ಸಿಸೋಡಿಯಾ ಕಸ್ಟಡಿ ಅವಧಿ ಇನ್ನೂ 2 ದಿನಗಳಿಗೆ ವಿಸ್ತರಿಸಿದ ದೆಹಲಿ ನ್ಯಾಯಾಲಯ: ಜಾಮೀನು ಅರ್ಜಿ ವಿಚಾರಣೆ ಮಾರ್ಚ್ 10ಕ್ಕೆ

ಕೇಳಿದ್ದೇ ಪ್ರಶ್ನೆಗಳನ್ನು ಕೇಳದಂತೆ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ ಕೆ ನಾಗಪಾಲ್ ತನಿಖಾ ಸಂಸ್ಥೆಗೆ ಸೂಚಿಸಿದರು.
ಸಿಸೋಡಿಯಾ ಕಸ್ಟಡಿ ಅವಧಿ ಇನ್ನೂ 2 ದಿನಗಳಿಗೆ ವಿಸ್ತರಿಸಿದ ದೆಹಲಿ ನ್ಯಾಯಾಲಯ: ಜಾಮೀನು ಅರ್ಜಿ ವಿಚಾರಣೆ ಮಾರ್ಚ್ 10ಕ್ಕೆ
A1

ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ವಿಧಿಸಲಾಗಿರುವ ಸಿಬಿಐ ಕಸ್ಟಡಿ ಅವಧಿಯನ್ನು ಇನ್ನೂ ಎರಡು ದಿನಗಳ ಕಾಲ ವಿಸ್ತರಿಸಿ ದೆಹಲಿಯ ನ್ಯಾಯಾಲಯ ಶನಿವಾರ ಆದೇಶಿಸಿದೆ.

ಕೇಳಿದ್ದೇ ಪ್ರಶ್ನೆಗಳನ್ನು ಕೇಳದಂತೆ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ ಕೆ ನಾಗಪಾಲ್‌ ತನಿಖಾ ಸಂಸ್ಥೆಗೆ ಸೂಚಿಸಿದರು. "ದಯವಿಟ್ಟು ಮತ್ತೆ ಮತ್ತೆ ಅದೇ ಪ್ರಶ್ನೆಗಳನ್ನು ಕೇಳಬೇಡಿ. ನಿಮಗೆ ಹೊಸದೇನಾದರೂ ಇದ್ದರೆ ಅವರನ್ನು ಪ್ರಶ್ನಿಸಿ" ಎಂದು ನ್ಯಾಯಾಲಯ ಹೇಳಿದೆ.

Also Read
ದೆಹಲಿ ಅಬಕಾರಿ ನೀತಿ ಹಗರಣ: ಮನೀಶ್ ಸಿಸೋಡಿಯಾ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್; ಮಧ್ಯಪ್ರವೇಶಕ್ಕೆ ನಕಾರ

ಒಂದೇ ಬಗೆಯ ಪ್ರಶ್ನೆಗಳನ್ನು ಪದೇ ಪದೇ ಕೇಳುವ ಮೂಲಕ ಸಿಬಿಐ ತನಗೆ ಮಾನಸಿಕ ಕಿರುಕುಳ ನೀಡುತ್ತಿದೆ ಎಂದು ಸಿಸೋಡಿಯಾ ಕೋರ್ಟ್‌ಗೆ ದೂರಿದ್ದರು. ವಿಚಾರಣೆ ವೇಳೆ ಸಿಸೋಡಿಯಾ ಅವರು, “ಅಧಿಕಾರಿಗಳು ತಮಗೆ ಥರ್ಡ್‌ ಡಿಗ್ರಿ ಶಿಕ್ಷೆ ನೀಡುತ್ತಿಲ್ಲ ಆದರೆ ಎಂಟರಿಂದ ಒಂಬತ್ತು ಗಂಟೆಗಳ ಕಾಲ ಕುಳಿತು ಮತ್ತೆ ಮತ್ತೆ ಅದದೇ ಪ್ರಶ್ನೆಗಳಿಗೆ ಉತ್ತರಿಸುವುದು ಸಹ ಮಾನಸಿಕ ಕಿರುಕುಳವೇ” ಎಂದು ಸಿಸೋಡಿಯಾ ಹೇಳಿದ್ದರು.

