![[ಮಾನಹಾನಿ ಪ್ರಕರಣ] ವಿಚಾರಣೆ ಮುಂದೂಡಿಕೆ ಕೋರಿದ ಆರ್‌ಆರ್‌ಎಸ್ ಕಾರ್ಯಕರ್ತನಿಗೆ ₹1,000 ದಂಡ ವಿಧಿಸಿದ ನ್ಯಾಯಾಲಯ](https://gumlet.assettype.com/barandbench-kannada%2F2021-11%2F07f18148-e809-4e7f-85b3-b1ee22588d78%2Fbarandbench_2021_11_ae80fb68_8f28_4dbe_a9e8_2fa5d161e575_20.jpg?auto=format%2Ccompress&fit=max)
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಹೂಡಿರುವ ಮಾನಹಾನಿ ಪ್ರಕರಣದ ವಿಚಾರಣೆ ಮುಂದೂಡಿಕೆ ಕೋರಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕ ರಾಜೇಶ್ ಕುಂಟೆ ಅವರಿಗೆ ಮಹಾರಾಷ್ಟ್ರದ ಭಿವಂಡಿ ನ್ಯಾಯಾಲಯವು ₹1,000 ದಂಡ ವಿಧಿಸಿದ್ದು, ಅದನ್ನು ರಾಹುಲ್ ಗಾಂಧಿ ಅವರಿಗೆ ಪಾವತಿಸುವಂತೆ ಆದೇಶ ಮಾಡಿದೆ (ರಾಜೇಶ್ ಕುಂಟೆ ವರ್ಸಸ್ ರಾಹುಲ್ ಗಾಂಧಿ).
ಮಹಾತ್ಮ ಗಾಂಧಿ ಅವರ ಹತ್ಯೆಗೆ ಆರ್‌ಎಸ್‌ಎಸ್ ಕಾರಣ ಎಂದು ಭಾಷಣವೊಂದರಲ್ಲಿ ರಾಹುಲ್ ಗಾಂಧಿ ಎಂದು ಹೇಳಿದ್ದನ್ನು ಆಧರಿಸಿ ಆರ್‌ಎಸ್‌ಎಸ್ ನಾಯಕ ಕುಂಟೆ ಅವರು ರಾಹುಲ್ ವಿರುದ್ಧ ಮಾನಹಾನಿ ಪ್ರಕರಣ ಹೂಡಿದ್ದಾರೆ.
2014ರಿಂದಲೂ ಮಹಾರಾಷ್ಟ್ರದ ಭಿವಂಡಿ ನ್ಯಾಯಿಕ ಮ್ಯಾಜಿಸ್ಟ್ರೇಟ್ ಮುಂದೆ ಪ್ರಕರಣ ವಿಚಾರಣೆಗೆ ಒಳಪಟ್ಟಿದೆ. ಮ್ಯಾಜಿಸ್ಟ್ರೇಟ್ ಆದೇಶವನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿರುವುದರಿಂದ ಪ್ರಕರಣ ಮುಂದೂಡುವಂತೆ ಕುಂಟೆ ಕೋರಿದ್ದಕ್ಕೆ ಮ್ಯಾಜಿಸ್ಟ್ರೇಟ್ ಅವರು ಕುಂಟೆಗೆ ದಂಡ ಹಾಕಿದ್ದಾರೆ.
ಮಾನಹಾನಿ ಪ್ರಕರಣಗಳಲ್ಲಿ ದೂರುದಾರರು ಮೊದಲಿಗೆ ಸಾಕ್ಷಿಯಾಗಿ ಪ್ರಾಸಿಕ್ಯೂಷನ್‌ಗೆ ವಿವರಣೆ ನೀಡುತ್ತಾರೆ. ಆದರೆ, ಸಾಕ್ಷಿಯಾಗಿ ಪರಿಶೀಲಿಸಲು ನೋಟರಿ ವಕೀಲರಿಗೆ ಸಮನ್ಸ್ ಜಾರಿ ಮಾಡುವಂತೆ ಕೋರಿದ್ದ ಕುಂಟೆ ಮನವಿಯನ್ನು ಮ್ಯಾಜಿಸ್ಟ್ರೇಟ್ ತಿರಸ್ಕರಿಸಿದ್ದರು. ಇದನ್ನು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ವಿಚಾರಣೆ ಮುಂದೂಡುವಂತೆ ಕುಂಟೆ ಅವರು ಮ್ಯಾಜಿಸ್ಟ್ರೇಟ್‌ಗೆ ಕೋರಿದರು.
ಮ್ಯಾಜಿಸ್ಟ್ರೇಟ್ ನಿರ್ದೇಶನದಂತೆ ಸಿಆರ್‌ಪಿಸಿ ಸೆಕ್ಷನ್ 202ರ ಅಡಿ ಮಾನಹಾನಿ ದೂರಿನ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗೂ ಸಮನ್ಸ್ ಜಾರಿ ಮಾಡಬೇಕು ಎಂದು ಕೋರಿ ಕುಂಟೆ ಮತ್ತೊಂದು ಮನವಿ ಸಲ್ಲಿಸಿದ್ದಾರೆ. ಇದನ್ನು ರಾಹುಲ್ ಗಾಂಧಿ ಅವರನ್ನು ಪ್ರತಿನಿಧಿಸಿರುವ ವಕೀಲ ಎನ್ ವಿ ಐಯ್ಯರ್ ಅವರು ತೀವ್ರವಾಗಿ ವಿರೋಧಿಸಿದರು.
ಮತ್ತೊಂದು ಸಾಕ್ಷಿಯನ್ನು ಆಲಿಸುವುದಕ್ಕೂ ಮುನ್ನ ತಮ್ಮ ವಾದವನ್ನು ಸಾಬೀತುಪಡಿಸಬೇಕು ಎಂದು ಹೇಳಿರುವ ಮ್ಯಾಜಿಸ್ಟ್ರೇಟ್ ಡಾ. ಜೆ ವಿ ಪಾಲಿವಾಲ್ ಅವರು ಕುಂಟೆ ಸಮನ್ಸ್ ಜಾರಿ ಮಾಡಲು ಕೋರಿರುವ ಎರಡನೇ ಮನವಿಗೆ ನಿರಾಕರಿಸಿದ್ದಾರೆ. ಮುಂದಿನ ವಿಚಾರಣೆಯಲ್ಲಿ ತಪ್ಪದೇ ಸಾಕ್ಷಿ ನುಡಿಯುವಂತೆ ಕುಂಟೆಗೆ ಆದೇಶ ಮಾಡಿರುವ ಪೀಠವು ರಾಹುಲ್ ಗಾಂಧಿ ಅವರಿಗೆ ₹1,000 ದಂಡ ಪಾವತಿಸುವಂತೆ ಆದೇಶಿಸಿದೆ.