[ಕೆಆರ್‌ಎಸ್‌ ಸಮೀಪ ಕಲ್ಲು ಗಣಿಗಾರಿಕೆ] ಗಣಿ ಮಾಲೀಕರ ಮನವಿ ಪರಿಗಣಿಸಿ ಕ್ರಮವಹಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಶ್ರೀ ಕೃಷ್ಣ ಸ್ಟೋನ್ ಕ್ರಷಿಂಗ್ ಇಂಡಸ್ಟ್ರೀಸ್‌ ಸೇರಿದಂತೆ 17 ಗಣಿ ಕಂಪೆನಿಗಳ ಮಾಲೀಕರು ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
[ಕೆಆರ್‌ಎಸ್‌ ಸಮೀಪ ಕಲ್ಲು ಗಣಿಗಾರಿಕೆ] ಗಣಿ ಮಾಲೀಕರ ಮನವಿ ಪರಿಗಣಿಸಿ ಕ್ರಮವಹಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

Stone crushers and Karnataka HC

ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ ಮತ್ತು ಜೆಡಿಎಸ್‌ ನಾಯಕರ ನಡುವಿನ ರಾಜಕೀಯ ಮೇಲಾಟಕ್ಕೆ ಕಾರಣವಾಗಿದ್ದ ಜಿಲ್ಲೆಯ ಬೇಬಿ ಬೆಟ್ಟದ ಕಾವಲು ಮತ್ತು ಚಿನಕುರಳಿ ಗ್ರಾಮಗಳಲ್ಲಿನ ಕಲ್ಲು ಗಣಿಗಾರಿಕೆ ಘಟಕಗಳ ಕಾರ್ಯಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಚಿಸಿರುವ ಸಂಬಂಧ ಗಣಿ ಮಾಲೀಕರ ಮನವಿಯನ್ನು ಮೂರು ವಾರದಲ್ಲಿ ಪರಿಗಣಿಸಿ ಕಾನೂನು ಪ್ರಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಬುಧವಾರ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದ್ದು, ಮನವಿಯನ್ನು ವಿಲೇವಾರಿ ಮಾಡಿತು.

ಶ್ರೀ ಕೃಷ್ಣ ಸ್ಟೋನ್ ಕ್ರಷಿಂಗ್ ಇಂಡಸ್ಟ್ರೀಸ್‌ ಸೇರಿದಂತೆ 17 ಗಣಿ ಕಪೆನಿಗಳ ಮಾಲೀಕರು ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಎಲ್ ಎಂ ಚಿದಾನಂದಯ್ಯ ಅವರು “ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್ ಜಲಾಶಯಕ್ಕೆ ಹಾನಿಯಾಗುತ್ತಿದೆ ಎಂಬ ವಿಚಾರ ಮುನ್ನೆಲೆಗೆ ಬಂದಿದೆ. ಇದರಿಂದ ಸ್ಪೋಟಕ ಬಳಸಿ ಕಲ್ಲು ಗಣಿಗಾರಿಕೆ ಪ್ರಯೋಗ ನಡೆಸುವವರೆಗೆ ಗಣಿ ಚಟುವಟಿಕೆ ನಿಲ್ಲಿಸುವಂತೆ ಸೂಚಿಸಿ ಅರ್ಜಿದಾರರ ಕಲ್ಲು ಗಣಿಗಾರಿಕೆ ಘಟಕಗಳಿಗೆ ಸರ್ಕಾರ ನೋಟಿಸ್ ನೀಡಿದೆ. ಅಲ್ಲದೆ, ಗಣಿ ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತುಪಡಿಸಿದೆ” ಎಂದರು.

“ವಾಸ್ತವದಲ್ಲಿ ಕಲ್ಲು ಗಣಿಗಾರಿಕೆ ಘಟಕಗಳಲ್ಲಿ ಸೋಟಕ ವಸ್ತು ಬಳಸಿ ಗಣಿಗಾರಿಕೆ ನಡೆಸುತ್ತಿಲ್ಲ. ಮೇಲಾಗಿ ಕೆಆರ್‌ಎಸ್ ಜಲಾಶಯಕ್ಕಿಂತ ಏಳೆಂಟು ಕಿ ಮೀ ದೂರದಲ್ಲಿ ಅರ್ಜಿದಾರರ ಗಣಿಗಾರಿಕೆ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಅವುಗಳ ಕಾರ್ಯಚರಣೆಯಿಂದ ಕೆಆರ್‌ಎಸ್ ಜಲಾಶಯಕ್ಕೆ ಯಾವುದೇ ರೀತಿ ಸಮಸ್ಯೆಯಾಗುತ್ತಿಲ್ಲ. ಹೀಗಾಗಿ, ಸರ್ಕಾರದ ನಡೆ ಕಾನೂನು ಬಾಹಿರವಾಗಿದ್ದು, ಅರ್ಜಿದಾರರಿಗೆ ನೀಡಲಾಗಿರುವ ನೋಟಿಸ್‌ಗಳನ್ನು ರದ್ದುಪಡಿಸಬೇಕು” ಎಂದು ನ್ಯಾಯಾಲಯಕ್ಕೆ ಕೋರಿದರು.

Also Read
ಕೆಆರ್‌ಎಸ್‌ ಸುತ್ತಮುತ್ತ ಕಲ್ಲು ಗಣಿಗಾರಿಕೆ: ಕ್ವಾರಿಗಳ ಪರವಾನಗಿ ರದ್ದು ಮಾಡಿದ್ದ ಡಿಸಿ ಆದೇಶ ವಜಾ ಮಾಡಿದ ಹೈಕೋರ್ಟ್‌

ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸರ್ಕಾರಿ ವಕೀಲ ಮಹೇಂದ್ರ ಅವರು “ಕೆಆರ್‌ಎಸ್ ಜಲಾಶಯಕ್ಕೆ ಕಲ್ಲು ಗಣಿಗಾರಿಕೆಯಿಂದ ಹಾನಿಯಾಗುತ್ತಿದೆ ಎಂಬ ಬಗ್ಗೆ ವೈಜ್ಜಾನಿಕ ಅಧ್ಯಯನ ನಡೆಸಲಾಗುತ್ತಿದೆ. ಆದ್ದರಿಂದ ಅರ್ಜಿದಾರರ ಕಲ್ಲು ಗಣಿಗಾರಿಕೆ ಘಟಕಗಳ ಕಾರ್ಯಚರಣೆಯನ್ನು ನಿಲ್ಲಿಸಲು ಸರ್ಕಾರ ಸೂಚಿಸಿದೆ. ಅರ್ಜಿದಾರರ ಗಣಿಗಾರಿಕೆ ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತುಪಡಿಸಲಾಗಿದೆ” ಎಂದರು.

ಪಕ್ಷಕಾರರ ವಾದ ಆಲಿಸಿದ ಪೀಠವು “ಸರ್ಕಾರದ ನೋಟಿಸ್‌ಗೆ ಅರ್ಜಿದಾರರು ಒಂದು ವಾರದೊಳಗೆ ಉತ್ತರಿಸಬೇಕು. ಸರ್ಕಾರವು ಅದನ್ನು ಪರಿಗಣಿಸಿ ಮೂರು ವಾರದೊಳಗೆ ಕಾನೂನು ಪ್ರಕಾರ ನಿರ್ಧಾರ ಕೈಗೊಳ್ಳಬೇಕು” ಎಂದು ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.

Related Stories

No stories found.
Kannada Bar & Bench
kannada.barandbench.com