Also Read
ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಮಾರ್ಚ್ 4ರವರೆಗೆ ಸಿಬಿಐ ವಶಕ್ಕೆ

ನಿಯಮಿತವಾಗಿ ಸಿಸೋಡಿಯಾ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆಯೂ ಸಿಬಿಐಗೆ ನ್ಯಾಯಾಲಯ ಸೂಚಿಸಿತು. ಶುಕ್ರವಾರ ಸಿಸೋಡಿಯಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು  ರೌಸ್ ಅವೆನ್ಯೂ ನ್ಯಾಯಾಲಯ ಮಾರ್ಚ್‌ 10 ರಂದು ವಿಚಾರಣೆ ನಡೆಸಲಿದೆ.

ಸಿಬಿಐ ಪರವಾಗಿ ವಾದ ಮಂಡಿಸಿದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಪಂಕಜ್‌ ಗುಪ್ತಾ “ತನಿಖೆಗೆ ಸಹಕರಿಸದ ಕಾರಣ ಸಿಸೋಡಿಯಾ ಅವರ ಕಸ್ಟಡಿ ಅವಧಿಯನ್ನು ಇನ್ನೂ ಮೂರು ದಿನಗಳ ಕಾಲ ವಿಸ್ತರಿಸಬೇಕು. ಇನ್ನೂ ಕೆಲವರ ವಿಚಾರಣೆ ನಡೆಸಬೇಕಿದೆ…. ಸುಪ್ರೀಂ ಕೋರ್ಟ್‌ಗೆ ಅವರು ಮೇಲ್ಮನವಿ ಸಲ್ಲಿಸಿದ್ದರಿಂದ ಕೆಲ ದಿನಗಳು ವ್ಯರ್ಥವಾದವು. ಹೀಗಾಗಿ ತನಿಖೆ ನಡೆಸಲು ಇನ್ನೂ ಮೂರು ದಿನಗಳ ಕಾಲ ಅವರನ್ನು ವಶಕ್ಕೆ ನೀಡಬೇಕು ಎಂದರು.

ಕಸ್ಟಡಿ ಅವಧಿ ವಿಸ್ತರಿಸುವುದಕ್ಕೆ ಹಿರಿಯ ನ್ಯಾಯವಾದಿ ದಯನ್‌ ಕೃಷ್ಣನ್‌ ಮತ್ತು ಮೋಹಿತ್‌ ಮಾಥುರ್‌ ವಿರೋಧ ವ್ಯಕ್ತಪಡಿಸಿದರು. "ಅಸಹಕಾರ ತೋರುತ್ತಿದ್ದಾರೆ ಎನ್ನುವುದು ಕಸ್ಟಡಿಯ ವಿಸ್ತರಣೆಗೆ ಕಾರಣವಾಗಲಾರದು. ತಪ್ಪೊಪ್ಪಿಕೊಳ್ಳುವವರೆಗೂ ನಾವು ಕಾಯುತ್ತೇವೆ ಎಂದು ಅವರು ಹೇಳಲಾಗದು. ತನಿಖೆಯನ್ನು ಪೂರ್ಣಗೊಳಿಸುವಲ್ಲಿನ ಅವರ ವೈಫಲ್ಯ ರಿಮ್ಯಾಂಡ್‌ ವಿಸ್ತರಿಸಲು ಕಾರಣವಾಗಬಾರದು" ಎಂದು ಬಲವಾಗಿ ಆಕ್ಷೇಪಿಸಿದರು.

Kannada Bar & Bench
kannada.barandbench.com