ಒಳಗೊಂಡ ಜಾಹೀರಾತಿಗೆ ಡಾಬರ್ ಆಕ್ಷೇಪ ವ್ಯಕ್ತಪಡಿಸಿದೆ. ಪತಂಜಲಿ ವಿಶೇಷ ಚ್ಯವನ್‌ಪ್ರಾಶ್ ಮಾತ್ರ 'ಮೂಲ ಹಾಗೂ ಅಧಿಕೃತವಾದದ್ದು; ಮಾರುಕಟ್ಟೆಯಲ್ಲಿನ ಉಳಿದ ಚ್ಯವನ್‌ಪ್ರಾಶ್ ತಯಾರಕರಿಗೆ ಈ ಸಂಪ್ರದಾಯದ ಬಗ್ಗೆ ಯಾವುದೇ ಜ್ಞಾನವಿಲ್ಲ ಪರಿಣಾಮ ಅವೆಲ್ಲವೂ ನಕಲಿ ಎಂದು ಜಾಹೀರಾತಿನಲ್ಲಿ ಅವರು ಹೇಳಿದ್ದರು.
ಡಾಬರ್ ಪರವಾಗಿ ಹಾಜರಾದ ಹಿರಿಯ ವಕೀಲ ಅಖಿಲ್ ಸಿಬಲ್ ಅವರು ಪತಂಜಲಿ ಆಯುರ್ವೇದ ಪದೇ ಪದೇ ತಪ್ಪೆಸಗುವ ರೂಢಿಗತ ಅಪರಾಧಿ ಎಂದು ವಾದಿಸಿದರು. ಕೆಲ ತಿಂಗಳುಗಳ ಹಿಂದೆ ಪತಂಜಲಿ ವಿರುದ್ಧ ದಾಖಲಾದ ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶಗಳನ್ನು, ವ್ಯಕ್ತಪಡಿಸಿದ್ದ ಅಭಿಪ್ರಾಯಗಳನ್ನು ಅವರು ಪ್ರಸ್ತಾಪಿಸಿದರು.
ಉಳಿದ ಚ್ಯವನ್‌ಪ್ರಾಶ್‌ಗಳನ್ನು ಸಾಧಾರಣ ಎಂದು ಪತಂಜಲಿ ಕರೆದಿರುವುದು ಅವುಗಳನ್ನು ಕೀಳಾಗಿ ಬಿಂಬಿಸುತ್ತದೆ.
ಶಾಸ್ತ್ರೀಯ ಆಯುರ್ವೇದ ಔಷಧವಾದ ಚ್ಯವನ್‌ಪ್ರಾಶ್‌ನ ಸಂಪೂರ್ಣ ವರ್ಗವನ್ನು ಜಾಹೀರಾತು ಅವಮಾನಿಸುತ್ತದೆ.
ಔಷಧ ಮತ್ತು ಸೌಂದರ್ಯವರ್ಧಕ ಕಾಯಿದೆ ಪ್ರಕಾರ ಎಲ್ಲಾ ಚ್ಯವನ್‌ಪ್ರಾಶ್ ಉತ್ಪನ್ನಗಳು ಪ್ರಾಚೀನ ಆಯುರ್ವೇದ ಗ್ರಂಥಗಳಲ್ಲಿ ವಿವರಿಸಿರುವ ನಿರ್ದಿಷ್ಟ ಸೂತ್ರಗಳು ಮತ್ತು ಪದಾರ್ಥಗಳಿಗೆ ಬದ್ಧವಾಗಿರಬೇಕು. ಆದರೆ ಮಾರುಕಟ್ಟೆಯಲ್ಲಿ 61.6% ಪಾಲು ಹೊಂದಿರು ಡಾಬರ್‌ನಂತಹ ಕಂಪೆನಿಗಳ ಚ್ಯವನ್‌ಪ್ರಾಶ್‌ಅನ್ನು ಸಾಧಾರಣ ಎಂದಿರುವುದು ತಪ್ಪುದಾರಿಗೆಳೆಸುವುದಾಗಿದ್ದು, ಹಾನಿ ಉಂಟು ಮಾಡುತ್ತದೆ.
ಜಾಹೀರಾತಿನಲ್ಲಿನ ತಪ್ಪಾದ ನಿರೂಪಣೆ ಗ್ರಾಹಕರನ್ನು ತಪ್ಪುದಾರಿಗೆಳೆಯುವುದಲ್ಲದೆ, ಸರಿಯಾದ ಚ್ಯವನ್‌ಪ್ರಾಶ್ ತಯಾರಿಕೆಗೆ ಅಗತ್ಯವಾದ ಜ್ಞಾನ ಅಥವಾ ದೃಢೀಕರಣದ ಕೊರತೆಯನ್ನು ಸೂಚಿಸುವ ಮೂಲಕ ಇತರ ಬ್ರ್ಯಾಂಡ್‌ಗಳನ್ನು ಅವಮಾನಿಸುತ್ತದೆ.
ಉಳಿದ ಬ್ರಾಂಡ್‌ನ ಚ್ಯವನ್‌ಪ್ರಾಶ್ ಸೇವಿಸುವುದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂದಿರುವುದು ಸಾರ್ವಜನಿಕ ಸುರಕ್ಷತೆ ಕುರಿತಾದ ಆಯುಷ್ ಸಚಿವಾಲಯ ನೀಡಿರುವ ಸಲಹೆಗಳನ್ನು ಪಾಲಿಸಿಲ್ಲ ಎಂಬುದನ್ನು ತಿಳಿಸುತ್ತದೆ.
ಕಳೆದ 3 ದಿನಗಳಲ್ಲಿವ ವಿವಿಧ ಟಿವಿ ವಾಹಿನಿಗಳು ಹಾಗೂ ಪತ್ರಿಕೆಗಲಲ್ಲಿ ಈ ಜಾಹೀರಾತುಗಳು 900 ಬಾರಿ ಪ್ರಸಾರ ಮತ್ತು ಪ್ರಕಟವಾಗಿದ್ದು, ಸಾರ್ವಜನಿಕರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ.
ಪತಂಜಲಿ ಆಯುರ್ವೇದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಜಯಂತ್ ಮೆಹ್ತಾ ಅವರು ದಾವೆಯ ನಿರ್ವಹಣಾರ್ಹತೆಯನ್ನು ಪ್ರಶ್ನಿಸಿದರು. ಪ್ರತಿಕ್ರಿಯೆ ಸಲ್ಲಿಸಲು ಕಾಲಾವಕಾಶ ಕೋರಿದರು.