ಅಕ್ರಮ ಹಣ ವರ್ಗಾವಣೆ ಪ್ರಕರಣ: ರಾಬರ್ಟ್ ವಾದ್ರಾಗೆ ದೆಹಲಿ ನ್ಯಾಯಾಲಯ ನೋಟಿಸ್

ಗುರುಗ್ರಾಮದಲ್ಲಿ ನಡೆದ ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ವಾದ್ರಾ ಹಾಗೂ 10 ಜನರ ವಿರುದ್ಧ ಇ ಡಿ ಆರೋಪಪಟ್ಟಿ ಸಲ್ಲಿಸಿತ್ತು.
Robert Vadra
Robert VadraX
Published on

ಜಾರಿ ನಿರ್ದೇಶನಾಲಯ (ಇ ಡಿ) ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಅವರಿಗೆ ದೆಹಲಿ ನ್ಯಾಯಾಲಯ ಶನಿವಾರ ನೋಟಿಸ್ ಜಾರಿ ಮಾಡಿದೆ.

ಪ್ರಾಸಿಕ್ಯೂಷನ್ ದೂರನ್ನು ಪರಿಗಣಿಸುವ ಮೊದಲು ವಾದ್ರಾ ಮತ್ತು ಪ್ರಕರಣದಲ್ಲಿ ಪ್ರಸ್ತಾಪಿಸಲಾದ 10 ಆರೋಪಿಗಳ ವಾದವನ್ನು ಆಲಿಸುವುದಾಗಿ ರೌಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ (ಪಿಸಿ ಕಾಯ್ದೆ) ಸುಶಾಂತ್ ಚಂಗೋತ್ರಾ ಹೇಳಿದರು.

ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 28ರಂದು ನಡೆಯಲಿದೆ.

ಫೆಬ್ರವರಿ 2008 ರಲ್ಲಿ ಓಂಕಾರೇಶ್ವರ ಪ್ರಾಪರ್ಟೀಸ್‌ನಿಂದ ವಾದ್ರಾ ಅವರ ಕಂಪನಿ ಸ್ಕೈಲೈಟ್ ಹಾಸ್ಪಿಟಾಲಿಟಿ ₹7.5 ಕೋಟಿಗೆ ಖರೀದಿಸಿದ 3.5 ಎಕರೆ ಭೂಮಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಈ ವ್ಯವಹಾರದಲ್ಲಿ ಸುಳ್ಳು ದಾಖಲೆಗಳನ್ನು ಬಳಸಲಾಗಿದೆ ಎಂದು ಆರೋಪಿಸಲಾಗಿದೆ. ದಿಢೀರನೆ, ಆಸ್ತಿಯನ್ನು ಸ್ಕೈಲೈಟ್ ಪರವಾಗಿ ರೂಪಾಂತರಿಸಿ 24 ಗಂಟೆಗಳ ಒಳಗಾಗಿ ವಾದ್ರಾ ಅವರಿಗೆ ವರ್ಗಾಯಿಸಲಾಯಿತು ಎಂದು ಹೇಳಲಾಗಿದೆ.

Also Read
ವಾದ್ರಾ ವಿರುದ್ಧ ಕಪ್ಪುಹಣ ಕಾಯಿದೆ ಪ್ರಕರಣ: “ಪರಿಶೀಲಿಸಬಹುದು ಆದರೆ ಅಂತಿಮ ಆದೇಶ ನೀಡುವಂತಿಲ್ಲ” ಎಂದ ದೆಹಲಿ ಹೈಕೋರ್ಟ್

ಆಗ ಕಾಂಗ್ರೆಸ್ ಪಕ್ಷದ ಭೂಪಿಂದರ್ ಸಿಂಗ್ ಹೂಡಾ ನೇತೃತ್ವದ ಹರಿಯಾಣ ಸರ್ಕಾರ ವಾದ್ರಾ ಅವರ ಸಂಸ್ಥೆಗೆ ವಾಣಿಜ್ಯ ಪರವಾನಗಿಯನ್ನು ತರಾತುರಿಯಲ್ಲಿ ನೀಡಿತು. ಇದರಿಂದಾಗಿ ಭೂಮಿಯ ಮಾರುಕಟ್ಟೆ ಮೌಲ್ಯ ನಾಟಕೀಯವಾಗಿ ಹೆಚ್ಚಾಯಿತು ಎಂದು ಆರೋಪಿಸಲಾಗಿದೆ. ಸೆಪ್ಟೆಂಬರ್ 2012ರಲ್ಲಿ, ಸ್ಕೈಲೈಟ್ ಹಾಸ್ಪಿಟಾಲಿಟಿ ಭೂಮಿಯನ್ನು ರಿಯಾಲ್ಟಿ ದೈತ್ಯ ಡಿಎಲ್‌ಎಫ್‌ಗೆ ₹58 ಕೋಟಿಗೆ ಮಾರಾಟ ಮಾಡಿತ್ತು. ಪರಿಣಾಮ ವಾದ್ರಾ ಅವರಿಗೆ ಊಹಿಸಲಸಾಧ್ಯವಾದ ಲಾಭ ಉಂಟಾಗಿತ್ತು ಎಂದು ಆರೋಪಿಸಲಾಗಿದೆ.

ಈ ವ್ಯವಹಾರ ಅಪರಾಧದ ಗಳಿಕೆಯನ್ನು ಸೃಷ್ಟಿಸಿದ್ದು ಇದನ್ನು ವಾದ್ರಾ ಮತ್ತು ಅವರ ಸಂಬಂಧಿತ ಸಂಸ್ಥೆಗಳು ಬೇರೆ ಆಸ್ತಿ ಖರೀದಿಸಲು ಬಳಸಿಕೊಂಡಿವೆ ಎಂದು ಇ ಡಿ ದೂರಿತ್ತು.

Kannada Bar & Bench
kannada.barandbench.com