ಒಂದು ತಿಂಗಳ ಚರ್ಚೆಯಲ್ಲಿ ಸುಶಾಂತ್ ಪ್ರಕರಣಕ್ಕಾಗಿ ಅರ್ನಾಬ್ ರಿಂದ ಶೇ.65, ನಾವಿಕಾರಿಂದ ಶೇ.69 ಸಮಯ ಮೀಸಲು!

“ಒಂದು ಪ್ರಕರಣಕ್ಕೆ ಅಪಾರ ಸಮಯ ವ್ಯಯಿಸುವುದು ಮಾತ್ರವಲ್ಲ, ಚರ್ಚೆಯ ವಿಧಾನ, ಧ್ವನಿ, ಧಾಟಿ ಮತ್ತು ವಿಷಯ… ಈ ಎಲ್ಲವೂ ವಿಷಯುಕ್ತ, ಧ್ರುವೀಕರಣ ಮತ್ತು ಕೊಂಕುನುಡಿಗಳಿಂದ ಕೂಡಿತ್ತು..” ಎಂದು ಮನವಿಯಲ್ಲಿ ವಿವರಿಸಲಾಗಿದೆ.
Arnab Goswami, Navika Kumar
Arnab Goswami, Navika Kumar

ಸುಪ್ರೀಂ ಕೋರ್ಟ್‌ನಲ್ಲಿ ಈಚೆಗೆ ಸುದರ್ಶನ್ ಟಿವಿ ಪ್ರಕರಣದಲ್ಲಿ ಮಧ್ಯಪ್ರವೇಶಗಾರ್ತಿಯಾಗಿದ್ದ ಲೇಖಕಿ ಮತ್ತು ಸಂಶೋಧಕಿ ಡಾ. ಕೋಟಾ ನೀಲಿಮಾ ಅವರು ವಾಹಿನಿಗಳಲ್ಲಿ ನಡೆಸಲಾಗುವ ಚರ್ಚೆ ಮತ್ತು ಅವುಗಳು ಹೇಗೆ ದ್ವೇಷಭಾಷೆಯಾಗಿವೆ ಎಂಬುದಕ್ಕೆ ಸಂಬಂಧಿಸಿದಂತೆ ನಡೆಸಲಾಗಿರುವ ಸಂಶೋಧನಾ ವರದಿಯನ್ನು ದಾಖಲೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಪತ್ರಕರ್ತರಾದ ಅರ್ನಾಬ್ ಗೋಸ್ವಾಮಿ ಮತ್ತು ನಾವಿಕಾ ಕುಮಾರ್ ಅವರ ಸುದ್ದಿ ಪ್ರಸಾರ ಅವಧಿ ಮತ್ತು ಚರ್ಚೆಗಳನ್ನು ಸ್ವತಂತ್ರ ಸಂಶೋಧನಾ ವೇದಿಕೆ ರೇಟ್ ದಿ ಡಿಬೇಟ್ ಮೌಲ್ಯಮಾಪನ ಮಾಡಿರುವುದನ್ನು ಆಧರಿಸಿ ವಕೀಲ ಸುನೀಲ್ ಫರ್ನಾಂಡೀಸ್ ಅವರ ಮೂಲಕ ಮನವಿ ಸಲ್ಲಿಸಲಾಗಿದೆ.

ರಿಪಬ್ಲಿಟ್ ಟಿವಿಯಲ್ಲಿ ಅರ್ನಾಬ್ ಗೋಸ್ವಾಮಿ ಅವರು 32 ದಿನಗಳಲ್ಲಿ (ವಾರಾಂತ್ಯ ಹೊರತುಪಡಿಸಿ) ಪ್ರಸ್ತುತಪಡಿಸಿರುವ ಸುದ್ದಿಯ ವಿಷಯ, 55 ಗಂಟೆಗಳ ಕಾರ್ಯಕ್ರಮ ಮತ್ತು 76 ಚರ್ಚಾ ವಿಷಯಗಳು ಮತ್ತು ಟೈಮ್ಸ್ ನೌನಲ್ಲಿ ನಾವಿಕಾ ಕುಮಾರ್ ಅವರು 24 ದಿನಗಳಲ್ಲಿ ಪ್ರಸ್ತುತಪಡಿಸಿರುವ ಸುದ್ದಿಯ ವಿಷಯ, 20 ಗಂಟೆಗಳ ಕಾರ್ಯಕ್ರಮ ಮತ್ತು 32 ಚರ್ಚಾ ವಿಷಯಗಳ ವಿಶ್ಲೇಷಣೆಯನ್ನು ವರದಿ ಒಳಗೊಂಡಿದೆ.

