ಮೂಕ- ಕಿವುಡ ಬಾಲಕಿಯ ಮೇಲೆ ಅತ್ಯಾಚಾರ: ನಾಳೆ ಶಿಕ್ಷೆಯ ಪ್ರಮಾಣ ಪ್ರಕಟಿಸಲಿರುವ ಉಡುಪಿ ನ್ಯಾಯಾಲಯ

ಬಾಲಕಿ ಕೈಸನ್ನೆ ಮತ್ತು ಬರಹದ ಮೂಲಕ ಆರೋಪಿಯನ್ನು ಗುರುತಿಸಿದ್ದಳು. ಪೊಕ್ಸೊ ಕಾಯಿದೆಯಡಿ ಆರೋಪಿಯನ್ನು ಬಂಧಿಸಲಾಗಿತ್ತು.
Udupi Court complex
Udupi Court complex
Published on

ಕಿವಿ ಕೇಳದ, ಮಾತನಾಡಲು ಬಾರದ 15 ವರ್ಷ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಲು ಕಾರಣನಾದ ಆರೋಪದಡಿಯಲ್ಲಿ ಬಂಧಿತನಾಗಿದ್ದ ಆರೋಪಿಗೆ ಫೆ.22ರಂದು (ಸೋಮವಾರ) ಉಡುಪಿಯ ನ್ಯಾಯಾಲಯವೊಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ.

ಆರೋಪಿ ವಿರುದ್ಧದ ಎಲ್ಲಾ ದೋಷಾರೋಪಗಳು ರುಜುವಾತಾದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೊಕ್ಸೋ ತ್ವರಿತ ವಿಶೇಷ ನ್ಯಾಯಾಲಯದ (FTSC-1) ನ್ಯಾಯಾಧೀಶರಾದ ಯಾದವ್ ವನಮಾಲಾ ಆನಂದರಾವ್ ಆರೋಪಿಗೆ ಶಿಕ್ಷೆ ವಿಧಿಸಲಿದ್ದಾರೆ. 2019ರಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿತ್ತು.

Also Read
ಸುವಿಧಾ ಹೋಮ್ಸ್ ಪ್ರಕರಣ: ಉಡುಪಿ ಉದ್ಯಮಿ ವಿಲಾಸ್ ನಾಯಕ್ ಬಂಧನಕ್ಕೆ ವಾರೆಂಟ್ ಜಾರಿ

2018ರ ಡಿಸೆಂಬರ್‌ನಲ್ಲಿ ತನ್ನ ಮನೆ ಸಮೀಪದ ಬಾಲಕಿಯನ್ನು ನೆರೆಯ ನಿವಾಸಿ ಹರೀಶ್‌ (33) ಎಂಬಾತ ನಿರ್ಮಾಣ ಹಂತದ ಮನೆಯೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಸಂತ್ರಸ್ತ ಬಾಲಕಿಗೆ ಕಿವಿ ಕೇಳದ, ಮಾತು ಬಾರದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿರಲಿಲ್ಲ. 2019ರ ಒಂದು ರಾತ್ರಿ ಆಕೆ ಹೊಟ್ಟೆನೋವಿನಿಂದ ಬಳಲಿ ತೀವ್ರ ರಕ್ತಸ್ರಾವ ಉಂಟಾಗಿತ್ತು. ಆಸ್ಪತ್ರೆಯಲ್ಲಿ ಬಾಲಕಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದಳು. ಸಂತ್ರಸ್ತೆಯ ತಾಯಿ ಪೊಲೀಸರಿಗೆ ದೂರು ದಾಖಲಿಸಿದ್ದರು. ಬಾಲಕಿ ಕೈಸನ್ನೆ ಮತ್ತು ಬರಹದ ಮೂಲಕ ಆರೋಪಿಯನ್ನು ಗುರುತಿಸಿದ್ದಳು. ಪೊಕ್ಸೊ ಕಾಯಿದೆಯಡಿ ಆರೋಪಿಯನ್ನು ಬಂಧಿಸಲಾಗಿತ್ತು. ಕಾರ್ಕಳದ ಅಂದಿನ ಪ್ರಭಾರ ಸಿಪಿಐ ಮಹೇಶ್ ಪ್ರಸಾದ್ ತನಿಖೆ ಆರಂಭಿಸಿದ್ದರು. ಬಳಿಕ ಸಿಪಿಐ ಸಂಪತ್ ಕುಮಾರ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸಂತ್ರಸ್ತೆ ತಾಯಿ ಸೇರಿದಂತೆ 13 ಮಂದಿ ಸಾಕ್ಷ್ಯ ನುಡಿದಿದ್ದರು. ಡಿಎನ್‌ಎ ವರದಿ ಕೂಡ ಪ್ರಾಸಿಕ್ಯೂಷನ್‌ಗೆ ಪೂರಕವಾಗಿತ್ತು.

ವಿಭಿನ್ನ ಬಗೆಯಲ್ಲಿ ಸಾಕ್ಷ್ಯ ವಿಚಾರಣೆ...

ಮೂಗಿ, ಕಿವುಡ ಬಾಲಕಿ ನ್ಯಾಯಾಲಯದಲ್ಲಿ ತನ್ನ ಹೇಳಿಕೆ ದಾಖಲಿಸಲು ಉಡುಪಿ ಜಿಲ್ಲಾಸ್ಪತ್ರೆಯ ಆಗಿನ ಆಡಿಯಾಲಜಿ ವಿಭಾಗದ ಕಮಲಾ ಬೊಯರ್ ಸಹಕರಿಸಿದ್ದರು. ಅಲ್ಲದೇ ಮಣಿಪಾಲ ಕೆಎಂಸಿ ಆಸ್ಪತ್ರೆಯ ವಾಕ್‌ ಮತ್ತು ಶ್ರವಣ ಚಿಕಿತ್ಸಾ ವಿಭಾಗದ ಡಾ. ಕಿಶನ್, ಡಾ. ಭಾರ್ಗವಿ ಪಿ.ಜಿ. ಅವರು ನ್ಯಾಯಾಲಯದ ಆದೇಶದಂತೆ ಸಂತ್ರಸ್ತ ಬಾಲಕಿ ಸಾಕ್ಷಿ ವಿಚಾರಣೆ ನಡೆಸಲು ಸಹಕಾರ ನೀಡಿದ್ದರು. ಉಡುಪಿಯ ಪೊಕ್ಸೊ ವಿಶೇಷ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ವೈ ಟಿ ರಾಘವೇಂದ್ರ ಅವರು ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು.

Kannada Bar & Bench
kannada.barandbench.com