ವಕೀಲರಿಗೆ ಬೆದರಿಕೆ: ಬಿಜೆಪಿ ಶಾಸಕ ಅರುಣ್‌ಕುಮಾರ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ನ್ಯಾಯಾಲಯ

ಶಾಸಕ ಪೂಜಾರ್‌ ಸೇರಿದಂತೆ ಹತ್ತು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 354, 452, 269, 504, 506 ಜೊತೆಗೆ 149ರ ಅಡಿ ಖಾಸಗಿ ದೂರು ದಾಖಲಾಗಿದೆ.
MLA Arunkumar Pujar

MLA Arunkumar Pujar

ವಕೀಲರೊಬ್ಬರಿಗೆ ಕೊಲೆ ಮತ್ತು ಮನೆಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಿರುವ ಆರೋಪಕ್ಕೆ ಗುರಿಯಾಗಿರುವ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಬಿಜೆಪಿ ಶಾಸಕ ಅರುಣ್‌ಕುಮಾರ್‌ ಪೂಜಾರ್‌ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಶಾಸಕ ಅರುಣ್‌ಕುಮಾರ್‌ ಪೂಜಾರ್‌ ಸೇರಿದಂತೆ ಒಂಭತ್ತು ಮಂದಿ ಅವರ ಬೆಂಬಲಿಗರು ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ 81ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ಹಾಗೂ ಶಾಸಕ, ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬಿ ಜಯಂತ್‌ ಕುಮಾರ್‌ ಅವರು ಆದೇಶ ಮಾಡಿದ್ದಾರೆ.

ಖಾಸಗಿ ದೂರಿನ ಹಿನ್ನೆಲೆಯಲ್ಲಿ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಪೂಜಾರ್‌ ಮತ್ತು ಅವರ ಬೆಂಬಲಿಗರನ್ನು ಬಂಧಿಸಿದರೆ ತಲಾ 25 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್‌ ಮತ್ತು ಭದ್ರತೆ ಪಡೆದು ಬಿಡುಗಡೆ ಮಾಡಬೇಕು. ಆರೋಪಿಗಳು ಸಾಕ್ಷ್ಯ ನಾಶಕ್ಕೆ ಕೈ ಹಾಕಬಾರದು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

Also Read
ಜನಪ್ರತಿನಿಧಿಗಳ ವಿರುದ್ಧದ ಪ್ರಕರಣ: ಪ್ರತ್ಯೇಕ ನ್ಯಾಯಾಲಯದ ಕುರಿತಾಗಿ ಸರ್ಕಾರವನ್ನು ಪ್ರಶ್ನಿಸಿದ ಕರ್ನಾಟಕ ಹೈಕೋರ್ಟ್

ಶಾಸಕ ಪೂಜಾರ್‌ ಸೇರಿದಂತೆ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 354 (ದೌರ್ಜನ್ಯ), 452 (ಮನೆಗೆ ಅತಿಕ್ರಮ ಪ್ರವೇಶ), 269 (ಮಾರಣಾಂತಿಕ ಸೋಂಕು ಹರಡುವುದಕ್ಕೆ ಶಿಕ್ಷೆ), 504 (ಶಾಂತಿಗೆ ಭಂಗ ತರಲು ಉದ್ದೇಶಪೂರ್ವಕವಾಗಿ ಪ್ರಚೋದನೆ), 506 (ಕ್ರಿಮಿನಲ್‌ ಬೆದರಿಕೆ) ಜೊತೆಗೆ 149ರ (ಕಾನೂನುಬಾಹಿರವಾಗಿ ಒಗ್ಗೂಡುವುದು) ಅಡಿ ಪ್ರಕರಣ ದಾಖಲಾಗಿದೆ. ಇದನ್ನು ಮೇಲ್ನೋಟಕ್ಕೆ ಸಾಬೀತುಪಡಿಸಲು ದಾಖಲೆಗಳಿವೆ. ಹೀಗಾಗಿ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಾರದು ಎಂದು ಪಾರ್ಟಿ ಇನ್‌ ಪರ್ಸನ್‌ ಆದ ನಾಗರಾಜ್‌ ಅವರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಆರೋಪಿಗಳ ವಿರುದ್ಧದ ಮರಣ ದಂಡನೆ ಅಥವಾ ಜೀವಾವಧಿಗೆ ಶಿಕ್ಷೆಗೆ ಗುರಿಪಡಿಸುವ ಆರೋಪಗಳಿಲ್ಲ. ಸದರಿ ಪ್ರಕರಣವನ್ನು ಮ್ಯಾಜಿಸ್ಟ್ರೇಟ್‌ ಅವರು ವಿಚಾರಣೆ ನಡೆಸಲಿರುವುದರಿಂದ ಆರೋಪಿಗಳು ಜಾಮೀನಿಗೆ ಅರ್ಹವಾಗಿದ್ದಾರೆ ಎಂದು ಪೀಠವು ಆದೇಶದಲ್ಲಿ ಹೇಳಿದೆ.

Attachment
PDF
MLA Arunkumar Pujar versus Nagaraj.pdf
Preview

Related Stories

No stories found.
Kannada Bar & Bench
kannada.barandbench.com