
ದೆಹಲಿಯ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿರುವ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಶುಕ್ರವಾರ ದೆಹಲಿ ನ್ಯಾಯಾಲಯವು ಜಾಮೀನು ನಿರಾಕರಿಸಿದೆ.
ಮಾರ್ಚ್ 24ರಂದು ಕಾಯ್ದಿರಿಸಿದ್ದ ಆದೇಶವನ್ನು ರೌಸ್ ಅವೆನ್ಯೂ ನ್ಯಾಯಾಲಯದ ವಿಶೇಷ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎಂ ಕೆ ನಾಗ್ಪಾಲ್ ಅವರು ಪ್ರಕಟಿಸಿದರು.
ಹಣಕ್ಕಾಗಿ ಸಿಸೋಡಿಯಾ ಮತ್ತು ಆಪ್‌ನ ಇತರೆ ಸದಸ್ಯರು ಅಬಕಾರಿ ಪರವಾನಗಿಯನ್ನು ಕೆಲವು ವ್ಯಾಪಾರಗಳಿಗೆ ಮಂಜೂರು ಮಾಡಿದ್ದಾರೆ ಎಂಬ ಆರೋಪ ಇದೆ. ದೆಹಲಿಯ ಮುಖ್ಯ ಕಾರ್ಯದರ್ಶಿ ವರದಿ ಆಧರಿಸಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸೆಕ್ಸೇನಾ ಅವರು ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿದ ಬಳಿಕ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಪ್ರಕರಣ ದಾಖಲಿಸಿದ್ದವು. ಸಿಸೋಡಿಯಾ ಅವರು ಶಾಸನಬದ್ಧ ನಿಬಂಧನೆಗಳನ್ನು ಉಲ್ಲಂಘಿಸಿ, ನೀತಿಯ ಅಧಿಸೂಚನೆ ಹೊರಡಿಸಿದ್ದರಿಂದ ಅಪಾರ ಪ್ರಮಾಣದ ಆರ್ಥಿಕ ಸಮಸ್ಯೆಗಳನ್ನು ಉಂಟು ಮಾಡಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಸಿಬಿಐ ಆರೋಪ ಪಟ್ಟಿಯಲ್ಲಿ ಸಿಸೋಡಿಯಾ ಅವರ ಹೆಸರು ಉಲ್ಲೇಖಿಸದಿದ್ದರೂ ಅವರು ಮತ್ತು ಇತರರ ವಿರುದ್ದದ ತನಿಖೆಯನ್ನು ಮುಕ್ತವಾಗಿ ಇಡಲಾಗಿದೆ. ಆರೋಪಗಳನ್ನು ಸಾರಾಸಗಟವಾಗಿ ತಿರಸ್ಕರಿಸಿರುವ ಆಪ್, ಸಿಸೋಡಿಯಾ ಅವರು ಮುಗ್ಧ ಎಂದು ಹೇಳಿದೆ.
ಅಬಕಾರಿ ನೀತಿಯಲ್ಲಿ ಬದಲಾವಣೆ ಮಾಡಿರುವುದನ್ನು ಲೆಫ್ಟಿನೆಂಟ್ ಗವರ್ನರ್ ಒಪ್ಪಿದ್ದಾರೆ. ಅದಾಗ್ಯೂ, ಚುನಾಯಿತ ಸರ್ಕಾರದ ನೀತಿಯ ತೀರ್ಮಾನದ ವಿರುದ್ಧ ಸಿಬಿಐ ಕೆಲಸ ಮಾಡುತ್ತಿದೆ ಎಂಬುದು ಸಿಸೋಡಿಯಾ ವಾದವಾಗಿದೆ.
ಎಂಟು ಗಂಟೆಗಳ ವಿಚಾರಣೆಯ ಬಳಿಕ ಫೆಬ್ರವರಿ 26ರಂದು ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತ್ತು. ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಮಾರ್ಚ್ 10ರಂದು ಜಾರಿ ನಿರ್ದೇಶನಾಲಯವು ಸಿಸೋಡಿಯಾ ಅವರನ್ನು ವಶಕ್ಕೆ ಪಡೆದಿತ್ತು.