ಮಾನಹಾನಿ ಪ್ರಕರಣ: ಪತ್ರಕರ್ತ ರಾಜದೀಪ್‌, ಅರುಣ್‌ ಪುರಿ, ಶಿವ್‌ ಅರೂರ್‌ ವಿರುದ್ಧದ ಸಮನ್ಸ್‌ ಬದಿಗೆ ಸರಿಸಿದ ಹೈಕೋರ್ಟ್‌

ಮಾಧ್ಯಮ ವರದಿಯಿಂದ ಕ್ಷೇತ್ರದಲ್ಲಿ ತನ್ನ ವರ್ಚಸ್ಸಿಗೆ ಧಕ್ಕೆಯಾಗಿದ್ದು, ಇದರಿಂದ 2018ರ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಟಾಗಿದೆ ಎಂದು ಪಾಟೀಲ್‌ ಐಪಿಸಿ ಸೆಕ್ಷನ್‌ 499 ಮತ್ತು 500ರ ಅಡಿ ಕ್ರಮಕೈಗೊಳ್ಳುವಂತೆ ಖಾಸಗಿ ದೂರು ದಾಖಲಿಸಿದ್ದರು.
RajdeepSardesai, AroonPurie and B R Patil, MLA of Aland
RajdeepSardesai, AroonPurie and B R Patil, MLA of Aland

ತನ್ನನ್ನು ಭ್ರಷ್ಟ ರಾಜಕಾರಣಿ, ದುರ್ವ್ಯವಹಾರಗಳಲ್ಲಿ ತೊಡಗಿಸಿಕೊಂಡವರು ಎಂದು ಆರೋಪಿಸಿ ಸುದ್ದಿ ಪ್ರಸಾರ ಮಾಡಿದ್ದ ಸುದ್ದಿ ವಾಹಿನಿ ಟೈಮ್ಸ್‌ ನೌ, ಇಂಡಿಯಾ ಟುಡೆ, ಅದರ ಪ್ರಧಾನ ಸಂಪಾದಕ ಅರುಣ್‌ ಪುರಿ, ಹಿರಿಯ ಪತ್ರಕರ್ತರಾದ ರಾಜದೀಪ್‌ ಸರ್ದೇಸಾಯಿ ಹಾಗೂ ಸುದ್ದಿ ನಿರೂಪಕ ಶಿವ್‌ ಅರೂರ್‌ ಅವರ ವಿರುದ್ಧ ಆಳಂದದ ಮಾಜಿ ಶಾಸಕ ಬಿ ಆರ್‌ ಪಾಟೀಲ ಅವರು ಹೂಡಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್‌ ಅನ್ನು ಈಚೆಗೆ ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಬದಿಗೆ ಸರಿಸಿದೆ.

ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು. ಸಂಜ್ಞೇಯ ಪರಿಗಣಿಸಿ, ಸಮನ್ಸ್‌ ಜಾರಿ ಮಾಡಿರುವುದು ಯಾಂತ್ರಿಕವಾಗಿದೆ. ಕಾನೂನಿನ ಪ್ರಕಾರ ಹೊಸದಾಗಿ ಪ್ರಕರಣ ಪರಿಗಣಿಸುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ಹೈಕೋರ್ಟ್‌ ಆದೇಶಿಸಿದೆ.

“ದೂರುದಾರರನ್ನು ಹೊರತುಪಡಿಸಿ ಬೇರಾರನ್ನೂ ಮ್ಯಾಜಿಸ್ಟ್ರೇಟ್‌ ಆಲಿಸಿಲ್ಲ. ಅರ್ಜಿದಾರರ ವಿರುದ್ಧ ಸಂಜ್ಞೇಯ ಪರಿಗಣಿಸುವಾಗ ಮ್ಯಾಜಿಸ್ಟ್ರೇಟ್‌ ಅವರು ಸೂಕ್ತ ನಿಯಮ ಪಾಲಿಸದೆ ಪ್ರಮಾದ ಎಸಗಿದ್ದಾರೆ. ದೂರಿನಲ್ಲಿ ಆರೋಪ ಮಾಡದಿದ್ದರೂ ಮ್ಯಾಜಿಸ್ಟ್ರೇಟ್‌ ಅವರು ಐಪಿಸಿ ಸೆಕ್ಷನ್‌ 149ರ ಅಡಿ ಸಂಜ್ಞೇಯ ಪರಿಗಣಿಸಿದ್ದಾರೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

