ವರ್ಚುವಲ್ ಕಲಾಪ ಮೂಲಭೂತ ಹಕ್ಕು ಎಂದು ಘೋಷಿಸಿಸುವುದು ನೇರ ಕಲಾಪಗಳಿಗೆ ಮರಣಶಾಸನವಾಗುತ್ತದೆ: ಸುಪ್ರೀಂ ಕೋರ್ಟ್

ಭೌತಿಕವಾಗಿ ಅಥವಾ ವರ್ಚುವಲ್ ವಿಧಾನದ ಮೂಲಕ ನ್ಯಾಯಾಲಯಕ್ಕೆ ಹಾಜರಾಗುವ ಹೈಬ್ರಿಡ್ ವಿಧಾನದಿಂದಾಗಿ ವಕೀಲರು ಮನೆಗಳಿಂದಲೇ ಕಲಾಪದಲ್ಲಿ ಭಾಗವಹಿಸಲು ಆದ್ಯತೆ ನೀಡುತ್ತಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
Virtual Hearing and Supreme Court
Virtual Hearing and Supreme Court

ವರ್ಚುವಲ್‌ ವಿಧಾನದ ಮೂಲಕ ನ್ಯಾಯಾಲಯ ಕಲಾಪ ನಡೆಸುವುದನ್ನು ಮೂಲಭೂತ ಹಕ್ಕಾಗಿ ಪರಿಗಣಿಸಬೇಕು ಎಂದು ಸಲ್ಲಿಸಿದ ಅರ್ಜಿಗೆ ಸುಪ್ರೀಂಕೋರ್ಟ್‌ ಶುಕ್ರವಾರ ನಿರುತ್ಸಾಹದ ಪ್ರತಿಕ್ರಿಯೆ ನೀಡಿದ್ದು ಈ ರೀತಿಯ ಮನವಿಗೆ ಆಸ್ಪದ ಒದಗಿಸಿದರೆ ನೇರ ಕಲಾಪಗಳಿಗೆ ಮರಣಶಾಸನವಾಗುತ್ತದೆ ಎಂಬುದಾಗಿ ಅಭಿಪ್ರಾಯಪಟ್ಟಿದೆ.

ಭೌತಿಕವಾಗಿ ಅಥವಾ ವರ್ಚುವಲ್‌ ವಿಧಾನದ ಮೂಲಕ ನ್ಯಾಯಾಲಯಕ್ಕೆ ಹಾಜರಾಗುವ ಹೈಬ್ರಿಡ್‌ ವಿಧಾನ ಬಳಸುವುದರಿಂದ ವಕೀಲರು ನೇರ ಕಲಾಪದ ಬದಲು ವರ್ಚುವಲ್‌ ವಿಧಾನವನ್ನೇ ಆಯ್ದುಕೊಳ್ಳುವ ಅವಕಾಶ ನೀಡುತ್ತದೆ ಎಂದು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಬಿ ಆರ್ ಗವಾಯಿ ಅವರಿದ್ದ ಪೀಠ ತಿಳಿಸಿತು.

“ವರ್ಚುವಲ್‌ ವಿಧಾನವನ್ನು ಮೂಲಭೂತ ಹಕ್ಕು ಎಂದು ಘೋಷಿಸುವ) ಅರ್ಜಿದಾರರ ಮನವಿ ಸ್ವೀಕರಿಸಿದರೆ ಅದು ಭೌತಿಕ ನ್ಯಾಯಾಲಯಗಳಿಗೆ ಮರಣಶಾಸನವಾಗುತ್ತದೆ” ಎಂದು ನ್ಯಾಯಾಲಯ ಹೇಳಿತು.

ಹೈಬ್ರಿಡ್‌ ವಿಧಾನಕ್ಕೆ ಅವಕಾಶ ನೀಡಿದ್ದಾಗ ವಕೀಲರು ನ್ಯಾಯಾಲಯಗಳಿಗೆ ಬಂದು ವಾದಿಸದೆ ತಮ್ಮ ಕಚೇರಿಗಳಿಂದಲೇ ವಾದಿಸುವಲ್ಲಿ ತೃಪ್ತರಾಗಿದ್ದರು. ಯಾರೊಬ್ಬರೂ ಪ್ರಕರಣವನ್ನು ವಾದಿಸಲು ನ್ಯಾಯಾಲಯಕ್ಕೆ ಬರುತ್ತಿರಲಿಲ್ಲ ಎಂದು ಪೀಠ ಅಭಿಪ್ರಾಯ ಪಟ್ಟಿತು. "ಕಳೆದ ಕೆಲವು ತಿಂಗಳಿಂದ ನಾವು ಇದನ್ನು ಆಯ್ಕೆಯಾಗಿ ನೀಡಿದ್ದೇವೆ. ಈ ಆಯ್ಕೆ ಇದ್ದಾಗ ಜನರು ತಮ್ಮ ಕಚೇರಿಯೊಳಗೇ ತೃಪ್ತರಾಗಿದ್ದರು. ಸಂತೋಷದ ಆಯ್ಕೆ ಇದ್ದರೆ, ಮಸ್ಸೂರಿ ಮತ್ತು ಗೋವಾದಿಂದ ವಕೀಲರು ಹಾಜರಾಗಬಹುದಿತ್ತಲ್ಲವೇ?" ಎಂದು ಅದು ಕೇಳಿತು.

