ಕೋವಿಡ್ ಲಸಿಕೆ ಪಡೆದು ಅದರಿಂದುಂಟಾದ ವ್ಯತಿರಿಕ್ತ ಪರಿಣಾಮದಿಂದಾಗಿ ಸಾವನ್ನಪ್ಪಿದವರನ್ನು ಗುರುತಿಸಲು ಮತ್ತು ಅದರಿಂದ ಸಂತ್ರಸ್ತರಾದವರ ಕುಟುಂಬಗಳಿಗೆ ಪರಿಹಾರ ನೀಡಲು ಮಾರ್ಗಸೂಚಿ ರೂಪಿಸುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ (ಎನ್‌ಡಿಎಂಎ) ಕೇರಳ ಹೈಕೋರ್ಟ್ ನಿರ್ದೇಶಿಸಿದೆ [ಸಯೀದಾ ಕೆ ಎ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಕೋವಿಡ್ ಲಸಿಕೆ ವ್ಯತಿರಿಕ್ತ ಪರಿಣಾಮದಿಂದಾಗಿ ಸಾವನ್ನಪ್ಪಿದ ಕನಿಷ್ಠ ಮೂವರ ಪ್ರಕರಣಗಳನ್ನು ಈ ವರ್ಷ ಜೂನ್‌ನಿಂದ ಬಲ್ಲೆ. ಹಾಗೆ ಸಾವನ್ನಪ್ಪಿದವರ ಸಂಖ್ಯೆ ಕಡಿಮೆ ಇದ್ದರೂ ಈ ವಿಚಾರಕ್ಕೆ ಉತ್ತರ ಕಂಡುಕೊಳ್ಳಲೇಬೇಕು ಎಂದು ನ್ಯಾ. ವಿ ಜಿ ಅರುಣ್ ತಿಳಿಸಿದರು.
“ನ್ಯಾಯಾಲಯದಲ್ಲಿ ಕೋವಿಡ್ ಲಸಿಕೆಯ ಪ್ರತಿಕೂಲ ಪರಿಣಾಮಗಳಿಗೆ ತಮ್ಮವರು ಬಲಿಯಾಗಿದ್ದಾರೆ ಎನ್ನುವ ಕನಿಷ್ಠ ಮೂರು ಪ್ರಕರಣಗಳನ್ನು ನಾನು ಕಂಡಿರುವೆ. ಹೀಗಾಗಿ ಸಂಖ್ಯೆ ಬಹಳ ಕಡಿಮೆ ಇದ್ದರೂ ಕೂಡ ಚುಚ್ಚುಮದ್ದಿನ ಪರಿಣಾಮದಿಂದಾಗಿ ವ್ಯಕ್ತಿಗಳು ಬಲಿಯಾಗುತ್ತಿದ್ದಾರೆ ಎಂದು ಶಂಕಿಸಲಾದ ನಿದರ್ಶನಗಳಿವೆ. ಅಂತಹ ಸಂದರ್ಭದಲ್ಲಿ ಪ್ರತಿವಾದಿಗಳು ಆ ರೀತಿಯ ಪ್ರಕರಣಗಳನ್ನು ಗುರುತಿಸಲು ಮತ್ತು ಸಂತ್ರಸ್ತರ ಅವಲಂಬಿತರಿಗೆ ಪರಿಹಾರ ನೀಡುವುದಕ್ಕಾಗಿ ನೀತಿ ರೂಪಿಸಲು ಬದ್ಧರಾಗಿರಬೇಕು” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಆಗಸ್ಟ್ 2021ರಲ್ಲಿ ಕೋವಿಡ್ ಲಸಿಕೆ ಪಡೆದ ನಂತರ ಪತಿಯನ್ನು ಕಳೆದುಕೊಂಡ ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಹಿಂದಿನ ವಿಚಾರಣೆ ವೇಳೆ ಪ್ರಕರಣವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತ್ತು. ಲಸಿಕೆಯ ಅಡ್ಡ ಪರಿಣಾಮದಿಂದಾಗಿ ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರದ ಬಳಿ ಯಾವುದೇ ನೀತಿಗಳಿವೆಯೇ ಎಂಬ ಬಗ್ಗೆ ತಿಳಿದುಕೊಳ್ಳುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರಿಗೆ ನಿರ್ದೇಶನ ನೀಡಿತ್ತು. ಸೆಪ್ಟೆಂಬರ್ 1ರಂದು ಪ್ರಕರಣ ಕೈಗೆತ್ತಿಕೊಂಡಾಗ, ಎಎಸ್‌ಜಿ ಇದುವರೆಗೆ ಅಂತಹ ಯಾವುದೇ ನೀತಿ ರೂಪಿಸಿಲ್ಲ ಎಂದಿದ್ದರು.
ಆದ್ದರಿಂದ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ನೀತಿ/ಮಾರ್ಗಸೂಚಿ ರೂಪಿಸಲು ತ್ವರಿತ ಕ್ರಮ ತೆಗೆದುಕೊಳ್ಳುವಂತೆ ನ್ಯಾಯಾಲಯವು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿತು.
"ಎರಡನೆಯ ಪ್ರತಿವಾದಿಯು (ಎನ್‌ಡಿಎಂಎ) ಕೋವಿಡ್-19 ಲಸಿಕೆ ಪರಿಣಾಮಗಳಿಂದ ಸಾವನ್ನಪ್ಪಿದವರನ್ನು ಗುರುತಿಸಲು ಮತ್ತು ಸಂತ್ರಸ್ತರ ಅವಲಂಬಿತರಿಗೆ ಪರಿಹಾರ ನೀಡಲು ನೀತಿ/ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ನಿರ್ದೇಶಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅಗತ್ಯವಿರುವುದನ್ನು ಸಾಧ್ಯವಾದಷ್ಟು ತ್ವರಿತವಾಗಿ ಮತ್ತು ಯಾವುದೇ ರೀತಿಯಲ್ಲಾದರೂ ಸರಿ ಮೂರು ತಿಂಗಳೊಳಗೆ ಮಾಡಬೇಕು”ಎಂದು ಆದೇಶದಲ್ಲಿ ತಿಳಿಸಲಾಗಿದೆ. 3 ತಿಂಗಳ ನಂತರ ಮತ್ತೆ ಪ್ರಕರಣ ಮತ್ತೆ ವಿಚಾರಣೆಗೆ ಬರಲಿದೆ.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]