ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಅಸಡ್ಡೆ ಹಾಗೂ ಕಾಟಾಚಾರದ ತನಿಖೆಯಿಂದಾಗಿ ಆರೋಪಿಯೊಬ್ಬರನ್ನು ಮಂಗಳವಾರ ಮದ್ರಾಸ್ ಹೈಕೋರ್ಟ್ ಖುಲಾಸೆಗೊಳಿಸಿದ್ದು, ಪೊಲೀಸ್ ತನಿಖೆಗಳ ಗುಣಾತ್ಮಕತೆಯ ಬಗ್ಗೆ ಆತಂಕ ಹೆಚ್ಚಾಗುವಂತೆ ಮಾಡಿದೆ (ಬಾಲಮುರುಗನ್ ವರ್ಸಸ್ ತಮಿಳುನಾಡು ರಾಜ್ಯ ಸರ್ಕಾರ).
ತಮಿಳುನಾಡು ಪೊಲೀಸ್ ಘನತೆಯನ್ನು ಪ್ರಶಂಸನೀಯ ಪೊಲೀಸ್ ಅಧಿಕಾರಿಗಳು ಅತ್ಯುನ್ನತ ಮಟ್ಟಕ್ಕೇರಿಸಿದ್ದಾರೆ. ಅದನ್ನು ಕೆಲವು ಹೊಣಗೇಡಿ ಪೊಲೀಸರ ನಡೆಯಿಂದ ಹಾಳು ಮಾಡಬಾರದು ಎಂದು ನ್ಯಾಯಮೂರ್ತಿ ಬಿ ಪುಗಳೇಂದಿ ಕಟುವಾಗಿ ಹೇಳಿದ್ದು, ಸೆಪ್ಟೆಂಬರ್ 22ಕ್ಕೆ ವಿಚಾರಣೆ ಮುಂದೂಡಿದ್ದಾರೆ.
2016 ಮತ್ತು 2018ರ ಅವಧಿಯಲ್ಲಿನ ಅಪರಾಧ ನಿರ್ಣಯ ಮತ್ತು ಖುಲಾಸೆ ಪ್ರಕರಣಗಳ ಸರಾಸರಿಯನ್ನು ಗಮನಿಸಿದ ನ್ಯಾಯಮೂರ್ತಿಗಳು ತಮಿಳುನಾಡಿನಲ್ಲಿ ತನಿಖೆಯ ಗುಣಾತ್ಮಕತೆ ಗಣನೀಯವಾಗಿ ಇಳಿಮುಖವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
“ಅಪರಾಧ ನಿರ್ಣಯ ಸರಾಸರಿಯು ಇಳಿಮುಖವಾಗಿದ್ದು, ಖುಲಾಸೆ ಮತ್ತು ಪ್ರಕರಣದಿಂದ ಕೈಬಿಡುವ ಸರಾಸರಿಯು ಹೆಚ್ಚಾಗಿದೆ. ಆದ್ದರಿಂದ, ಮೇಲ್ನೋಟಕ್ಕೆ ಅನಿಸುವುದೇನೆಂದರೆ ತನಿಖೆಯು ಕಾಟಾಚಾರದಿಂದ ಕೂಡಿದೆ ಎಂಬುದು ಸದರಿ ಪ್ರಕರಣದಲ್ಲಷ್ಟೇ ಅಲ್ಲ ಶೇ. 50ರಷ್ಟು ಪ್ರಕರಣದಲ್ಲಿ ತನಿಖೆ ಕಾಟಾಚಾರದಿಂದ ನಡೆಯುತ್ತದೆ ಎಂಬುದು ದೃಢ” ಎಂದು ನ್ಯಾಯಾಪೀಠ ಅಭಿಪ್ರಾಯಪಟ್ಟಿತು.
ಇದರ ಪರಿಣಾಮವಾಗಿ ನ್ಯಾಯಾಂಗ ಪ್ರಕ್ರಿಯೆಯಿಂದ ಹೊರತಾದ ಪೊಲೀಸ್ ಎನ್‌ಕೌಂಟರ್ ಗಳನ್ನು ಜನರು ಬೆಂಬಲಿಸುವಂತಾಗಿದೆ ಎಂದು ಗಂಭೀರವಾಗಿ ಹೇಳಿತು.
”ನಿಷ್ಪಕ್ಷಪಾತವಾಗಿ ತನಿಖೆ ಕೈಗೊಳ್ಳುವುದು ಯಾವುದೇ ತನಿಖೆಯ ಮೂಲ ಆಶಯ. ಭಾರತ ಸಂವಿಧಾನದ ಪರಿಚ್ಛೇದ 20 ಮತ್ತು 21 ಖಾತರಿಪಡಿಸಿರುವಂತೆ ನ್ಯಾಯಯುತವಾದ ತನಿಖೆಯು ಸಾಂವಿಧಾನಿಕ ಹಕ್ಕು. ತನಿಖೆಯು ಕಾನೂನಿನ ಅನ್ವಯ ನಿಷ್ಪಕ್ಷಪಾತ ಮತ್ತು ಪ್ರಾಮಾಣಿಕತೆಯಿಂದ ಕೂಡಿರಬೇಕು. ನ್ಯಾಯಾಲಯದ ಮುಂದೆ ಪ್ರಕರಣದ ಸತ್ಯವನ್ನು ತೆರೆದಿಡುವುದೇ ತನಿಖೆ. ಆದರೆ, ಈ ಪ್ರಕರಣದಲ್ಲಿ ಸಹಜವಾಗಿ ಅದನ್ನು ಉಲ್ಲಂಘಿಸಲಾಗಿದ್ದು, ಸಾಮಾನ್ಯ ರೀತಿಯಲ್ಲಿ ತನಿಖಾ ಸಂಸ್ಥೆಯ ಮನಸೋಇಚ್ಛೆ ತನಿಖೆ ನಡೆಸಲಾಗಿದೆ.”
