ಸಚಿವ ಜಾರ್ಜ್‌ ವಿರುದ್ಧ ಮಾನಹಾನಿ ವರದಿ: "ಆರೋಪ ಪರಿಶೀಲಿಸಲಾಗಿತ್ತೇ?" ಎಂದು ಮಾಧ್ಯಮವನ್ನು ಪ್ರಶ್ನಿಸಿದ ಹೈಕೋರ್ಟ್‌

“ಮಾಧ್ಯಮ ಗೋಷ್ಠಿಯಲ್ಲಿ ಯಾರಾದರೂ ಬೇರೆಯವರ ಬಗ್ಗೆ ಆರೋಪ ಮಾಡಿದರೆ ಅದನ್ನು ಪರಿಶೀಲಿಸದೇ ವರದಿ ಮಾಡಲಾಗುತ್ತದಯೇ? ವರದಿ ಪ್ರಕಟಿಸುವಾಗ ಮಾಧ್ಯಮಗಳು ಜವಾಬ್ದಾರಿ ಪ್ರದರ್ಶಿಸಬೇಕು” ಎಂದ ಹಿರಿಯ ವಕೀಲ ಕೆ ಎನ್‌ ಫಣೀಂದ್ರ.
Ravi Hegde and Karnataka High Court
Ravi Hegde and Karnataka High Court
Published on

"ಇಂಧನ ಸಚಿವ ಕೆ ಜೆ ಜಾರ್ಜ್‌ ವಿರುದ್ಧದ ಮಾಧ್ಯಮ ಗೋಷ್ಠಿಯ ಸುದ್ದಿ ಪ್ರಕಟಿಸುವುದಕ್ಕೂ ಮುನ್ನ ಆರೋಪಗಳನ್ನು ಪರಿಶೀಲಿಸಲಾಗಿತ್ತೇ? ಅದಕ್ಕೆ ಸಂಬಂಧಿಸಿದಂತೆ ಜಾರ್ಜ್‌ ಅವರ ಪ್ರತಿಕ್ರಿಯೆ ಪಡೆಯಲಾಗಿತ್ತೇ? ಇಲ್ಲವೇ ಡಿಸ್‌ಕ್ಲೇಮರ್‌ (ಹಕ್ಕು ನಿರಾಕರಣೆ) ಹಾಕಲಾಗಿತ್ತೇ?” ಎಂದು ಕರ್ನಾಟಕ ಹೈಕೋರ್ಟ್‌ ಬುಧವಾರ ಮೌಖಿಕವಾಗಿ ಕನ್ನಡ ಪ್ರಭ ಪತ್ರಿಕೆಯ ಪ್ರಧಾನ ಸಂಪಾದಕ ರವಿ ಹೆಗಡೆ ಪರ ವಕೀಲರನ್ನು ಪ್ರಶ್ನಿಸಿತು.

ಆಧಾರರಹಿತ, ದುರುದ್ದೇಶಪೂರಿತ ಆರೋಪಗಳನ್ನು ಮಾಡಿ ನನ್ನ ತೇಜೋವಧೆ ಮಾಡಲಾಗಿದೆ ಎಂದು ಆಕ್ಷೇಪಿಸಿ ಕೆ ಜೆ ಜಾರ್ಜ್ ಅವರು ಕರ್ನಾಟಕ ರಾಷ್ಟ್ರ ಸಮಿತಿಯ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ, ಬಿಜೆಪಿ ಮುಖಂಡ ಎನ್‌ ಆರ್‌ ರಮೇಶ್‌ ಹಾಗೂ ವರದಿ ಪ್ರಕಟಿಸಿದ್ದಕ್ಕಾಗಿ ತನ್ನ ವಿರುದ್ಧ ದಾಖಲಿಸಿರುವ ಮಾನಹಾನಿ ದಾವೆ ರದ್ದುಪಡಿಸುವಂತೆ ಕೋರಿ ರವಿ ಹೆಗಡೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

Justice M I Arun
Justice M I Arun

ವಿಚಾರಣೆಯ ಒಂದು ಹಂತದಲ್ಲಿ ಪೀಠವು ರವಿ ಹೆಗಡೆ ಪರ ವಕೀಲ ಎಸ್‌ ಸುದರ್ಶನ್‌ ಅವರನ್ನು ಕುರಿತು “ಮಾಧ್ಯಮ ಗೋಷ್ಠಿಯಲ್ಲಿನ ಆರೋಪಗಳನ್ನು ಪ್ರಕಟಿಸುವುದಕ್ಕೂ ಮುನ್ನ ಅದನ್ನು ಪರಿಶೀಲಿಸಲಾಗಿತ್ತೇ? ಆರೋಪಕ್ಕೆ ಗುರಿಪಡಿಸಲಾಗಿರುವ ವ್ಯಕ್ತಿಯ ಅಭಿಪ್ರಾಯಪಡೆಯಲಾಗಿತ್ತೇ? ಆರೋಪಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎಂಬ ಹಕ್ಕು ನಿರಾಕರಣೆ ಪ್ರಕಟಿಸಲಾಗಿತ್ತೇ” ಎಂದು ಪ್ರಶ್ನಿಸಿತು.

