ದೆಹಲಿಯಲ್ಲಿ ಜನವರಿ 26ರ ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ರ‍್ಯಾಲಿಯ ಸಂದರ್ಭದಲ್ಲಿ ಕೆಂಪುಕೋಟೆ ಸಮೀಪ ನಡೆದ ಗಲಭೆಗೆ ಸಂಬಂಧಿಸಿದಂತೆ ಪಂಜಾಬಿ ನಟ ದೀಪ್ ಸಿಧುಗೆ ದೆಹಲಿ ನ್ಯಾಯಾಲಯವು ಶನಿವಾರ ಜಾಮೀನು ಮಂಜೂರು ಮಾಡಿದೆ.
“…ಸದ್ಯದ ಮನವಿಯನ್ನು ಪುರಸ್ಕರಿಸಲಾಗಿದ್ದು, ಆರೋಪಿ ಸಂದೀಪ್ ಸಿಂಗ್ ಸಿಧು ಅಲಿಯಾಸ್ ದೀಪ್ ಸಿಧುಗೆ ಜಾಮೀನು ಮಂಜೂರು ಮಾಡಲಾಗಿದೆ. ಸಿಧು ಇಬ್ಬರು ಸ್ಥಳೀಯರಿಂದ ಭದ್ರತೆ ಹಾಗೂ ತಲಾ 30 ಸಾವಿರ ರೂಪಾಯಿ ಬಾಂಡ್ ಸಲ್ಲಿಸಬೇಕು” ಎಂದು ಟಿಸ್ ಹಜಾರಿ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ನಿಲೋಫರ್ ಅಬೀದಾ ಆದೇಶಿಸಿದ್ದಾರೆ.
ತನಿಖಾಧಿಕಾರಿ ಪಾಸ್‌ಪೋರ್ಟ್ ನೀಡುವಂತೆ ಸಿಧುಗೆ ಆದೇಶಿಸಿರುವ ನ್ಯಾಯಾಲಯವು ತನಿಖಾಧಿಕಾರಿಗೆ ನೀಡಲಾಗಿರುವ ಮೊಬೈಲ್ ಯಾವಾಗಲೂ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ. ತಿಂಗಳ ಮೊದಲು ಮತ್ತು ಮಧ್ಯ ಭಾಗದಲ್ಲಿ ತಾನಿರುವ ಸ್ಥಳದ ಮಾಹಿತಿಯನ್ನು ಹಂಚಿಕೊಳ್ಳುವುದರ ಜೊತೆಗೆ ವಿಚಾರಣೆಗೆ ತನಿಖಾಧಿಕಾರಿಗಳು ಸೂಚಿಸಿದಾಗ ಹಾಜರಾಗುವಂತೆಯೂ ನಿರ್ದೇಶಿಸಲಾಗಿದೆ.
ಸಾಕ್ಷಿಗಳನ್ನು ಪ್ರಭಾವಿಸುವುದು, ಬೆದರಿಕೆ ಹಾಕುವುದು, ತಿರುಚುವುದು ಅಥವಾ ಹೆದರಿಸದಂತೆ ಸಿಧುಗೆ ನ್ಯಾಯಾಲಯ ಎಚ್ಚರಿಸಿದೆ. ಭಾರತೀಯ ದಂಡ ಸಂಹಿತೆ, ಶಸ್ತ್ರಾಸ್ತ್ರ ಕಾಯಿದೆ, ಸಾರ್ವಜನಿಕ ಆಸ್ತಿಗೆ ಹಾನಿ ನಿಯಂತ್ರಣ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ಸಿಧು ವಿರುದ್ಧ ದೂರು ದಾಖಲಿಸಲಾಗಿದ್ದು, ಫೆಬ್ರವರಿ 9ರಂದು ಅವರನ್ನು ಬಂಧಿಸಲಾಗಿತ್ತು.