ಸಾಮಾನ್ಯರಿಗೆ ಅರ್ಥವಾಗುವಂತೆ ಕಾನೂನು ಸರಳಗೊಳಿಸಲು ಕೇಂದ್ರ ಸರ್ಕಾರ ಸಮಿತಿ ರಚಿಸಿದೆ: ಪ್ರಧಾನಿ ಮೋದಿ

“ಸ್ಥಳೀಯ ಭಾಷೆಗಳನ್ನು ಸ್ಥಳೀಯ ನ್ಯಾಯಾಲಯಗಳ ಭಾಗವಾಗಿ ಮಾಡಬೇಕು. ಜನರಿಗೆ ಭಾರತದ ಕಾನೂನು ವ್ಯವಸ್ಥೆಯಲ್ಲಿ ಬಹಳ ನಂಬಿಕೆ ಇದೆ” ಎಂದ ಪ್ರಧಾನಿ.
ಸಾಮಾನ್ಯರಿಗೆ ಅರ್ಥವಾಗುವಂತೆ ಕಾನೂನು ಸರಳಗೊಳಿಸಲು ಕೇಂದ್ರ ಸರ್ಕಾರ ಸಮಿತಿ ರಚಿಸಿದೆ: ಪ್ರಧಾನಿ ಮೋದಿ
A1
Published on

ಜನಸಾಮಾನ್ಯರಿಗೆ ಕಾನೂನನ್ನು ತಲುಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾನೂನು ಮತ್ತು ಶಾಸನಗಳನ್ನು ಸರಳೀಕರಿಸುವ ಸಮಿತಿ ರಚಿಸಿದ್ದು ಇದರಿಂದ ಸಾಮಾನ್ಯರಿಗೂ ಅವುಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನವದೆಹಲಿಯಲ್ಲಿ ಶನಿವಾರ ನಡೆದ ಮುಖ್ಯಮಂತ್ರಿಗಳು ಮತ್ತು ದೇಶದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಜಂಟಿ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನ್ಯಾಯಕ್ಕೆ ಆಧಾರ ಕಾನೂನಾಗಿದ್ದು ಅದು ಜನ ಸಾಮಾನ್ಯರಿಗೆ ಅರ್ಥ ಆಗುವ ಭಾಷೆಯಲ್ಲಿರಬೇಕು. ಜನಸಾಮಾನ್ಯರಿಗೆ ಅರ್ಥವಾಗದೇ ಹೋದರೆ ಅದರಿಂದ ಯಾವುದೇ ಉಪಯೋಗವಿಲ್ಲ.

ಈ ಹಿನ್ನೆಲೆಯಲ್ಲಿ ಸ್ಥಳೀಯ ಭಾಷೆಗಳನ್ನು ಸ್ಥಳೀಯ ನ್ಯಾಯಾಲಯಗಳ ಭಾಗವಾಗಿ ಮಾಡಬೇಕು. ಜನರಿಗೆ ಭಾರತದ ಕಾನೂನು ವ್ಯವಸ್ಥೆಯಲ್ಲಿ ಬಹಳ ನಂಬಿಕೆ ಇದೆ. ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣ ಭಾರತೀಯ ಭಾಷೆಯಲ್ಲಿ ಏಕೆ ಇರಬಾರದು ಎಂದು ನಾವು ಆಲೋಸುತ್ತೇವೆ. ಪ್ರತಿ ಹಳ್ಳಿಗೆ ಕೂಡ ಶಿಕ್ಷಣ ಪಡೆಯುವಂತಾದರೆ ಅದು ಸಾಮಾಜಿಕ ನ್ಯಾಯವಾಗುತ್ತದೆ. ಭಾಷೆ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ” ಎಂದರು.

Also Read
ನ್ಯಾಯಾಲಯದ ತೀರ್ಪುಗಳನ್ನು ಸರ್ಕಾರ ವರ್ಷಗಟ್ಟಲೆ ಜಾರಿಗೆ ತರುವುದಿಲ್ಲ: ಸಿಜೆಐ ಎನ್ ವಿ ರಮಣ

ಭಾರತ 2047ರಲ್ಲಿ ನೂರನೇ ಸ್ವಾತಂತ್ರ್ಯೋತ್ಸವ ಆಚರಿಸುವ ಹೊತ್ತಿಗೆ ಪರಿಣಾಮಕಾರಿ ನ್ಯಾಯದಾನಕ್ಕಾಗಿ ವ್ಯವಸ್ಥೆ ಅಭಿವೃದ್ಧಿಪಡಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು.

ವಿಚಾರಣಾಧೀನ ಕೈದಿಗಳ ಪ್ರಕರಣಗಳಿಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿಗಳು ಮತ್ತು ಮುಖ್ಯ ನ್ಯಾಯಮೂರ್ತಿಗಳನ್ನು ಪ್ರಧಾನಿ ಒತ್ತಾಯಿಸಿದರು. "ನ್ಯಾಯಾಂಗದಲ್ಲಿ ತಂತ್ರಜ್ಞಾನದ ವ್ಯಾಪ್ತಿ ವಿಸ್ತರಿಸಿದ್ದು ಇ-ಕೋರ್ಟ್‌ಗಳನ್ನು ಆಂದೋಲನೋಪಾದಿಯಲ್ಲಿ ಜಾರಿಗೊಳಿಸಲಾಗುತ್ತಿದೆ” ಎಂದು ಅವರು ವಿವರಿಸಿದರು.

“ಜನ ಈಗ ಎಲ್ಲವನ್ನೂ ಫೋನ್‌ ಮೂಲಕ ಪಡೆಯಲು ಬಯಸುತ್ತಿದ್ದು ನ್ಯಾಯವು ಕೂಡ ಅದೇ ರೀತಿ ದೊರೆಯಬೇಕೆಂದು ಇಚ್ಛಿಸುತ್ತಾರೆ. ಈ ನಿಟ್ಟಿನಲ್ಲಿ ಕೇಸ್‌ ಮ್ಯಾನೇಜ್‌ಮೆಂಟ್‌ ಸಾಫ್ಟ್‌ವೇರ್‌ಗಳನ್ನು ಆರಂಭಿಸಿದ್ದು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಯತ್ನಿಸುತ್ತಿದ್ದೇವೆ. ಇದರಲ್ಲಿ ರಾಜ್ಯ ಸರ್ಕಾರಗಳು ಕೂಡ ಪಾತ್ರ ವಹಿಸುತ್ತವೆ” ಎಂದು ಅವರು ತಿಳಿಸಿದರು.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು. ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಸ್ವಾಗತ ಕೋರಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಭಾಗವಹಿಸಿದ್ದರು.

Kannada Bar & Bench
kannada.barandbench.com