ತಮ್ಮ ಒಟ್ಟಾರೆ ಚರ್ಚೆಯ ಪೈಕಿ ಗೋಸ್ವಾಮಿ ಅವರು 2020ರ ಜುಲೈ 31ರಿಂದ 2020ರ ಸೆಪ್ಟೆಂಬರ್ 15ರ ವರೆಗೆ ಶೇ. 65ರಷ್ಟು ಮತ್ತು ನಾವಿಕಾ ಕುಮಾರ್ ಅವರು 2020ರ ಜೂನ್ 16ರಿಂದ 2020ರ ಅಕ್ಟೋಬರ್ 6ರ ವರೆಗೆ ಶೇ.69ರಷ್ಟು ಚರ್ಚೆಯನ್ನು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ನಡೆಸಿದ್ದಾರೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
“ಒಂದು ಪ್ರಕರಣಕ್ಕೆ ಅಪಾರ ಸಮಯ ವ್ಯಯಿಸುವುದು ಮಾತ್ರವಲ್ಲ, ಸುದ್ದಿ ಪ್ರಸಾರ ಮತ್ತು ಚರ್ಚೆಯ ವಿಧಾನದಲ್ಲಿನ ಧ್ವನಿ, ಧಾಟಿ ಮತ್ತು ವಿಷಯ ಇವೆಲ್ಲವೂ ವಿಷಯುಕ್ತವೂ, ಧ್ರುವೀಕರಣ ಮತ್ತು ಕೊಂಕುನುಡಿಗಳಿಂದ ಕೂಡಿದ್ದು, ಅಶ್ಲೀಲ ವಿಚಾರಗಳ ಕುರಿತ ಊಹಾಪೋಹಗಳು, ಕೆಟ್ಟ ಆರೋಪಗಳು ಮತ್ತು ಚಾರಿತ್ರ್ಯ ಹನನದಿಂದ ತುಂಬಿತ್ತು..”
ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಡಾ. ನೀಲಿಮಾ ಮನವಿಯಲ್ಲಿ ಉಲ್ಲೇಖ

ಪ್ರಕರಣವನ್ನು ವರದಿ ಮಾಡುವಾಗ ಈ ಟಿವಿಗಳ ಸುದ್ದಿ ನಿರೂಪಕರು ಕಾರ್ಯಸೂಚಿ ಅಳವಡಿಸಿಕೊಂಡಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. "ಉದ್ದೇಶಪೂರ್ವಕವಾಗಿ ಮೊದಲಿಗೆ ಕಲ್ಪಿತ ಸಿದ್ಧಾಂತವನ್ನು ಅವರು ಸೃಷ್ಟಿಸುತ್ತಾರೆ. ಉದಾಹರಣೆಗೆ ಸುಶಾಂತ್ ಸಿಂಗ್ ರಜಪೂತ್ ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ, ಬದಲಾಗಿ ಅವರನ್ನು ಕೊಲೆ ಮಾಡಲಾಗಿದೆ ಎಂದು. ಬಳಿಕ ಇದನ್ನು ಮುಚ್ಚಿ ಹಾಕಲು ಪ್ರಮುಖ ರಾಜಕಾರಣಿಗಳು ಮತ್ತು ಬಲಾಢ್ಯರು ಬೆಂಬಲವಾಗಿ ನಿಂತಿದ್ದಾರೆ” ಎಂದು ಆರೋಪಿಸುತ್ತಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಒಮ್ಮೆ ಕಲ್ಪಿತ ಸಿದ್ಧಾಂತ ಮತ್ತು ಪ್ರಚೋದಿತ ಆರೋಪಗಳನ್ನು ಪಸರಿಸಿದ ಮೇಲೆ ನಿರಂತರವಾಗಿ ಟಿವಿ ಚರ್ಚೆ, ಹ್ಯಾಷ್ ಟ್ಯಾಗ್‌ ಗಳು, ಸಾಕ್ಷ್ಯಗಳು ಮತ್ತು ಪಿತೂರಿ ಸಿದ್ಧಾಂತಗಳ ಮೂಲಕ ಪ್ರೇಕ್ಷಕರನ್ನು ನಂಬಿಸುವ ಕೆಲಸ ಮಾಡಲಾಗುತ್ತದೆ. ಈ ಎಲ್ಲಾ ಬೆಳವಣಿಗೆಗಳು ತನಿಖಾ ಸಂಸ್ಥೆಗಳು ವಿಚಾರಣೆ ಪೂರ್ಣಗೊಳಿಸಿ, ಆರೋಪ ಪಟ್ಟಿ ಸಲ್ಲಿಸುವುದಕ್ಕೆ ಮುನ್ನವೇ ನಡೆದು ಹೋಗಿರುತ್ತದೆ ಎಂದು ಅವರು ವಿವರಿಸಿದ್ದಾರೆ.