Also Read
ವರ್ಚುವಲ್ ವಿಚಾರಣೆಯಲ್ಲಿ ಭಾಗವಹಿಸುವುದನ್ನು ಮೂಲಭೂತ ಹಕ್ಕು ಎಂದು ಪರಿಗಣಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ

ಸುಪ್ರೀಂಕೋರ್ಟ್‌ನ ಇ-ಸಮಿತಿಯ ಅನುಮತಿಯಿಲ್ಲದೆ ವೀಡಿಯೊ ಕಾನ್ಫರೆನ್ಸ್ ಮತ್ತು ವರ್ಚುವಲ್ ಕೋರ್ಟ್ ವಿಚಾರಣೆಯ ಆಯ್ಕೆಯನ್ನು ಸ್ಥಗಿತಗೊಳಿಸದಂತೆ ಹೈಕೋರ್ಟ್‌ಗಳಿಗೆ ನಿರ್ದೇಶನ ನೀಡಬೇಕು ಎಂದು ವಕೀಲ ಮೃಗಾಂಕ್ ಪ್ರಭಾಕರ್ ಮೂಲಕ ಸಲ್ಲಿಸಿದ್ದ ಅರ್ಜಿ ಕೋರಿತ್ತು. ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿ ಮನೋಜ್‌ ಸ್ವರೂಪ್‌ ವಾದ ಮಂಡಿಸಿದರು.

ಒಂದು ಹಂತದಲ್ಲಿ ನ್ಯಾ. ರಾವ್, "ಅನೇಕ ತೊಂದರೆಗಳು ಇವೆ. ನಾವು ಇದನ್ನು ಬಳಸಿದೆವು. ಒಬ್ಬರು ನ್ಯಾಯಾಲಯದಿಂದ ವಾದಿಸಿದರೆ ಮತ್ತೊಬ್ಬರು ತಮ್ಮ ಕಚೇರಿಯಿಂದ ವಾದಿಸುತ್ತಾರೆ. ನಮ್ಮ ಕಡೆಯಿಂದ ಮತ್ತು ವಕೀಲರಿಂದ ಸಮಸ್ಯೆಗಳಿವೆ. ಮನೋಜ್‌ ಕುಮಾರ್‌ ನ್ಯಾಯಾಲಯದಿಂದ ವಾದಿಸಿದರೆ ಅವರು ನಮ್ಮತ್ತ ನೋಡುತ್ತಾ ವಾದಿಸುತ್ತಾರೆ ಇದು ಚೆನ್ನಾಗಿರುತ್ತದೆ. ಭೌತಿಕ ಕಲಾಪ ಹೇಗೆ ಆರಂಭವಾಗುತ್ತದೆ ಎಂಬ ಬಗ್ಗೆ ನಾವು ಗೊಂದಲದಲ್ಲಿದ್ದೇವೆ. ಏಕೆಂದರೆ ಹೈಬ್ರಿಡ್‌ ವಿಧಾನ ಅನುಸರಿಸುತ್ತಿರುವುದರಿಂದ ಜನ (ವಕೀಲರು) ನ್ಯಾಯಾಲಯಕ್ಕೆ ಬರುತ್ತಿಲ್ಲ” ಎಂದರು.

ನ್ಯಾಯಾಲಯ ಕಲಾಪಗಳ ನೇರ ಪ್ರಸಾರಕ್ಕಿಂತಲೂ ಈ ಸಮಸ್ಯೆ ಭಿನ್ನವಾದುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ನ್ಯಾಯಾಲಯ ಕಲಾಪಗಳನ್ನು ಪ್ರಸಾರ ಮಾಡಬೇಕು ಎಂದು ಹೇಳುವುದು ಒಂದೆಡೆಯಾದರೆ ಮೂಲಭೂತ ಹಕ್ಕುಗಳ ಕಾರಣಕ್ಕಾಗಿ ಈ ಸಂಸ್ಥೆಗಳನ್ನು ಮುಚ್ಚಬೇಕು ಎಂದು ಹೇಳುವುದು ಮತ್ತೊಂದೆಡೆ ಎಂದು ಅದು ವಿವರಿಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮವಾಗಿ ನೋಟಿಸ್‌ ನೀಡಿದ ನ್ಯಾಯಾಲಯ ಮನವಿಗೆ ಸಂಬಂಧಿಸಿದಂತೆ ಹೇಗೆ ಮುಂದುವರೆಯಬೇಕು ಎಂದು ಅರ್ಜಿದಾರರು ಬಯಸುತ್ತಿದ್ದಾರೆ ಎಂಬುದನ್ನು ವಿವರಿಸುವಂತೆ ತಿಳಿಸಿದೆ. ನಾಲ್ಕು ವಾರಗಳ ಬಳಿಕ ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.

Related Stories

No stories found.
Kannada Bar & Bench
kannada.barandbench.com