“ಸಮನ್ಸ್‌ ರದ್ದುಪಡಿಸುವುದರಿಂದ ನ್ಯಾಯದಾನ ಮಾಡುವಂತಾಗುವುದಿಲ್ಲ. ಹೀಗಾಗಿ, ದೂರನ್ನೇ ರದ್ದುಪಡಿಸಬೇಕು ಎಂಬ ಅರ್ಜಿದಾರರ ವಾದವನ್ನು ಪುರಸ್ಕರಿಸಲಾಗದು. ನ್ಯಾಯಾಲಯವು ಪ್ರಕರಣದ ಅರ್ಹತೆಯನ್ನು ನಿರ್ಧರಿಸಲಾಗದು. ಇದು ಪೂರ್ವಾಗ್ರಹ ಉಂಟು ಮಾಡುತ್ತದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ. ಹೀಗಾಗಿ, ಪ್ರಕರಣವನ್ನು ಹೊಸದಾಗಿ ಪರಿಗಣಿಸಲು ವಿಚಾರಣಾಧೀನ ನ್ಯಾಯಾಲಯಕ್ಕೆ ಮರಳಿಸಲಾಗಿದೆ ಎಂದು ಆದೇಶದಲ್ಲಿ ವಿವರಿಸಿದೆ.

Also Read
ಇಂಡಿಯಾ ಟುಡೆ, ಸರ್ದೇಸಾಯಿ, ಅರುಣ್ ಪುರಿ ವಿರುದ್ಧ ಮಾಜಿ ಶಾಸಕ ಬಿ ಆರ್ ಪಾಟೀಲ ಹೂಡಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆ

ಪ್ರಕರಣದ ಹಿನ್ನೆಲೆ: ರಾಜ್ಯಸಭಾ ಚುನಾವಣೆಯ ಹೊಸ್ತಿಲಲ್ಲಿ ಹಣಕ್ಕಾಗಿ ರಾಜಕಾರಣಿಗಳು ಪಕ್ಷಾಂತರ ಮಾಡುತ್ತಿರುವುದಕ್ಕೆ ಸಂಬಂಧಿಸಿದಂತೆ ದೂರುದಾರರಾದ ಬಿ ಆರ್‌ ಪಾಟೀಲ್‌ ಅವರು ನಡೆಸಿರುವ ಸಂಭಾಷಣೆ ಎನ್ನಲಾದ ಕುಟುಕು ಕಾರ್ಯಾಚಾರಣೆಯ ಮುದ್ರಿಕೆಯನ್ನು ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗಿತ್ತು. ಸದರಿ ಸಂಭಾಷಣೆಯು 2016ರ ಮೇ 27ರಂದು ಬೆಂಗಳೂರಿನ ಲಲಿತ್‌ ಅಶೋಕ್‌ ಹೋಟೆಲ್‌ನಲ್ಲಿ ನಡೆದಿತ್ತು ಎನ್ನಲಾಗಿತ್ತು. ಇದರ ವಿರುದ್ಧ ಬಿ ಆರ್‌ ಪಾಟೀಲ್‌ ಅವರು ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣೆಯಲ್ಲಿ ಸೆಕ್ಷನ್‌ಗಳಾದ 417, 420, 468, 153ಎ 120ಬಿ ಜೊತೆಗೆ ಸೆಕ್ಷನ್‌ 34 ಹಾಗೂ ಮಾಹಿತಿ ತಂತ್ರಜ್ಞಾ ಕಾಯಿದೆ ಸೆಕ್ಷನ್‌ 65ರ ಅಡಿ ಪ್ರಕರಣ ದಾಖಲಿಸಿದ್ದರು ಪ್ರಕರಣದ ತನಿಖೆಗೆ ಈಗಾಗಲೇ ಹೈಕೋರ್ಟ್‌ ತಡೆ ನೀಡಿದೆ.

ಮಾಧ್ಯಮ ವರದಿಯಿಂದ ಕ್ಷೇತ್ರದಲ್ಲಿ ತನ್ನ ವರ್ಚಸ್ಸಿಗೆ ಧಕ್ಕೆಯಾಗಿದ್ದು, ಇದರಿಂದ 2018ರ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಟಾಗಿದೆ ಎಂದು ಪಾಟೀಲ್‌ ಅವರು ಟೈಮ್ಸ್‌ ನೌ, ಇಂಡಿಯಾ ಟುಡೆ ಮತ್ತು ಅದರ ಪತ್ರಕರ್ತರ ವಿರುದ್ಧ ಐಪಿಸಿ ಸೆಕ್ಷನ್‌ 499 ಮತ್ತು 500ರ ಅಡಿ ಕ್ರಮಕೈಗೊಳ್ಳುವಂತೆ ಖಾಸಗಿ ದೂರು ದಾಖಲಿಸಿದ್ದರು. ಹೀಗಾಗಿ, ಆಕ್ಷೇಪಿತ ಆದೇಶವನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಮಾಡಿತ್ತು. ಈಗ ಹೈಕೋರ್ಟ್‌ ಸಮನ್ಸ್‌ಗೆ ತಡೆ ನೀಡಿದೆ.

Related Stories

No stories found.
Kannada Bar & Bench
kannada.barandbench.com