ಮುಂಬರುವ ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಅವಾಮಿ ಇತ್ತೆಹಾದ್ ಪಕ್ಷದ ಪ್ರಚಾರ ಕೈಗೊಳ್ಳಲು ಅನುವಾಗುವಂತೆ ಬಾರಾಮುಲ್ಲಾ ಕ್ಷೇತ್ರದ ಸಂಸದ ಎಂಜಿನಿಯರ್ ರಶೀದ್ ಅವರಿಗೆ ದೆಹಲಿ ನ್ಯಾಯಾಲಯ ಮಂಗಳವಾರ ಮಧ್ಯಂತರ ಜಾಮೀನು ನೀಡಿದೆ.
ರಶೀದ್ ಅವರಿಗೆ ಅಕ್ಟೋಬರ್ 2 ರವರೆಗೆ ಮಧ್ಯಂತರ ಜಾಮೀನು ನೀಡಿ ಪಟಿಯಾಲಾ ಹೌಸ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಚಂದರ್ ಜಿತ್ ಸಿಂಗ್ ಆದೇಶ ಹೊರಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಪ್ಟೆಂಬರ್ 18 ರಿಂದ ಅಕ್ಟೋಬರ್ 1ರವರೆಗೆ ಮೂರು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಿಗದಿಯಾಗಿದೆ. ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ.
ಭಯೋತ್ಪಾದನೆಗಾಗಿ ನಿಧಿ ಸಂಗ್ರಹ ಮಾಡಿದ್ದಕ್ಕಾಗಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿ ಆರೋಪ ಎದುರಿಸುತ್ತಿರುವ ರಶೀದ್ ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾರೆ. ಈ ಹಿಂದೆ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲು ಅನುವಾಗುವಂತೆ ಇದೇ ನ್ಯಾಯಾಲಯ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು.
ರಶೀದ್ ಅವರು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಎರಡು ಲಕ್ಷ ಮತಗಳಿಂದ ಸೋಲಿಸುವ ಮೂಲಕ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು. ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್ ನಾಯಕ ಸಜ್ಜದ್ ಗನಿ ಲೋನ್ ಕೂಡ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ರಶೀದ್ ಈ ಹಿಂದೆ ವಿಧಾನಸಭೆಯ ಸದಸ್ಯರೂ ಆಗಿದ್ದರು. ಲೋಕಸಭಾ ಚುನಾವಣೆಯಲ್ಲಿ ಅವರ ಪರವಾಗಿ ಅವರ ಮಕ್ಕಳಾದ ಅಬ್ರಾರ್ ರಶೀದ್ ಮತ್ತು ಅಸ್ರಾರ್ ರಶೀದ್ ಪ್ರಚಾರ ಕಾರ್ಯ ಕೈಗೊಂಡಿದ್ದರು.