ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಅವಹೇಳನಕಾರಿ ಪೋಸ್ಟ್: ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ಶಾರೂಖ್ ಕೊಪ್ಪಳ ಎಂಬ ಹೆಸರಿನ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಅಶ್ಲೀಲ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ಧರ್ಮ ಧರ್ಮಗಳ ನಡುವೆ ದ್ವೇಷ ಭಾವನೆ ಮೂಡಿಸುವಂಥ ಪೋಸ್ಟ್ ಹಾಕಿದ ಆರೋಪ ಮಾಡಲಾಗಿದೆ.
RSS Leader Kalladka Prabhakar Bhat and Karnataka HC
RSS Leader Kalladka Prabhakar Bhat and Karnataka HC
Published on

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿ ಪೋಸ್ಟ್ ಹಂಚಿದ ಪ್ರಕರಣದಲ್ಲಿ ಆರೋಪಿಯಾಗಿರುವ ಬಂಟ್ವಾಳದ ಶಾರೂಖ್‌ ಎಂಬುವರಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ನಿರೀಕ್ಷಣಾ ಜಾಮೀ‌ನು ಮಂಜೂರು ಮಾಡಿದೆ.

ಬಂಟ್ವಾಳ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆರೋಪಿ ಶಾರೂಖ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರ ಏನಸದಸ್ಯ ಪೀಠ ಪುರಸ್ಕರಿಸಿದೆ.

ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಅವಹೇಳನಕಾರಿ ಪೋಸ್ಟ್ ಹಾಕುವ ಮೂಲಕ ಎರಡು ಕೋಮುಗಳ ನಡುವೆ ದ್ವೇಷ ಹುಟ್ಟಿಸಿದ ಹಾಗೂ ಸಮಾಜದ ಶಾಂತಿ ಕದಡಿದ ಆರೋಪ ಅರ್ಜಿದಾರನ ಮೇಲಿದೆ. ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಅರ್ಜಿದಾರನೇ ಬಳಸಿ, ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕಿದ್ದನೇ ಎನ್ನುವುದು ತನಿಖೆ ಹಾಗೂ ವಿಚಾರಣೆಯಿಂದ ತಿಳಿದುಬರಬೇಕಿದೆ. ತನಿಖೆಗೆ ಸಹಕರಿಸುವುದಾಗಿ, ನ್ಯಾಯಾಲಯ ವಿಧಿಸುವ ಷರತ್ತುಗಳಿಗೆ ಬದ್ಧನಿರುವುದಾಗಿ ಆರೋಪಿ ಮುಚ್ಚಳಿಕೆ ನೀಡಿದ್ದಾನೆ. ಆರೋಪಿ ಎಸಗಿದ್ದಾನೆ ಎನ್ನಲಾದ ಕೃತ್ಯ ಜೀವಾವಧಿ ಅಥವಾ ಮರಣದಂಡನೆ ಶಿಕ್ಷೆ ವಿಧಿಸುವಂಥದ್ದಲ್ಲ. ಆರೋಪಿ ಯಾವುದೇ ಅಪರಾಧಿಕ ಹಿನ್ನೆಲೆ ಹೊಂದಿಲ್ಲ. ಈ ಎಲ್ಲ ವಿಚಾರಗಳನ್ನು ಪರಿಗಣಿಸಿ, ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗುತ್ತಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಆರೋಪಿಯನ್ನು ಬಂಧಿಸಿದ ಸಂದರ್ಭದಲ್ಲಿ ಬಂಟ್ವಾಳ ಟೌನ್ ಪೊಲೀಸರು ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಆದೇಶಿಸಿರುವ ಪೀಠವು ಆರೋಪಿಯು 10 ದಿನಗಳ ಒಳಗೆ ತನಿಖಾಧಿಕಾರಿಯ ಮುಂದೆ ಹಾಜರಾಗಿ 1 ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಒಬ್ಬರ ಭದ್ರತೆಗೆ ಒದಗಿಸಬೇಕು. ತನಿಖಾಧಿಕಾರಿ ಸೂಚಿಸಿದ ಸಂದರ್ಭಗಳಲ್ಲಿ ಹಾಜರಾಗಿ, ತನಿಖೆಗೆ ಸಹಕರಿಸಬೇಕು. ಪ್ರಕರಣದ ಸಾಕ್ಷಿಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರಚೋದನೆ ಅಥವಾ ಬೆದರಿಕೆಯೊಡ್ಡಬಾರದು, ಪ್ರಕರಣದ ಸಾಕ್ಷ್ಯಗಳನ್ನು ತಿರುಚಬಾರದು ಎಂಬ ಷರತ್ತುಗಳನ್ನು ವಿಧಿಸಿದೆ.