ಸಾರ್ವಜನಿಕ ಅಭಿಪ್ರಾಯವನ್ನು ಪ್ರಭಾವಿಸುವ ಉದ್ದೇಶದಿಂದ ಮಾಧ್ಯಮ ವಿಚಾರಣೆಯ ಮೂಲಕ ಕೆಲವು ಟಿವಿ ಚಾನೆಲ್ ಗಳ ಸುದ್ದಿ ನಿರೂಪಕರು ನಿರಂತರವಾಗಿ ಸುಳ್ಳು ಸಂಕಥನ ಸೃಷ್ಟಿಸು ಕೆಲಸ ಮಾಡುತ್ತಿದ್ದಾರೆ ಎಂದಿರುವ ಡಾ. ನೀಲಿಮಾ ಅವರು ಮಾಧ್ಯಮ ವಿಚಾರಣೆಯು ದ್ವೇಷ ಭಾಷೆಯ ಮತ್ತೊಂದು ಮುಖವಾಗಿದೆ ಎಂದಿದ್ದು, ಹೀಗೆ ಹೇಳಿದ್ದಾರೆ.

“ಅತಿಹೆಚ್ಚು ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್‌ಪಿ) ಪಡೆಯುವುದು ಅಥವಾ ಇದಕ್ಕೂ ಮಿಗಿಲಾಗಿ ಕೆಲವು ಖಾಸಗಿ ಸುದ್ದಿ ವಾಹಿನಿಗಳು ಕೇಂದ್ರ ಸರ್ಕಾರದ ಪ್ರಚಾರದ ಯಂತ್ರಗಳಾಗಿ ಕೆಲಸ ನಿರ್ವಹಿಸುವುದು ಸೇರಿದಂತೆ ಹಲವು ಕಾರಣಗಳಿಗಾಗಿ ಮಾಧ್ಯಮ ವಿಚಾರಣೆ ನಡೆಸಲಾಗುತ್ತದೆ” ಎಂದಿದ್ದಾರೆ.
Also Read
ಟಿಆರ್‌ಪಿ ಹಗರಣ: ಮುಂಬೈ ಪೊಲೀಸ್ ಸಮನ್ಸ್ ಪ್ರಶ್ನಿಸಿ ‘ಸುಪ್ರೀಂ’ ಮೊರೆಹೋದ ರಿಪಬ್ಲಿಕ್ ಟಿವಿ

ವಿವಾದಿತ ಸುದರ್ಶನ್ ಟಿವಿಯ “ಯುಪಿಎಸ್‌ಸಿ ಜಿಹಾದ್” ಕಾರ್ಯಕ್ರಮವು ಕೇಬಲ್ ಟೆಲಿವಿಷನ್ ನೆಟ್‌ ವರ್ಕ್‌ (ಸುಧಾರಣಾ) ಕಾಯಿದೆ - 1995ಯ ಕಾರ್ಯಕ್ರಮ ಸಂಹಿತೆಯನ್ನು ಹೇಗೆ ಉಲ್ಲಂಘಿಸಿಲ್ಲ ಎಂಬುದನ್ನು ವಿವರಿಸುವ ಸಂಬಂಧ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಅದಕ್ಕೆ ಷೋಕಾಸ್ ನೋಟಿಸ್ ಜಾರಿಗೊಳಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರವು ಔಪಚಾರಿಕ ನಿರ್ಧಾರ ಕೈಗೊಳ್ಳಬೇಕಿದ್ದು, ಆನಂತರ ಸುಪ್ರೀಂ ಕೋರ್ಟ್ ವಿಚಾರಣೆ ಮುಂದುವರಿಸಲಿದೆ.

ಡಾ. ನೀಲಿಮಾ ಅವರು ಸಂಗೀತಾ ತ್ಯಾಗಿ ಅವರೊಡಗೂಡಿ ಹಿಂದೆ ಮಧ್ಯಪ್ರವೇಶ ಅರ್ಜಿ ಸಲ್ಲಿಸಿದ್ದು, ಭಾರತದಲ್ಲಿನ ಇಂದಿನ ವಿದ್ಯುನ್ಮಾನ ಮಾಧ್ಯಮಗಳ ಪರಿಸ್ಥಿತಿ ಹಾಗೂ ನಾಜಿ ಆಡಳಿತದ ಜರ್ಮನಿಯ ಪರಿಸ್ಥಿತಿಗೂ ಹೋಲಿಕೆ ಇದೆ ಎಂದು ಆರೋಪಿಸಿದ್ದರು.

Related Stories

No stories found.
Kannada Bar & Bench
kannada.barandbench.com