”ಸದರಿ ಪ್ರಕರಣದಲ್ಲಿ ಕಾಟಾಚಾರದ ತನಿಖೆಯಿಂದ ಯಾತನೆ ಅನುಭವಿಸಿದ ಸಂತ್ರಸ್ತನಿಗೆ ₹10 ಲಕ್ಷ ಪರಿಹಾರವನ್ನು ಏಕೆ ನೀಡಬಾರದು? ಈ ಪರಿಹಾರದ ಹಣವನ್ನು ತನಿಖಾಧಿಕಾರಿಗಳಾದ ಪಿಬ್ಲ್ಯು 12 ಎನ್ ಮುತ್ತುಕುಮಾರ್, ಪಿಬ್ಲ್ಯು 14 ಪೊನ್ ಹಾಗೂ ಸಂಬಂಧಪಟ್ಟ ಶಿವಗಂಗೆಯ ಉಪ ಪೊಲೀಸ್ ವರಿಷ್ಠಾಧಿಕಾರಿಯಿಂದ ವಸೂಲಿ ಮಾಡಬಹುದಲ್ಲವೇ?” ಎಂದು ನ್ಯಾಯಾಲಯ ಪ್ರಶ್ನಿಸಿತು.
ಕೊಲೆ ಪ್ರಕರಣದಲ್ಲಿ ಆರೋಪಿಯು ವಿಚಾರಣೆಯ ಬಳಿಕ ಖುಲಾಸೆಯಾದರೆ ತನಿಖಾಧಿಕಾರಿ ವಿವರಣೆ ನೀಡಬೇಕು ಎಂಬ ಸಂಪ್ರದಾಯ ಹಿಂದೆ ಇತ್ತು. ತನಿಖೆ ಕಾಟಾಚಾರದಿಂದ ಕೂಡಿದ್ದರೆ ಅಂಥ ಅಧಿಕಾರಿಯ ವಿರುದ್ಧ ಶಿಸ್ತುಕ್ರಮದ ಪ್ರಕ್ರಿಯೆ ಆರಂಭಿಸಲಾಗುತ್ತಿತ್ತು ಎಂದು ನ್ಯಾಯಾಲಯ ಹಿಂದಿನ ಪ್ರಕ್ರಿಯೆಗಳನ್ನು ಮೆಲುಕುಹಾಕಿತು.
“ಈಗ ನೋಡಿದರೆ ಆ ಸಂಪ್ರಾದಾಯವನ್ನು ಕೈಬಿಟ್ಟಂತಿದೆ. ಪ್ರಸ್ತುತ ದಿನಗಳಲ್ಲಿ ಕೆಲವು ಅಧಿಕಾರಿಗಳು ತಮ್ಮ ಮನಸೋ ಇಚ್ಛೆ ತನಿಖೆ ನಡೆಸುತ್ತಿದ್ದಾರೆ” ಎಂದು ಪೀಠವು ಬೇಸರಿಸಿತು.
ಪೊಲೀಸ್ ಸುಧಾರಣೆಗೆ ಸಂಬಂಧಿಸಿದ ಹಲವು ತೀರ್ಪುಗಳು ಮತ್ತು ಕ್ರಿಮಿನಲ್ ಪ್ರಕ್ರಿಯೆಯ ಗುಣಾತ್ಮಕತೆ ಹೆಚ್ಚಿಸುವುದನ್ನೂ ಜಾರಿಗೊಳಿಸಲಾಗಿಲ್ಲ. ಇದರಲ್ಲಿ ಪ್ರಕಾಶ್ ಸಿಂಗ್ ವರ್ಸರ್ಸ್ ಯೂನಿಯನ್ ಆಫ್ ಇಂಡಿಯಾದ ಸುಪ್ರೀಂ ಕೋರ್ಟ್ ತೀರ್ಪೂ ಸೇರಿದೆ.
ಕಾಟಾಚಾರದ ತನಿಖೆಯಿಂದ ಆರೋಪಿಯ ಖುಲಾಸೆಗೆ ಕಾರಣರಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಪ್ರಕ್ರಿಯೆ ಆರಂಭಿಸಲಾಗಿದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿತು. ತನಿಖಾ ಪ್ರಕ್ರಿಯೆಯನ್ನು ಸುಧಾರಿಸುವ ಕುರಿತು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆಯೂ ನ್ಯಾಯಮೂರ್ತಿ ಪ್ರಶ್ನಿಸಿದರು. ಭವಿಷ್ಯದಲ್ಲಿ ಕಾಟಾಚಾರದ ತನಿಖೆಯಿಂದ ಆರೋಪಿಯ ಖುಲಾಸೆ ತಡೆಗಟ್ಟುವ ನಿಟ್ಟಿನಲ್ಲಿ ಸಲಹೆಗಳಿದ್ದರೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿದ ನ್ಯಾಯಮೂರ್ತಿಗಳು ಈ ಮೂಲಕ "ಕಳೆದು ಹೋಗುತ್ತಿರುವ ಇಲಾಖೆಯ ಘನತೆಯನ್ನು ಮರುಸ್ಥಾಪಿಸಬಹುದು” ಎಂದಿತು.
ಮೇಲ್ಮನವಿದಾರರ ಪರವಾಗಿ ಮೊಹಿದ್ದೀನ್ ಬಾಷಾ ವಾದಿಸಿದರೆ, ರಾಜ್ಯ ಪರವಾಗಿ ಸರ್ಕಾರಿ ವಕೀಲ ಎ ರಾಬಿನ್ಸನ್ ವಾದ ಮಂಡಿಸಿದರು.