‘ಎನ್ಎಸ್ಇ ಇತಿಹಾಸದ ಕರಾಳ ಅವಧಿ’: ಚಿತ್ರಾ ರಾಮಕೃಷ್ಣ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ ದೆಹಲಿ ನ್ಯಾಯಾಲಯ

ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ಚಿತ್ರಾ ಅವರನ್ನು ಸಿಬಿಐ ಬಂಧಿಸುವ ಸಾಧ್ಯತೆ ಇದೆ.
‘ಎನ್ಎಸ್ಇ ಇತಿಹಾಸದ ಕರಾಳ ಅವಧಿ’: ಚಿತ್ರಾ ರಾಮಕೃಷ್ಣ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ ದೆಹಲಿ ನ್ಯಾಯಾಲಯ
Published on

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಎನ್‌ಎಸ್‌ಇಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದಲ್ಲಿ ಸಿಬಿಐನಿಂದ ಬಂಧನ ಭೀತಿ ಎದುರಿಸುತ್ತಿರುವ ಕೇಂದ್ರದ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಚಿತ್ರಾ ರಾಮಕೃಷ್ಣ ಮತ್ತು ಸಿಇಒ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ಶನಿವಾರ ತಿರಸ್ಕರಿಸಿದೆ.

ಸಾರ್ವಜನಿಕ ಬೊಕ್ಕಸದ ನಷ್ಟಕ್ಕೆ ಆಳವಾಗಿ ಸಂಬಂಧ ಹೊಂದಿರುವ ಪಿತೂರಿಗಳನ್ನು ಒಳಗೊಂಡ ಕಾರಣಕ್ಕೆ ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿದ ಜಾಮೀನು ಪ್ರಕರಣಗಳನ್ನು ವಿಭಿನ್ನವಾಗಿ ಪರಿಗಣಿಸಬೇಕು ಎಂದು ರೋಸ್ ಅವೆನ್ಯೂ ನ್ಯಾಯಾಲಯದ ವಿಶೇಷ ಸಿಬಿಐ ನ್ಯಾಯಾಧೀಶ ಸಂಜೀವ್ ಅಗರ್ವಾಲ್ ತಿಳಿಸಿದರು.

"ನಿರ್ದಿಷ್ಟ ಸಮಯದಲ್ಲಿ ಎನ್‌ಎಸ್‌ಇಯ ಯಾವುದೇ ಕಾರ್ಯಕಾರಿ ಮುಖ್ಯಸ್ಥರಿಗೆ ಅರಿವಿಲ್ಲದೆ ಮತ್ತು (ಅವರ) ಸಕ್ರಿಯ ಸಹಕಾರವಿಲ್ಲದೆ ಈ ರೀತಿಯ ಕೋ ಲೊಕೇಷನ್‌ ವಂಚನೆ ಸಾಧ್ಯವಿಲ್ಲ, ಈ ಅವಧಿಯನ್ನುಎನ್‌ಎಸ್‌ಇ ಇತಿಹಾಸದ ಕರಾಳ ಅವಧಿ ಎಂದು ಪರಿಗಣಿಸಬಹುದು" ಎಂದು ನ್ಯಾಯಾಲಯ ಹೇಳಿದೆ.

Also Read
ವಂಚನೆ ಆರೋಪ: ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸದಂತೆ ಅನಿಲ್ ಅಂಬಾನಿಗೆ ಸೆಬಿ ನಿರ್ಬಂಧ

ವಿಚಾರಣೆ ನಡೆದ ಮೂರು ದಿನಗಳ ಕಾಲ ರಾಮಕೃಷ್ಣ ಅವರು ತನ್ನ ಪ್ರಶ್ನೆಗಳಿಗೆ ಸೂಕ್ತ ಪ್ರತಿಕ್ರಿಯೆ ನೀಡಿಲ್ಲ ಎಂದು ಸಿಬಿಐ ನೀಡಿದ ಉತ್ತರವನ್ನು ನ್ಯಾಯಾಲಯ ಗಮನಿಸಿತು. ಸಹ ಆರೋಪಿ ಆನಂದ್ ಸುಬ್ರಮಣಿಯನ್ ಈಗಾಗಲೇ ಪೊಲೀಸ್ ವಶದಲ್ಲಿರುವ ಕಾರಣ, ಸತ್ಯ ಬಯಲಿಗೆಳೆಯಲು ಇಬ್ಬರನ್ನೂ ವಿಚಾರಣೆಗೆ ಒಳಪಡಿಸಬೇಕು ಎಂದು ಸಿಬಿಐ ವಾದಿಸಿದೆ.

ಹಗರಣ ನಡೆದು ನಾಲ್ಕು ವರ್ಷ ಕಳೆದಿದ್ದರೂ ಸಾಮಾನ್ಯ ಜನರ ಹಣವನ್ನು ಭೋಗಿಸುತ್ತಿದ್ದ ಹಗರಣಕೋರರು ಹಾಗೂ ಇನ್ನಿತರರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಸಿಬಿಐನ ಭಾರೀ ನಿಷ್ಕ್ರಿಯತೆಯನ್ನು ತೋರಿಸುತ್ತಿದೆ ಎಂದು ನ್ಯಾಯಾಲಯ ಇದೇ ವೇಳೆ ಹೇಳಿತು.

ಆರೋಪಿಗೆ ಸಂಬಂಧಿಸಿದಂತೆ ಎನ್‌ಎಸ್‌ಇ ತುಂಬಾ ದಯೆ ಮತ್ತು ಸೌಮ್ಯತೆಯಿಂದ ವರ್ತಿಸಿದೆ ಎಂದು ಕೂಡ ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡರು. “ಈ ಹಣಕಾಸಿನ ಅವ್ಯವಹಾರದಿಂದಾಗಿ ಎನ್‌ಎಸ್ಇ ಮೇಲಿನ ವಿಶ್ವಾಸ ತೀವ್ರ ರೀತಿಯಲ್ಲಿ ಅಲುಗಾಡಿರಬಹುದು ಮತ್ತು ಹದಗೆಟ್ಟಿರಬಹುದು” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಹಿಮಾಲಯದ ಯೋಗಿಯೊಬ್ಬರ ಸಲಯೆಯಂತೆ ತಾನು ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಆರಂಭದಲ್ಲಿ ಹೇಳಿಕೊಂಡು ಎನ್‌ಎಸ್‌ಇಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಸಹ ಆರೋಪಿಗಳು ಮತ್ತಿತರರಿಗೆ ಸೋರಿಕೆ ಮಾಡಿದ ಆರೋಪ ಚಿತ್ರಾ ಅವರ ಮೇಲಿದೆ.

Kannada Bar & Bench
kannada.barandbench.com