ರವಿ ಹೆಗಡೆ ಪ್ರತಿನಿಧಿಸಿದ್ದ ವಕೀಲ ಎಸ್‌ ಸುದರ್ಶನ್‌ ಅವರು “ಇಲ್ಲ. ಆದರೆ, ಯಾರು ಆರೋಪ ಮಾಡಿದ್ದಾರೆ ಎಂಬುದನ್ನು ಉಲ್ಲೇಖಿಸಲಾಗಿದೆ” ಎಂದರು. ಇದಕ್ಕೂ ಮುನ್ನ, “ಸಚಿವ ಜಾರ್ಜ್‌ ಅವರು ಬಯಸಿರುವ ಯಾವುದೇ ತೆರನಾದ ಸ್ಪಷ್ಟನೆಯನ್ನು ಪತ್ರಿಕೆಯ ಮೊದಲ ಪುಟದಲ್ಲಿ ಪ್ರಕಟಿಸಲಾಗುವುದು” ಎಂದರು. ಇದಕ್ಕೆ ಜಾರ್ಜ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು “ಇದನ್ನು ಒಪ್ಪಲಾಗದು” ಎಂದರು. ಮುಂದುವರಿದು, ಫಣೀಂದ್ರ ಅವರು “ಮಾಧ್ಯಮ ಗೋಷ್ಠಿಯಲ್ಲಿ ಯಾರಾದರೂ ಬೇರೆಯವರ ಬಗ್ಗೆ ಆರೋಪ ಮಾಡಿದರೆ ಅದನ್ನು ಪರಿಶೀಲಿಸದೇ ವರದಿ ಮಾಡಲಾಗುತ್ತದಯೇ? ವರದಿ ಪ್ರಕಟಿಸುವಾಗ ಮಾಧ್ಯಮಗಳು ಜವಾಬ್ದಾರಿ ಪ್ರದರ್ಶಿಸಬೇಕು” ಎಂದರು.

ಇದಕ್ಕೆ ಸುದರ್ಶನ್‌ ಅವರು “ಮಾಧ್ಯಮ ಗೋಷ್ಠಿಯಲ್ಲಿ ವಿಚಾರಗಳನ್ನು ವರದಿ ಮಾಡಲಾಗಿದೆ. ಬೇರೆ ಮಾಧ್ಯಮಗಳೂ ಅದನ್ನು ವರದಿ ಮಾಡಿದ್ದರೂ ನಮ್ಮ ವಿರುದ್ಧ ಮಾತ್ರ ಮಾನಹಾನಿ ದಾವೆ ಹೂಡಲಾಗಿದೆ. ಇಲ್ಲಿ ಪತ್ರಿಕೆಯು ಯಾವುದೇ ತೆರನಾದ ಸ್ವತಂತ್ರ ಅಭಿಪ್ರಾಯ ವ್ಯಕ್ತಪಡಿಸಿಲ್ಲ” ಎಂದರು.

ಆಗ ಫಣೀಂದ್ರ ಅವರು “ಸಂವಿಧಾನದ 21ನೇ ವಿಧಿಯು ಘನತೆಗೆ ಸಮಾನವಾಗಿದ್ದು, ಅದಕ್ಕೆ ಹಾನಿಯಾದರೆ ಅದು ಮರಳಿ ಬಾರದು. ಮಾಧ್ಯಮಗಳಿಗೆ ಜವಾಬ್ದಾರಿ ಇರಬೇಕು” ಎಂದರು.

ಈ ವೇಳೆ ಪೀಠವು “ಕೊನೆಯ ಲೇಖನವು ಸ್ವಲ್ಪ ಮಾನಹಾನಿಯ ರೀತಿ ಕಾಣಿಸುತ್ತದೆ. ಲೇಖನ/ವರದಿಯ ತಲೆಬರಹವನ್ನು ನೋಡಿದರೆ ಸಾಮಾನ್ಯ ಓದುಗನಿಗೆ ಏನನ್ನಿಸುತ್ತದೆ ಎಂಬುದು ತಿಳಿದಿದೆಯೇ” ಎಂದು ಪ್ರಶ್ನಿಸಿತು. ಇದಕ್ಕೆ ಸುದರ್ಶನ್‌ ಅವರು “ಯಾರು ಆರೋಪ ಮಾಡಿದ್ದಾರೆ ಎಂಬುದನ್ನು ಉಲ್ಲೇಖಿಸಲಾಗಿದೆ” ಎಂದು ಸಮಜಾಯಿಷಿ ನೀಡಿದರೂ ಪೀಠವು ಸಂತುಷ್ಟವಾದಂತೆ ಕಾಣಲಿಲ್ಲ.

Also Read
ಟಿಆರ್‌ಪಿಗಾಗಿ ಜನರ ಜೀವನವನ್ನೇ ನಾಶ ಮಾಡುವ ಹಂತಕ್ಕೆ ಮಾಧ್ಯಮಗಳ ಹೆಜ್ಜೆ: ಹೈಕೋರ್ಟ್‌ ಬೇಸರ

ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾರ್ಜ್‌ ಅವರನ್ನು ಸರಳುಗಳ ಹಿಂದೆ ನಿಲ್ಲಿಸಿದ ರೀತಿಯಲ್ಲಿ ಪ್ರಕಟವಾಗಿರುವ ಚಿತ್ರವನ್ನು ಪೀಠಕ್ಕೆ ತೋರಿಸಿ “ಇದು ಮಾಧ್ಯಮಗಳ ಜವಾಬ್ದಾರಿಯೇ ಸ್ವಾಮಿ” ಎಂದು ಖಾರವಾಗಿ ಪ್ರಶ್ನಿಸಿದರು. ಅಲ್ಲದೇ, ಪ್ರಕರಣ ವಜಾಕ್ಕೆ ವಿರೋಧಿಸಿದರು.

ವಾದ-ಪ್ರತಿವಾದ ಆಲಿಸಿದ ಪೀಠವು ವಿಚಾರಣೆಯನ್ನು ಆಗಸ್ಟ್‌ 23ಕ್ಕೆ ಮುಂದೂಡಿತು.

Kannada Bar & Bench
kannada.barandbench.com