ಏಳು ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದಾದ ಮಕ್ಕಳ ವಿರುದ್ಧದ ಕೆಲ ಗಂಭೀರ ಕೃತ್ಯಗಳನ್ನು ʼಅಸಂಜ್ಞೇಯ ಅಪರಾಧʼ ಎಂದು ವರ್ಗೀಕರಿಸಿ 2015ರ ಬಾಲನ್ಯಾಯ ಕಾಯಿದೆಗೆ ತಿದ್ದುಪಡಿ ಮಾಡಿರುವುದನ್ನು ಪ್ರಶ್ನಿಸಿ ದೆಹಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಡಿಸಿಪಿಸಿಆರ್) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. [ಡಿಸಿಪಿಸಿಆರ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ]
ಸಂಜ್ಞೇಯ ಅಪರಾಧವಾಗಿರುವ ಮೂರು ವರ್ಷದಿಂದ ಏಳು ವರ್ಷದವರೆಗೆ ಜೈಲು ಶಿಕ್ಷೆ ನೀಡಬಹುದಾದ ಅಪರಾಧಗಳನ್ನು ಅಸಂಜ್ಞೇಯ ಅಪರಾಧ ಎಂದು ತಿದ್ದುಪಡಿ ಮಾಡಿರುವುದು ಅಸಾಂವಿಧಾನಿಕ ಎಂದು ಘೋಷಿಸಿ ಅದನ್ನು ರದ್ದುಪಡಿಸುವಂತೆ ಅರ್ಜಿ ಪ್ರಾರ್ಥಿಸಿದೆ.
ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಮಕ್ಕಳು ಹಾಗೂ ಆರೈಕೆ, ರಕ್ಷಣೆಯ ಅಗತ್ಯವಿರುವ ಮಕ್ಕಳಿಗೆ ಸಂಬಂಧಿಸಿದ ಕಾನೂನನ್ನು ಕ್ರೋಢೀಕರಿಸಲು ಮತ್ತು ತಿದ್ದುಪಡಿ ಮಾಡಲು 2015ರ ಬಾಲಾಪರಾಧ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆಯನ್ನು ಜಾರಿಗೆ ತರಲಾಗಿತ್ತು. ಆದರೆ ಆಗಸ್ಟ್ 2021ರಲ್ಲಿ ಕಾಯಿದೆಗೆ 29 ತಿದ್ದುಪಡಿಗಳನ್ನು ಮಾಡಲಾಯಿತು. 2015ರ ಕಾಯಿದೆಯ ಸೆಕ್ಷನ್ 86ನ್ನು ತಿದ್ದುಪಡಿ ಕಾಯಿದೆಯ ಸೆಕ್ಷನ್ 26 ಬದಲಿಸಿರುವುದಕ್ಕೆ ಮನವಿ ಆಕ್ಷೇಪ ವ್ಯಕ್ತಪಡಿಸಿದೆ.
ಮೂರರಿಂದ ಏಳು ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದಾದ ಗಂಭೀರ ಅಪರಾಧಗಳನ್ನು ತಿದ್ದುಪಡಿ ಮಾಡಲಾದ ನಿಯಮಾವಳಿ ʼಅಸಂಜ್ಞೇಯ ಅಪರಾಧʼ ಎಂದು ವರ್ಗೀಕರಿಸುತ್ತದೆ. ಮಕ್ಕಳ ಮಾರಾಟ, ಒತ್ತೆ, ಬಾಲಕಾರ್ಮಿಕರ ಶೋಷಣೆ, ಭಿಕ್ಷಾಟನೆಗಾಗಿ ಮಕ್ಕಳ ನೇಮಕ, ಮಗುವಿಗೆ ಅಮಲೇರಿಸುವ ಮದ್ಯ ಅಥವಾ ಮಾದಕ ದ್ರವ್ಯ ನೀಡುವುದು ಇತ್ಯಾದಿ ಗಂಭೀರ ಅಪರಾಧಗಳನ್ನು ಕೇವಲ ʼಅಸಂಜ್ಞೇಯ ಅಪರಾಧʼವಾಗಿ ವರ್ಗೀಕರಿಸಲಾಗಿದೆ ಎಂದು ಅರ್ಜಿ ದೂರಿದೆ.
ಸಂಜ್ಞೇಯ- ಅಸಂಜ್ಞೇಯ ಅಪರಾಧಗಳಿಗೆ ಇರುವ ಸ್ಥೂಲ ವ್ಯತ್ಯಾಸ
ಸಂಜ್ಞೇಯ ಅಪರಾಧ: ಪೊಲೀಸ್ ಅಧಿಕಾರಿ ಸಿಆರ್‌ಪಿಸಿಯ ಮೊದಲನೇ ಅನುಸೂಚಿಗೆ ಅನುಗುಣವಾಗಿ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಬೇರೆ ಕಾನೂನಿನ ಮೇರೆಗೆ ವಾರೆಂಟ್ ಇಲ್ಲದೆ ದಸ್ತಗಿರಿಮಾಡಬಹುದಾದ ಅಪರಾಧ ಅಥವಾ ಮೊಕದ್ದಮೆ.
ಅಸಂಜ್ಞೇಯ ಅಪರಾಧ: ಪೊಲೀಸ್ ಅಧಿಕಾರಿ ವಾರಂಟ್ ಇಲ್ಲದೆ, ದಸ್ತಗಿರಿ ಮಾಡುವ ಅಧಿಕಾರವನ್ನು ಹೊಂದಿರದ ಅಪರಾಧ.