[ಕೋವಿಡ್‌ ಪ್ರಮಾಣಪತ್ರ] ಪ್ರಧಾನಿ ಚಿತ್ರ ತೆಗೆದುಹಾಕಲು ಕೋರಿದ್ದ ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್‌; ಭಾರಿ ದಂಡ

ಕೋವಿಡ್‌ ವಿರುದ್ಧದ ಲಸಿಕಾ ಅಭಿಯಾನವನ್ನು ಪ್ರಧಾನಿ ಮೋದಿಯವರ ಪ್ರಚಾರ ಅಭಿಯಾನವನ್ನಾಗಿ ಮಾರ್ಪಡಿಸಲಾಗಿದೆ ಎನ್ನುವುದು ಅರ್ಜಿದಾರರ ದೂರಾಗಿತ್ತು. ಪಾವತಿ ಮಾಡಿರುವ ಲಸಿಕೆ ಪ್ರಮಾಣ ಪತ್ರದಲ್ಲಿಯೂ ಮೋದಿಯವರ ಚಿತ್ರವಿದ್ದ ಬಗ್ಗೆ ಆಕ್ಷೇಪಿಸಲಾಗಿತ್ತು.
Covid Vaccine Certificate

Covid Vaccine Certificate

Published on

ಕೋವಿಡ್‌ ಲಸಿಕೆಯ ಪ್ರಮಾಣಪತ್ರದಿಂದ ಪ್ರಧಾನಿ ಮೋದಿಯವರ ಭಾವಚಿತ್ರವನ್ನು ತೆಗೆದುಹಾಕಲು ಕೋರಿ ಸಲ್ಲಿಸಿದ್ದ ಮನವಿಯನ್ನು ಕೇರಳ ಹೈಕೋರ್ಟ್‌ ಮಂಗಳವಾರ ವಜಾಗೊಳಿಸಿದ್ದು ಅರ್ಜಿದಾರರಿಗೆ ರೂ.1 ಲಕ್ಷ ದಂಡ ವಿಧಿಸಿದೆ (ಪೀಟರ್‌ ಮೈಲಿಪರಂಪಿಲ್ ವರ್ಸಸ್‌ ಕೇಂದ್ರ ಸರ್ಕಾರ).

ಅರ್ಜಿಯನ್ನು ವಜಾಗೊಳಿಸುವ ವೇಳೆ ನ್ಯಾಯಪೀಠವು ಇದು ರಾಜಕೀಯ ಉದ್ದೇಶದಿಂದ ಸಲ್ಲಿಸಿರುವ ಮನವಿಯಂತೆ ತೋರುತ್ತಿದೆ ಎಂದು ಅಭಿಪ್ರಾಯಪಟ್ಟಿತು. “ನನ್ನ ಅಭಿಪ್ರಾಯದಲ್ಲಿ ಇದೊಂದು ಕ್ಷುಲ್ಲಕ ಮನವಿಯಾಗಿದ್ದು, ಗುಪ್ತ ಉದ್ದೇಶವನ್ನು ಹೊಂದಿರುವಂತಿದೆ. ಇದರ ಹಿಂದೆ ರಾಜಕೀಯ ಉದ್ದೇಶವಿರುವಂತೆ ತೋರುತ್ತಿದ್ದು ಭಾರಿ ದಂಡದೊಂದಿಗೆ ವಜಾಗೊಳಿಸಲು ಅರ್ಹವಾಗಿದೆ. ಅರ್ಜಿಯನ್ನು ರೂ.1 ಲಕ್ಷ ದಂಡದೊಂದಿಗೆ ವಜಾಗೊಳಿಸುತ್ತೇವೆ,” ಎಂದು ನ್ಯಾ. ಪಿ ವಿ ಕುಂಞೆಕೃಷ್ಣನ್ ನೇತೃತ್ವದ ಏಕಸದಸ್ಯ ಪೀಠ ಆದೇಶಿಸಿತು.

