ಕಪ್ಪು ವರ್ಣೀಯ ಮಹಿಳೆಯರನ್ನು ಗುರಿಯಾಗಿಸಿಕೊಂಡ ʼಫೇರ್‌ನೆಸ್‌ʼ ಉದ್ಯಮ: ಛತ್ತೀಸ್‌ಗಢ ಹೈಕೋರ್ಟ್ ಬೇಸರ

ತಾನು ಕಪ್ಪು ವರ್ಣೀಯಳು ಎಂಬ ಕಾರಣಕ್ಕಾಗಿ ಪತಿ ಕ್ರೌರ್ಯ ಎಸಗಿದ್ದಾರೆ ಎಂದು ಪತ್ನಿ ನ್ಯಾಯಾಲಯದಲ್ಲಿ ದೂರಿದ್ದರು.
ಛತ್ತೀಸ್ ಗಢ ಹೈಕೋರ್ಟ್
ಛತ್ತೀಸ್ ಗಢ ಹೈಕೋರ್ಟ್

ಕಪ್ಪು ವರ್ಣದ ಮಹಿಳೆಯರನ್ನು ಹೆಚ್ಚಾಗಿ ಅಭದ್ರತೆ ಅನುಭವಿಸುತ್ತಿರುವಂತೆ ಚಿತ್ರಿಸಲಾಗುತ್ತಿದ್ದು ಫೇರ್‌ನೆಸ್‌ ಕ್ರೀಮ್‌ ನೀಡುವವರೆಗೆ ಅಂತಹವರು ಯಶಸ್ವಿಯಾಗುವುದಿಲ್ಲ ಎಂಬ ಧೋರಣೆ ಬದಲಾಗಬೇಕಿದೆ ಎಂದು ಛತ್ತೀಸ್‌ಗಢ ಹೈಕೋರ್ಟ್ ಈಚೆಗೆ ಅಭಿಪ್ರಾಯಪಟ್ಟಿದೆ.

ತಾನು ಕಪ್ಪು ವರ್ಣೀಯಳು ಎಂಬ ಕಾರಣಕ್ಕಾಗಿ ಪತಿ ಕ್ರೌರ್ಯ ಎಸಗಿದ್ದಾರೆ ಎಂದು ಪತ್ನಿ ನೀಡಿದ್ದ ದೂರಿನ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಗೌತಮ್ ಭಾದುರಿ ಮತ್ತು ದೀಪಕ್ ಕುಮಾರ್ ತಿವಾರಿ ಅವರಿದ್ದ ಪೀಠ ಈ ವಿಚಾರ ಹೇಳಿದೆ.

ಮನೆಗಳಲ್ಲಿ ಇಂತಹ ವಿಚಾರಗಳನ್ನು ಹೇಗೆ ಮಾತನಾಡಲಾಗುತ್ತದೆ ಎಂಬುದರಿಂದ ಹಿಡಿದು ಚರ್ಮದ ಬಣ್ಣ ಆಧರಿಸಿ ನಡೆಯುವ ತಾರತಮ್ಯ ತೊಡೆದುಹಾಕುವವರೆಗೆ ಸಮಾಜ ಬದಲಾಗಬೇಕಾದ ಅಗತ್ಯವನ್ನು ನ್ಯಾಯಾಲಯ ಒತ್ತಿ ಹೇಳಿತು.

ಕಪ್ಪು ಚರ್ಮದ ವ್ಯಕ್ತಿಗಳನ್ನು ಗೌರ ವರ್ಣದವರಂತೆ ನೋಡುವುದಿಲ್ಲ. ಸೌಂದರ್ಯವರ್ಧಕ ಉದ್ಯಮ ಕೂಡ "ಚರ್ಮವನ್ನು ಹೊಳಪುಗೊಳಿಸುವ" ಉತ್ಪನ್ನಗಳೊಂದಿಗೆ ಕಪ್ಪು ವರ್ಣೀಯ ಮಹಿಳೆಯರನ್ನು ಗುರಿಯಾಗಿಸಿಕೊಂಡಿದೆ ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ.

