ವಿಳಂಬಯುತವಾಗಿ ಜಾಮೀನು ಆದೇಶದ ಮಾಹಿತಿ ನೀಡುವುದರಿಂದ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ: ನ್ಯಾ. ಡಿ ವೈ ಚಂದ್ರಚೂಡ್

ಗುಜರಾತ್ ಮತ್ತು ಕರ್ನಾಟಕ ಹೈಕೋರ್ಟ್‌ ಈಗಾಗಲೇ ನ್ಯಾಯಾಲಯ ಕಲಾಪಗಳ ನೇರ ಪ್ರಸಾರ ಆರಂಭಿಸಿರುವುದನ್ನು ನ್ಯಾಯಮೂರ್ತಿಗಳು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.
ವಿಳಂಬಯುತವಾಗಿ ಜಾಮೀನು ಆದೇಶದ ಮಾಹಿತಿ ನೀಡುವುದರಿಂದ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ: ನ್ಯಾ. ಡಿ ವೈ ಚಂದ್ರಚೂಡ್
Published on

ವ್ಯಕ್ತಿಗಳ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲು ನ್ಯಾಯಾಲಯಗಳು ನೀಡಿದ ಜಾಮೀನು ಆದೇಶಗಳನ್ನು ಸೂಕ್ತ ಸಮಯಕ್ಕೆ ಜೈಲು ಅಧಿಕಾರಿಗಳಿಗೆ ತಿಳಿಸುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಒತ್ತಿ ಹೇಳಿದ್ದಾರೆ.

ಸುಪ್ರೀಂಕೋರ್ಟ್‌ ಇ-ಸಮಿತಿಯ ಅಧ್ಯಕ್ಷರೂ ಆಗಿರುವ ಅವರು ಅಲಾಹಾಬಾದ್ ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ವರ್ಚುವಲ್ ಕೋರ್ಟ್‌ ಮತ್ತು ಇ-ಸೇವಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಜಾಮೀನು ಆದೇಶಗಳನ್ನು ಜೈಲು ಅಧಿಕಾರಿಗಳಿಗೆ ತಿಳಿಸುವ ಈಗಿನ ವ್ಯವಸ್ಥೆಯಲ್ಲಿ ಗಂಭೀರ ನ್ಯೂನತೆಗಳಿವೆ ಎಂದು ನ್ಯಾಯಮೂರ್ತಿಗಳು ಹೇಳಿದರು. "ಇದು ನಮ್ಮ ವ್ಯವಸ್ಥೆಯ ಗಂಭೀರ ಕೊರತೆ, ಜಾಮೀನು ಆದೇಶಗಳ ಸಂವಹನ ವಿಳಂಬವಾಗಿದೆ. ಇದು ವಿಚಾರಣೆ ಎದುರಿಸಿದ ಪ್ರತಿಯೊಬ್ಬ ವ್ಯಕ್ತಿಯ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತದೆ" ಎಂದು ವಿವರಿಸಿದರು.

ಅಲಾಹಾಬಾದ್ ಹೈಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರ ನೇತೃತ್ವದಲ್ಲಿ ಹೈಕೋರ್ಟ್‌ ಕಲಾಪಗಳ ನೇರ ಪ್ರಸಾರ ಕಾರ್ಯರೂಪಕ್ಕೆ ಬರಲಿದೆ ಎಂದು ಅವರು ಈ ಸಂದರ್ಭದಲ್ಲಿ ಭರವಸೆ ವ್ಯಕ್ತಪಡಿಸಿದರು. ಗುಜರಾತ್ ಮತ್ತು ಕರ್ನಾಟಕ ಹೈಕೋರ್ಟ್‌ಗಳು ಈಗಾಗಲೇ ನ್ಯಾಯಾಲಯ ಕಲಾಪಗಳ ನೇರ ಪ್ರಸಾರ ಆರಂಭಿಸಿರುವುದನ್ನು ಅವರು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.

Also Read
ಕೇಂದ್ರವು ಕೋವಿಡ್‌ ಲಸಿಕಾ ನೀತಿ ಬದಲಾಯಿಸಲು ಸುಪ್ರೀಂ ಆದೇಶ ಪ್ರೇರೇಪಿಸಿದ್ದನ್ನು ವಿವರಿಸಿದ ನ್ಯಾ. ಚಂದ್ರಚೂಡ್‌

ಇ-ಸೇವಾ ಕೇಂದ್ರಗಳ ಅಗತ್ಯವನ್ನು ಕುರಿತು ಮಾತನಾಡುತ್ತಾ, ಡಿಜಿಟಲ್ ಕಂದರದಿಂದಾಗಿ ನಮ್ಮ ಬಹುಪಾಲು ಜನ ತಂತ್ರಜ್ಞಾನಕ್ಕೆ ತೆರೆದುಕೊಂಡಿಲ್ಲ. ಹೀಗಾಗಿ ಇದು ಅನಿವಾರ್ಯವಾಗಿದೆ. ವಕೀಲರು ಇಂತಹ ಜನರ ಪರವಾಗಿ ವಾದ ಮಂಡಿಸುತ್ತಾರೆ ಎಂದು ಹೇಳಿದರು.

ಭೌತಿಕ ರೆಜಿಸ್ಟರ್‌ಗೆ ಬದಲಾಗಿ ಆಧುನಿಕ ಎಲೆಕ್ಟ್ರಾನಿಕ್‌ ರೆಜಿಸ್ಟರ್‌ಗಳನ್ನು ರಾಜ್ಯಾದ್ಯಂತ ಬಳಸುವಂತೆಯೂ ಅವರು ಮುಖ್ಯ ನ್ಯಾಯಮೂರ್ತಿ ಬಿಂದಾಲ್‌ ಅವರಿಗೆ ಸಲಹೆ ನೀಡಿದರು. ತಾವು ಅಲಾಹಾಬಾದ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ಸಂದರ್ಭವನ್ನು ಕೂಡ ನ್ಯಾ. ಚಂದ್ರಚೂಡ್‌ ಈ ಸಂದರ್ಭದಲ್ಲಿ ಸ್ಮರಿಸಿದರು.

ಕಾರ್ಯಕ್ರಮದ ದೃಶ್ಯಾವಳಿಗಳನ್ನು ಇಲ್ಲಿ ನೋಡಿ.

Kannada Bar & Bench
kannada.barandbench.com