ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ನೀಡಿದ ಸಮನ್ಸ್ ಪ್ರಶ್ನಿಸಿ ರಿಪಬ್ಲಿಕ್ ಟಿವಿಯ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ಒ) ಎಸ್ ಸುಂದರಂ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
2020ರ ಎಫ್‌ಐಆರ್ ಸಿಆರ್ ಸಂಖ್ಯೆ 143ರ ತನಿಖೆ ಕುರಿತಂತೆ ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್‌ನ ಸಿಎಫ್‌ಒಗೆ ಅಕ್ಟೋಬರ್ 9ರಂದು ಸಮನ್ಸ್ ಜಾರಿ ಮಾಡಿದ್ದನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
ಸುಪ್ರೀಂಕೋರ್ಟ್ ವಿಚಾರಣೆ ನಡೆಸುವವರೆಗೂ ನೆಟ್‌ವರ್ಕ್ ಮತ್ತದರ ಉದ್ಯೋಗಿಗಳ ತನಿಖೆ ನಡೆಸಬಾರದೆಂದು ರಿಪಬ್ಲಿಕ್ ಟಿವಿ ಸಿಎಫ್‌ಒ ಕೋರಿದ್ದಾರೆ. ಪ್ರಕರಣದ ತ್ವರಿತ ವಿಚಾರಣೆಗಾಗಿಯೂ ವಿನಂತಿ ಮಾಡಲಾಗಿದೆ.
ಸುಮಾರು 100 ಕೋಟಿ ಮೊತ್ತದ ಹಗರಣ ಎನ್ನಲಾಗುತ್ತಿರುವ ಟಿಆರ್‌ಪಿ ದಂಧೆಯನ್ನು ಪತ್ತೆ ಹಚ್ಚಿದ ಬಳಿಕ ಮುಂಬೈ ಪೊಲೀಸರು ಫಕ್ತ್ ಮರಾಠಿ ಮತ್ತು ಬಾಕ್ಸ್ ಸಿನೆಮಾ ವಾಹಿನಿಗಳ ಮಾಲೀಕರನ್ನು ಅಕ್ಟೋಬರ್ 8 ರಂದು ಬಂಧಿಸಿದ್ದರು.
ಮರಾಠಿ ಚಾನೆಲ್ ಮಾಲೀಕರನ್ನು ಬೊರಿವಿಲಿ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ನ್ಯಾಯಾಧೀಶರು ಅಕ್ಟೋಬರ್ 9 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿರುವುದಾಗಿ ಮುಂಬೈ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ತಿಳಿಸಿದ್ದರು.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 409 (ಕ್ರಿಮಿನಲ್ ನಂಬಿಕೆ ದ್ರೋಹ) ಮತ್ತು 420 (ವಂಚನೆ ಮತ್ತು ಅಕ್ರಮ ಆಸ್ತಿ ಹಂಚಿಕೆಗೆ ಪ್ರೇರಣೆ) ಅಡಿಯಲ್ಲಿ ಮಾಲೀಕರ ವಿರುದ್ಧ ಮೊಕದ್ದಮೆ ಹೂಡಲಾಗಿದೆ. ಟಿಆರ್‌ಪಿ ರೇಟಿಂಗ್‌ಗಳನ್ನು ತಿರುಚುವ ಸಂಬಂಧ ಪಡೆದಿರುವ ಮೊತ್ತದ ಬಗ್ಗೆ ಮುಂಬೈ ಪೊಲೀಸರು ಪ್ರಸ್ತುತ ತನಿಖೆ ನಡೆಸುತ್ತಿರುವುದಾಗಿ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮತ್ತು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) , ಟಿಆರ್‌ಪಿಗಳನ್ನು ಮಾಪಕಗಳ ಸಹಾಯದಿಂದ ಮಾಪನ ಮಾಡುತ್ತದೆ.
ಹನ್ಸಾ ರಿಸರ್ಚ್ ಗ್ರೂಪ್ ಎಂಬ ಕಂಪನಿ ಸುಮಾರು 2000 ಬಾರೋಮೀಟರ್‌ಗಳನ್ನು ಮುಂಬೈನಲ್ಲಿ ಅಳವಡಿಸಿದ್ದು ಆ ಸ್ಥಳಗಳ ಕುರಿತು ಹನ್ಸಾ ಮತ್ತು ಬಾರ್ಕ್ ಹೊರತುಪಡಿಸಿ ಮಾಹಿತಿಯನ್ನು ಗೋಪ್ಯವಾಗಿಡಲಾಗಿತ್ತು.
ನಿರ್ದಿಷ್ಟ ಟಿವಿ ಚಾನೆಲ್‌ಗಳನ್ನು ವೀಕ್ಷಿಸಲೆಂದು ಜನರಿಗೆ ಹಣ ನೀಡುವ ಮೂಲಕ ಹನ್ಸಾದ ಕೆಲವು ಉದ್ಯೋಗಿಗಳು 'ಸ್ಯಾಂಪಲಿಂಗ್ ಮೀಟರಿಂಗ್ ಸೇವೆ' ಮಾಹಿತಿಯನ್ನು ತಿರುಚಿದ್ದಾರೆ ಎಂದು ಮುಂಬೈ ಅಪರಾಧ ವಿಭಾಗದ ಪೊಲೀಸರು ಪತ್ತೆಹಚ್ಚಿದ್ದರು. ಮನೆಗಳಿಗೆ ಹಣ ನೀಡುವ ಮೂಲಕ ಮಾಧ್ಯಮ ವಾಹಿನಿಗಳ ಟಿಆರ್‌ಪಿ ಹೆಚ್ಚಿಸುತ್ತಿರುವುದಾಗಿ ಬಹಿರಂಗಪಡಿಸಿದ್ದ ವಿಶಾಲ್ ವೇದ ಭಂಡಾರಿ ಎಂಬಾತನನ್ನು ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ತಾವು ಟಿವಿ ನೋಡದಿದ್ದರೂ ಸಹ ನಿರ್ದಿಷ್ಟ ವಾಹಿನಿಗಳನ್ನು ಆನ್ ಮಾಡಿ ಇಡಲು ಹಣ ಪಡೆದುದಾಗಿ ಮನೆಮಾಲೀಕರು ಒಪ್ಪಿಕೊಂಡಿದ್ದರು.
ರಿಪಬ್ಲಿಕ್ ಟಿವಿಯು ಪ್ರಕರಣ ಕುರಿತಾಗಿ ಪ್ರಕಟಿಸಿದ್ದ ವರದಿಯಲ್ಲಿ ‘ ರಿಪಬ್ಲಿಕ್ ವಾಹಿನಿಯ ಹೆಸರು ಎಫ್ ಐ ಆರ್ ನಲ್ಲಿ ಇಲ್ಲ, ಇಂಡಿಯಾ ಟುಡೇ ಹೆಸರನ್ನು ಮಾತ್ರ ಸೇರಿಸಲಾಗಿದೆ. ಪ್ರಕರಣದಲ್ಲಿ ತಮ್ಮ ಸಂಸ್ಥೆಯನ್ನು ಏಕೆ ಎಳೆತರಲಾಗುತ್ತಿದೆ?’ ಎಂದು ಪ್ರಶ್ನಿಸಿದ್ದನ್ನು ಇಲ್ಲಿ ನೆನೆಯಬಹುದು.