"ಫೇರ್‌ನೆಸ್‌ ಕ್ರೀಮ್‌ ಬಳಸುವವರೆಗೂ ಕಪ್ಪು ವರ್ಣೀಯ ಮಹಿಳೆ ಜೀವನದಲ್ಲಿ ಯಶಸ್ವಿಯಾಗುವುದಿಲ್ಲ ಎಂದು ಆತ್ಮವಿಶ್ವಾಸರಹಿತಳನ್ನಾಗಿ, ಅಭದ್ರತೆಯ ಭಾವನೆಯ ವ್ಯಕ್ತಿಯಾಗಿ ಕಪ್ಪು ವರ್ಣೀಯ ಮಹಿಳೆಯನ್ನು ಚಿತ್ರಿಸುವ ಸಾಧ್ಯತೆ ಇದೆ. ಮನುಕುಲದ ಇಡೀ ಸಮಾಜ ಗೌರವರ್ಣಕ್ಕೆ ಆದ್ಯತೆ ನೀಡದಂತೆ ಮನೆಯಲ್ಲಿ ನಡೆಯುವ ಸಂವಾದವನ್ನು ಬದಲಿಸಿಕೊಳ್ಳಬೇಕಿದೆ" ಎಂದು ನ್ಯಾಯಾಲಯ ನುಡಿದಿದೆ.

ತನ್ನ ಹೆಂಡತಿ ತನ್ನನ್ನು ತೊರೆದಿದ್ದು, ತಮ್ಮ ಪ್ರಾಮಾಣಿಕ ಪ್ರಯತ್ನಗಳ ಹೊರತಾಗಿಯೂ ವೈವಾಹಿಕ ಗೃಹಕ್ಕೆ ಮರಳಲು ನಿರಾಕರಿಸಿದ್ದಾಳೆ. ಯಾವುದೇ ಸ್ಪಷ್ಟ ಕಾರಣವಿಲ್ಲದೆ, ಜೀವನಾಂಶಕ್ಕಾಗಿ ಕಾನೂನು ಕ್ರಮ ಪ್ರಾರಂಭಿಸಿದ್ದಾಳೆ ಎಂದು ಪತಿ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಆತ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ಹೇಳಿದೆ.

ಆದರೆ ಈ ವಾದ ನಿರಾಕರಿಸಿದ ಪತ್ನಿ "ಪತಿ ತನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದು ಕ್ರೌರ್ಯ ಅನುಭವಿಸಿದ್ದೇನೆ. ಇದರಿಂದಾಗಿ ತಾನು ವೈವಾಹಿಕ ಗೃಹ ತೊರೆಯಬೇಕಾಯಿತು. ತನ್ನ ಕಪ್ಪು ಚರ್ಮದ ಬಗ್ಗೆ ಆತ ಅಪಹಾಸ್ಯ ಮಾಡಿದ್ದಾನೆ. ಗರ್ಭಾವಸ್ಥೆಯಲ್ಲಿದ್ದಾಗ ಆತನಿಂದ ದೈಹಿಕ ಹಲ್ಲೆಗೆ ಒಳಗಾಗಿದ್ದೇನೆ. ನನ್ನ ಕಪ್ಪು ಚರ್ಮದ ಕಾರಣಕ್ಕೆ ಆತ ಬೇರೊಂದು ಮದುವೆಯಾಗಲು ಹೊರಟಿದ್ದಾನೆ" ಎಂದಿದ್ದರು.

ವಾದ ಮತ್ತು ಸಾಕ್ಷ್ಯಗಳನ್ನು ಗಮನಿಸಿದ ನ್ಯಾಯಾಲಯ ಘಟನೆಗಳ ಬಗ್ಗೆ ಪತ್ನಿಯ ಹೇಳಿಕೆ ಹೆಚ್ಚು ತಾರ್ಕಿಕವಾಗಿ ತೋರುತ್ತಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಕಪ್ಪು ವರ್ಣಕ್ಕಿಂತಲೂ ಗೌರ ವರ್ಣದ ಚರ್ಮಕ್ಕಿರುವ ಸಾಮಾಜಿಕ ಆದ್ಯತೆಯನ್ನು ಉತ್ತೇಜಿಸಲು ಸಾಧ್ಯವಿಲ್ಲ ಎಂದ ನ್ಯಾಯಾಲಯ ವಿಚ್ಚೇದನಕ್ಕಾಗಿ ಪತಿ ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Chhattisgarh High Court order.pdf
Preview

Related Stories

No stories found.
Kannada Bar & Bench
kannada.barandbench.com