ಪ್ರಚೋದನಾಕಾರಿ ಭಾಷಣ ಮಾಡಿದ ಬಿಜೆಪಿ ನಾಯಕರಾದ ಅನುರಾಗ್ ಠಾಕೂರ್ ಮತ್ತು ಪರೇಶ್ ವರ್ಮಾ ಅವರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸುವಂತೆ ಸಿಪಿಐ (ಎಂ) ನಾಯಕರಾದ ಬೃಂದಾ ಕಾರಟ್ (ಬೃಂದಾ ಕಾರಟ್ v.ಕೇಂದ್ರ ಸರ್ಕಾರ) ಮತ್ತು ಕೆ ಎಂ ತಿವಾರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ವಜಾಗೊಳಿಸಿದೆ.
ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್ ಪಿಸಿ) ಸೆಕ್ಷನ್ 156 (3)ಅಡಿ ಕೋರಿದ್ದ ಅರ್ಜಿಯನ್ನು ಸಕ್ಷಮ ಪ್ರಾಧಿಕಾರವಾದ ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆಯದೆ ಇರುವುದರಿಂದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ವಿಶಾಲ್ ಪಹುಜಾ ಅವರು ವಜಾಗೊಳಿಸಿದರು.
ಇದೇ ವರ್ಷದ ಫೆಬ್ರುವರಿಯಲ್ಲಿ ಕಾರಟ್ ಮತ್ತು ತಿವಾರಿ ಅವರು ಭಾರತೀಯ ದಂಡ ಸಂಹಿತೆ -1860ರ ಸೆಕ್ಷನ್ 153A/153B/295A/298/504/506 ಅಡಿ ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ಹಾಗೂ ಸಂಸದ ಪರೇಶ್ ಸಾಹಿಬ್ ಸಿಂಗ್ ವರ್ಮಾ ವಿರುದ್ಧ ದೂರು ದಾಖಲಿಸಲು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸರಿಗೆ ಸೂಚಿಸುವಂತೆ ಎಸಿಎಂಎಂ ಅನ್ನು ಕೋರಿದ್ದರು.
ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರೈತಾಲದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಅನುರಾಗ್ ಠಾಕೂರ್ ಅವರು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಉದ್ದೇಶಿಸಿ “ದೇಶ ವಿರೋಧಿಗಳನ್ನು ಗುಂಡಿಟ್ಟು ಕೊಲ್ಲಿ” ಎಂದು ಸಭಿಕರಲ್ಲಿ ಪಠಣ ಮಾಡಿಸಿದ್ದನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸುದ್ದಿ ಸಂಸ್ಥೆ ಎಎನ್‌ಐಗೆ ಜನವರಿ 28ರಂದು ನೀಡಿದ್ದ ಸಂದರ್ಶನದಲ್ಲಿ ವರ್ಮಾ ಅವರು ಶಾಹೀನ್ ಬಾಗ್ ನಲ್ಲಿ ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದವರ ವಿರುದ್ಧ ದೋಷಪೂರಿತ, ಪ್ರಚೋದನಾಕಾರಿ ಮತ್ತು ಕೋಮು ದ್ವೇಷದ ಮಾತುಗಳನ್ನು ಆಡಿದ್ದರು ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಠಾಕೂರ್ ಮತ್ತು ವರ್ಮಾ ಅವರು ಉದ್ದೇಶಪೂರಿತವಾಗಿ ಹೇಳಿಕೆ ನೀಡಿಲ್ಲವಾದ್ದರಿಂದ ಅದು ಪ್ರಚೋದನೆ ನೀಡುವ ಉದ್ದೇಶದಿಂದ ಮಾಡಿದ ಭಾಷಣ ಎನ್ನಲಾಗದು. ಆರೋಪದಲ್ಲಿ ವಾಸ್ತವಾಂಶಗಳಿಲ್ಲ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ದೆಹಲಿ ಪೊಲೀಸರು ಉಭಯ ನಾಯಕರಿಗೆ ಕ್ಲೀನ್ ಚಿಟ್ ನೀಡಿದ್ದರು.
ವಕೀಲರಾದ ತಾರಾ ನರುಲಾ, ಅದಿತ್ ಎಸ್ ಪೂಜಾರಿ, ಅಪರಾಜಿತ ಸಿನ್ಹಾ, ಚೈತನ್ಯಾ ಮತ್ತು ತುಷಾರಿಕಾ ಮಟ್ಟು ಅವರು ಅರ್ಜಿದಾರರ ಪರ ವಾದಿಸಿದರು.