ಪತಂಜಲಿ ಆಯುರ್ವೇದ ಮತ್ತು ಬಾಬಾ ರಾಮ್‌ದೇವ್ ಅವರ ಆಯುರ್ವೇದ ಹಲ್ಲಿನ ಪುಡಿಯಾದ ದಿವ್ಯ ದಂತ ಮಂಜನ್‌ನಲ್ಲಿ ಪ್ರಾಣಿಜನ್ಯ ಅಂಶವಿದ್ದರೂ ಸಸ್ಯಜನ್ಯ ಎಂಬುದಾಗಿ ಸುಳ್ಳೇ ಘೋಷಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.
ಕೇಂದ್ರ ಸರ್ಕಾರ ಮತ್ತು ಅದರ ಉತ್ಪನ್ನಗಳನ್ನು ತಯಾರಿಸುವ ಪತಂಜಲಿಯ ದಿವ್ಯ ಫಾರ್ಮಸಿಗೆ ನ್ಯಾಯಮೂರ್ತಿ ಸಂಜೀವ್ ನರುಲಾ ಅವರು ನೋಟಿಸ್ ಜಾರಿ ಮಾಡಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 28 ರಂದು ನಡೆಯಲಿದೆ.
ದಿವ್ಯ ದಂತ ಮಂಜನ ಪೊಟ್ಟಣದಲ್ಲಿ ಸಸ್ಯಜನ್ಯ ಉತ್ಪನ್ನಗಳೆಂದು ಘೋಷಿಸುವ ಹಸಿರು ಚುಕ್ಕೆ ಪ್ರದರ್ಶಿಸಿದ್ದರೂ ಅದರಲ್ಲಿ ಮೀನಿನಿಂದ ಪಡೆಯಲಾದ ಸೆಪಿಯಾ ಅಫಿಷಿನಾಲಿಸ್ (ಸಾಮಾನ್ಯ ಕಟ್ಲ್‌ಫಿಶ್) ಅಂಶ ಇದೆ ಎಂದು ವಕೀಲ ಯತಿನ್ ಶರ್ಮಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಇದು ದಿಕ್ಕುತಪ್ಪಿಸುವ ಬ್ರಾಂಡಿಂಗ್‌ಗೆ ಸಮನಾಗಿದ್ದು ರಾಮದೇವ್ ಹಾಗೂ ಇತರರು ಕೂಡ ಇದನ್ನು ಸಸ್ಯಜನ್ಯ ಉತ್ಪನ್ನ ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದರು.
ಇದು ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯಿದೆಯನ್ನು ಕೂಡ ಉಲ್ಲಂಘಿಸುತ್ತದೆ ಎಂದು ಶರ್ಮಾ ಆರೋಪಿಸಿದ್ದರು.
ಪುರಾವೆ ಆಧಾರಿತ ಔಷಧಗಳನ್ನು ಗುರಿಯಾಗಿಸಿಕೊಂಡು ದಾರಿ ತಪ್ಪಿಸುವ ಜಾಹೀರಾತು ಪ್ರಕಟಿಸಿದ್ದ ಪತಂಜಲಿ ಆಯುರ್ವೇದ ಮತ್ತದರ ಪ್ರವರ್ತಕರಾದ ಬಾಬಾ ರಾಮದೇವ್ ಹಾಗೂ ಆಚಾರ್ಯ ಬಾಲಕೃಷ್ಣ ಅವರು ಸುಪ್ರೀಂ ಕೋರ್ಟ್‌ನಿಂದ ಈ ಹಿಂದೆ ಕಠಿಣ ಕ್ರಮಗಳನ್ನು ಎದುರಿಸಿದ್ದರು.
ಕೋವಿಡ್-19 ಲಸಿಕೆ ಅಭಿಯಾನ ಮತ್ತು ಆಧುನಿಕ ಔಷಧದ ವಿರುದ್ಧ ನಡೆದಿದೆ ಎನ್ನಲಾದ ಅಪಪ್ರಚಾರ ಪ್ರಶ್ನಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿದ್ದ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ಹೂಡಲಾಗಿತ್ತು.