Also Read
ಕೋವಿಡ್‌ ಲಸಿಕೆ ಪ್ರಮಾಣಪತ್ರಗಳಿಂದ ಮೋದಿ ಚಿತ್ರ ತೆಗೆದುಹಾಕಲು ಮನವಿ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಕೇರಳ ಹೈಕೋರ್ಟ್

“ಇದು ಅಧಿಕ ಪ್ರಮಾಣದ ದಂಡ ಎಂದು ನನಗೆ ಗೊತ್ತಿದೆ, ಅದರೆ ಇಂತಹ ಕ್ಷುಲ್ಲಕ ಅರ್ಜಿಗಳನ್ನು ನಾವು ನಿಯಂತ್ರಿಸಬೇಕಿದೆ” ಎಂದು ಪೀಠವು ವಿವರಿಸಿತು. ದಂಡವನ್ನು ಕೇರಳ ಕಾನೂನು ಪ್ರಾಧಿಕಾರ ಸೇವೆಗೆ ಅರ್ಜಿದಾರರು ಆರು ವಾರಗೊಳೊಳಗೆ ಪಾವತಿಸುವಂತೆ ಸೂಚಿಸಿತು. ವ್ಯಕ್ತಿ ಸ್ವಾತಂತ್ರ್ಯಕ್ಕೆ ಕುರಿತಾದ ಸಾವಿರಾರು ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ ಇರುವಾಗ ಈ ರೀತಿಯ ಅರ್ಜಿಗಳು ನ್ಯಾಯಾಲಯದ ಅಮೂಲ್ಯ ಸಮಯವನ್ನು ಹಾಳುಗೆಡವುತ್ತವೆ ಎಂದು ಪೀಠವು ಅಭಿಪ್ರಾಯಪಪಟ್ಟಿತು.

ಕೋವಿಡ್‌ ವಿರುದ್ಧದ ಲಸಿಕಾ ಅಭಿಯಾನವನ್ನು ಪ್ರಧಾನಿ ಮೋದಿಯವರ ಪ್ರಚಾರ ಅಭಿಯಾನವನ್ನಾಗಿ ಮಾರ್ಪಡಿಸಲಾಗಿದೆ ಎನ್ನುವುದು ಅರ್ಜಿದಾರರ ದೂರಾಗಿತ್ತು. ಪಾವತಿ ಮಾಡಿ ಪಡೆದಿರುವ ಲಸಿಕೆಯ ಪ್ರಮಾಣ ಪತ್ರದಲ್ಲಿಯೂ ಮೋದಿಯವರ ಚಿತ್ರವಿದ್ದ ಬಗ್ಗೆ ಆಕ್ಷೇಪಿಸಲಾಗಿತ್ತು.

ಈ ಹಿಂದಿನ ವಿಚಾರಣೆ ವೇಳೆ ನ್ಯಾಯಾಲಯವು, ಅರ್ಜಿದಾರರು ಜವಾಹರಲಾಲ್ ನೆಹರೂ ಹೆಸರಿನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿ ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿ ಭಾವಚಿತ್ರ ಇರುವುದಕ್ಕಿಂತ ಇದು ಹೇಗೆ ಭಿನ್ನ ಎಂದು ವಿವರಿಸುವಂತೆ ಕೇಳಿತ್ತು. ನೀವು ನೆಹರೂ ಅವರ ಹೆಸರನ್ನು ತೆಗೆದುಹಾಕಲು ವಿಶ್ವವಿದ್ಯಾಲಯವನ್ನು ಏಕೆ ಪ್ರಶ್ನಿಸಿಲ್ಲ ಎಂದು ಆಕ್ಷೇಪಿಸಿತ್ತು.

Also Read
ವಿವಿಗೆ ನೆಹರೂ ಹೆಸರಿಟ್ಟಿರುವಾಗ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೊ ಇದ್ದರೆ ತಪ್ಪೇನು? ಕೇರಳ ಹೈಕೋರ್ಟ್ ಪ್ರಶ್ನೆ

"ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿಯವರ ಹೆಸರಿದ್ದರೆ ಏನು ಸಮಸ್ಯೆ? ನೀವು ಜವಾಹರಲಾಲ್ ನೆಹರೂ ಅವರ ಹೆಸರಿನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೀರಿ, ಅವರೂ ಪ್ರಧಾನಿಯಾಗಿದ್ದವರು. ಆ ಹೆಸರನ್ನು ತೆಗೆದುಹಾಕುವಂತೆ ವಿಶ್ವವಿದ್ಯಾಲಯವನ್ನು ಏಕೆ ಕೇಳಬಾರದು?" ಎಂದು ನ್ಯಾಯಮೂರ್ತಿಗಳು ಮೌಖಿಕವಾಗಿ ಪ್ರಶ್ನಿಸಿದ್ದರು.

Kannada Bar & Bench
kannada.barandbench.com