ಬಂದ್‌ ವೇಳೆ ಸಾರ್ವಜನಿಕ ಆಸ್ತಿಗೆ ಹಾನಿ: ಕ್ಲೇಮ್‌ ಕಮಿಷನರ್‌ ನೇಮಕದ ಬಗ್ಗೆ ಹೈಕೋರ್ಟ್‌ಗೆ ಮಾಹಿತಿ ನೀಡಿದ ಸರ್ಕಾರ

“ಆದೇಶ ಪಾಲನೆಗೆ ಸಂಬಂಧಿಸಿದಂತೆ ಸ್ಥಿತಿಗತಿ ಮತ್ತು ಅನುಪಾಲನಾ ವರದಿ ಸಲ್ಲಿಸಲು ಎರಡು ವಾರಗಳ ಕಾಲಾವಕಾಶವನ್ನು ರಾಜ್ಯ ಸರ್ಕಾರದ ವಕೀಲರು ಕೋರಿದ್ದಾರೆ” ಎಂದು ಪೀಠವು ಆದೇಶದಲ್ಲಿ ದಾಖಲಿಸಿದ್ದು, ಫೆಬ್ರವರಿ 2ಕ್ಕೆ ವಿಚಾರಣೆ ಮುಂದೂಡಿತು.
Vatal Nagaraj and Karnataka HC

Vatal Nagaraj and Karnataka HC

Published on

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸಿದ್ದಾಗ ಕರೆ ನೀಡಿದ್ದ ಕರ್ನಾಟಕ ಬಂದ್‌ ವೇಳೆ ಸಾರ್ವಜನಿಕ ಆಸ್ತಿ-ಪಾಸ್ತಿಗೆ ನಷ್ಟ ಉಂಟು ಮಾಡಿದ್ದನ್ನು ವಸೂಲು ಮಾಡುವುದಕ್ಕಾಗಿ ಕ್ಲೇಮ್‌ ಕಮಿಷನರನ್ನಾಗಿ (ಪರಿಹಾರ ಆಯುಕ್ತ) ನಿವೃತ್ತ ಜಿಲ್ಲಾ ನ್ಯಾಯಾಧೀಶ ಸಿ ಆರ್‌ ಬೆನಕನಹಳ್ಳಿ ಅವರನ್ನು ನೇಮಕ ಮಾಡಿ, ಮೂಲಸೌಕರ್ಯ ಒದಗಿಸಿರುವ ಬಗ್ಗೆ ರಾಜ್ಯ ಸರ್ಕಾರವು ಮಂಗಳವಾರ ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಿತು.

2018ರ ಜನವರಿ 25 ಮತ್ತು ಫೆಬ್ರವರಿ 4ರ ನಡುವೆ ಎರಡು ಬಂದ್‌ಗೆ ಕರೆ ನೀಡಿದ್ದ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಮುಖ್ಯಸ್ಥ ವಾಟಾಳ್‌ ನಾಗರಾಜ್‌ ಅವರನ್ನು ಬಂದ್‌ಗೆ ಕರೆ ನೀಡದಂತೆ ತಡೆಯಬೇಕು. ಬಂದ್‌ನಿಂದ ಉಂಟಾದ ನಷ್ಟವನ್ನು ಅವರಿಂದ ತುಂಬಿಸಿಕೊಳ್ಳಬೇಕು ಎಂಬುದು ಸೇರಿದಂತೆ ಸಂಬಂಧಿತ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“2020ರ ಫೆಬ್ರವರಿ 25ರ ಆದೇಶ ಪಾಲನೆಗೆ ಸಂಬಂಧಿಸಿದಂತೆ ಸ್ಥಿತಿಗತಿ ಮತ್ತು ಅನುಪಾಲನಾ ವರದಿ ಸಲ್ಲಿಸಲು ಎರಡು ವಾರಗಳ ಕಾಲಾವಕಾಶವನ್ನು ರಾಜ್ಯ ಸರ್ಕಾರದ ವಕೀಲರು ಕೋರಿದ್ದಾರೆ” ಎಂದು ಪೀಠವು ಆದೇಶದಲ್ಲಿ ದಾಖಲಿಸಿದ್ದು, ಫೆಬ್ರವರಿ 2ಕ್ಕೆ ವಿಚಾರಣೆ ಮುಂದೂಡಿತು.

Also Read
ಬಿಇಎಂಎಲ್‌ ಖಾಸಗೀಕರಣದ ವಿರುದ್ಧದ ಪಿಐಎಲ್: ಕೇಂದ್ರಕ್ಕೆ ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಜಿ ಆರ್‌ ಮೋಹನ್‌ ಅವರು “ಬಂದ್‌ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಮಾಡಿದ್ದು, ಸರ್ಕಾರಿ ಬಸ್‌ಗಳು, ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಸಂಬಂಧ ಎಫ್‌ಐಆರ್‌ ದಾಖಲಿಸಲಾಗಿದ್ದು, ಫೋಟೊಗಳನ್ನು ಸಲ್ಲಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರವು ಸ್ಥಿತಿಗತಿ ವರದಿ ಸಲ್ಲಿಸಬೇಕಿದೆ” ಎಂದು ಪೀಠದ ಗಮನಸೆಳೆದರು.

ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ಎಸ್‌ ರಾಜಶೇಖರ್‌ ಅವರು “ನಿವೃತ್ತ ನ್ಯಾಯಮೂರ್ತಿ ಸಿ ಆರ್‌ ಬೆನಕನಹಳ್ಳಿ ಅವರು ಕ್ಲೇಮ್‌ ಕಮಿಷನರ್‌ ನೇಮಕವಾಗಿದ್ದು, ಅಧಿಕಾರ ಸ್ವೀಕರಿಸಿದ್ದಾರೆ. ಕ್ಲೇಮ್‌ ಕಮಿಷನರ್‌ ಅವರ ಕಚೇರಿಯು ರಾಮನಗರದಲ್ಲಿದ್ದು ಮೂಲಸೌಕರ್ಯ ಕಲ್ಪಿಸಲಾಗಿದೆ. ಅಧಿಸೂಚನೆ ಹೊರಡಿಸುವಂತೆ ಕ್ಲೇಮ್‌ ಕಮಿಷನರ್‌ ನಿರ್ದೇಶಿಸಿದ್ದು ಅದನ್ನು ಪಾಲಿಸಲಾಗುವುದು. ಏನೆಲ್ಲಾ ಕ್ರಮಕೈಗೊಳ್ಳಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಎರಡು ವಾರಗಳಲ್ಲಿ ಸ್ಥಿತಿಗತಿ ವರದಿ ಸಲ್ಲಿಸಲಾಗುವುದು” ಎಂದರು.

Kannada Bar & Bench
kannada.barandbench.com