ಅರ್ಜಿದಾರರ ಪರ ವಕೀಲ ರಾಶಿಫ್ ನಾಯರ್ಮೂಲೆ ಅವರು “ಅರ್ಜಿದಾರ ಯಾವುದೇ ಪೋಸ್ಟ್‌ಗಳನ್ನು ಪ್ರಕಟಿಸಿಲ್ಲ. ಆತನ ಸಾಮಾಜಿಕ ಜಾಲತಾಣಗಳ ಖಾತೆ ಹ್ಯಾಕ್ ಆಗಿರಬಹುದು ಅಥವಾ ಆತನ ಪಾಸ್ವರ್ಡ್‌ಗಳನ್ನು ತಿಳಿದಿರುವ ಯಾರೋ ಆತನ ಖಾತೆ ಬಳಸಿರಬಹುದು. ಅರ್ಜಿದಾರ ಎಸಗಿದ್ದಾನೆ ಎನ್ನಲಾದ ಕೃತ್ಯ ಜೀವಾವಧಿ ಅಥವಾ ಮರಣದಂಡನೆ ಶಿಕ್ಷೆ ವಿಧಿಸುವಂಥದ್ದಲ್ಲ. ಆರೋಪಿಯು ಪೊಲೀಸ್ ತನಿಖೆಗೆ ಎಲ್ಲ ರೀತಿಯ ಸಹಕಾರ‌ ನೀಡಲಿದ್ದು, ನ್ಯಾಯಾಲಯ ವಿಧಿಸುವ ಯಾವುದೇ ಷರತ್ತುಗಳಿಗೆ ಬದ್ಧನಾಗಿರುತ್ತಾನೆ. ಆದ್ದರಿಂದ, ಅರ್ಜಿ ಪುರಸ್ಕರಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು” ಎಂದು ಕೋರಿದ್ದರು.

Also Read
ಕೋಮು ದ್ವೇಷ ಭಾಷಣ: ಕಲ್ಲಡ್ಕ ಪ್ರಭಾಕರ್‌ ಭಟ್‌ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಹೈಕೋರ್ಟ್‌ ನಿರ್ದೇಶನ

ಪ್ರಕರಣದ ಹಿನ್ನೆಲೆ: 2025ರ ನವೆಂಬರ್ 2ರ ರಾತ್ರಿ ಬಂಟ್ವಾಳ ಟೌನ್ ಪೊಲೀಸ್ ಠಾಣೆಗೆ ತೆರಳಿ ದೂರು ‌ನೀಡಿದ್ದ ಕೆ ಕೃಷ್ಣಪ್ಪ ಎಂಬುವರು, ಶಾರೂಖ್ ಕೊಪ್ಪಳ ಎಂಬ ಹೆಸರಿನ ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ಅಶ್ಲೀಲ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ಧರ್ಮ ಧರ್ಮಗಳ ನಡುವೆ ದ್ವೇಷ ಭಾವನೆ ಮೂಡಿಸುವಂಥ ಪೋಸ್ಟ್ ಹಾಕಲಾಗಿದ್ದು, ಆ ಮೂಲಕ ಸಾರ್ವಜನಿಕ ಶಾಂತಿಗೆ ಭಂಗವನ್ನುಂಟು ಮಾಡಲಾಗಿದೆ. ಆದ್ದರಿಂದ, ಶಾರೂಖ್ ಕೊಪ್ಪಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದರು.

ಪ್ರಕರಣದ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಬಂಧನ ಭೀತಿ ಎದುರಿಸುತ್ತಿದ್ದ ಶಾರೂಖ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮಂಗಳೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಜಾಗೊಳಿಸಿತ್ತು. ಇದರಿಂದ, ಆರೋಪಿ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.

Kannada Bar & Bench
kannada.barandbench.com