ಪೌರತ್ವಕ್ಕೂ ಮುನ್ನವೇ ಮತದಾರರ ಪಟ್ಟಿಯಲ್ಲಿ ಹೆಸರು: ಸೋನಿಯಾಗೆ ದೆಹಲಿ ನ್ಯಾಯಾಲಯದ ನೋಟಿಸ್

ಸೋನಿಯಾ ಅವರು 1983ರಲ್ಲಷ್ಟೇ ಭಾರತೀಯ ಪೌರತ್ವ ಪಡೆದರಾದರೂ, 1980ರಲ್ಲಿಯೇ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇತ್ತು ಎಂಬುದು ಅರ್ಜಿದಾರರ ಆರೋಪ.
Sonia Gandhi
Sonia Gandhi Facebook
Published on

ಪೌರತ್ವಕ್ಕೂ ಮುನ್ನವೇ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದರು ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲು ನಿರ್ದೇಶನ ನೀಡದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿಯ ಸಂಬಂಧ ದೆಹಲಿಯ ವಿಶೇಷ ನ್ಯಾಯಾಲಯವು ಸೋನಿಯಾ ಅವರಿಗೆ ಮಂಗಳವಾರ ನೋಟಿಸ್‌ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರಿಗೂ ಸಹ ನೋಟಿಸ್‌ ಜಾರಿಯಾಗಿದೆ.

ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದ ಹಿರಿಯ ವಕೀಲ ಪವನ್ ನಾರಂಗ್ ಅವರ ಪ್ರಾಥಮಿಕ ವಾದ ಆಲಿಸಿದ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿವು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್‌ ಗೊಗ್ನೆ ಅವರು ಸೋನಿಯಾ ಮತ್ತು ದೆಹಲಿ ಪೊಲೀಸರ ಪ್ರತಿಕ್ರಿಯೆ ಪಡೆಯುವುದು ಸೂಕ್ತ ಎಂದು ನಿರ್ಧರಿಸಿ ನೋಟಿಸ್‌ ನೀಡಿದರು. ಪ್ರಕರಣದ ಮುಂದಿನ ವಿಚಾರಣೆ ಜನವರಿ 6, 2026ರಂದು ನಡೆಯಲಿದೆ.

Also Read
ಪೌರತ್ವಕ್ಕೂ ಮುನ್ನವೇ ಮತದಾರರ ಪಟ್ಟಿಯಲ್ಲಿ ಹೆಸರು: ಸೋನಿಯಾ ವಿರುದ್ಧ ದೆಹಲಿ ನ್ಯಾಯಾಲಯದ ಮೆಟ್ಟಿಲೇರಿದ ಅರ್ಜಿದಾರ

ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ  ವೈಭವ್ ಚೌರಾಸಿಯಾ ಅವರು ಸೆ. 11ರಂದು ನೀಡಿದ್ದ ಆದೇಶ ಪ್ರಶ್ನಿಸಿ ವಿಕಾಸ್‌ ತ್ರಿಪಾಠಿ ಅವರು ಕ್ರಿಮಿನಲ್‌ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ಸೋನಿಯಾ ಅವರು 1983ರಲ್ಲಷ್ಟೇ ಭಾರತೀಯ ಪೌರತ್ವ ಪಡೆದರಾದರೂ, 1980ರಲ್ಲಿಯೇ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇತ್ತು ಎಂಬುದು ಅರ್ಜಿದಾರ ತ್ರಿಪಾಠಿ ಅವರ ಆಕ್ಷೇಪವಾಗಿತ್ತು. ಸೋನಿಯಾ ಅವರ ಹೆಸರನ್ನು 1980ರಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಯಿತು. ಆದರೆ 1982ರಲ್ಲಿ ತೆಗೆದುಹಾಕಲಾಯಿತು. ನಂತರ 1983ರಲ್ಲಿ ಮತ್ತೆ ಸೇರ್ಪಡೆ ಮಾಡಲಾಯಿತು. 1980ರಲ್ಲಿ ಮತದಾರರ ಪಟ್ಟಿಗೆ ಅವರ ಹೆಸರು ಸೇರ್ಪಡೆ ಮಾಡುವುದಕ್ಕಾಗಿ ಕೆಲವು ನಕಲಿ ದಾಖಲೆಗಳನ್ನು ಸಲ್ಲಿಸಲಾಗಿದ್ದು ಸಂಜ್ಞೇಯ ಅಪರಾಧ ಎಸಗಲಾಗಿದೆ ಎಂದು ಅವರು ಆಪಾದಿಸಿದ್ದರು. ಆದ್ದರಿಂದ, ಎಫ್‌ಐಆರ್ ದಾಖಲಿಸಲು ಆದೇಶ ನೀಡುವಂತೆ ಅವರು ಕೋರಿದ್ದರು.

ಅರ್ಜಿ ತಿರಸ್ಕರಿಸಿದ್ದ ನ್ಯಾ. ಚೌರಾಸಿಯಾ ಅವರು ನ್ಯಾಯಾಲಯ ಇಂತಹ ಪ್ರಕರಣಗಳ ವಿಚಾರಣೆಗೆ ಮುಂದಾದರೆ ಅದು ಸಾಂವಿಧಾನಿಕ ಪ್ರಾಧಿಕಾರಗಳಿಗೆ ಸ್ಪಷ್ಟವಾಗಿ ವಹಿಸಿಕೊಡಲಾದ ಅಧಿಕಾರದ ಅನಗತ್ಯ ಉಲ್ಲಂಘನೆಯಾಗಲಿದ್ದು ಸಂವಿಧಾನದ 329ನೇ ವಿಧಿಯ ಉಲ್ಲಂಘಿಸುತ್ತದೆ ಎಂದಿದ್ದರು. ತೀರ್ಪನ್ನು ತ್ರಿಪಾಠಿ ವಿಶೇಷ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.

Also Read
ಪೌರತ್ವಕ್ಕೂ ಮುನ್ನವೇ ಮತದಾರರ ಪಟ್ಟಿಯಲ್ಲಿ ಹೆಸರು: ಸೋನಿಯಾ ವಿರುದ್ಧದ ದೂರು ತಿರಸ್ಕರಿಸಿದ್ದೇಕೆ ದೆಹಲಿ ನ್ಯಾಯಾಲಯ?

ತ್ರಿಪಾಠಿ ಪರ ಹಾಜರಾದ ಹಿರಿಯ ವಕೀಲ ನಾರಂಗ್, ಪೌರತ್ವ ಪಡೆಯುವ ಮೊದಲು ನವದೆಹಲಿ ಸಂಸದೀಯ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಗಾಂಧಿಯವರ ಹೆಸರು ಇತ್ತು ಎಂದರೆ ಕೆಲವು ದಾಖಲೆಗಳನ್ನು ಫೋರ್ಜರಿ ಮಾಡಿರಬೇಕು ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಈ ವಿಚಾರ ಪರಿಶೀಲಿಸಲು ತ್ರಿಪಾಠಿ ಪೊಲೀಸರಿಗೆ ದೂರು ನೀಡಿದರಾದರೂ ಅವರು ಎಫ್‌ಐಆರ್ ದಾಖಲಿಸಿಕೊಳ್ಳಲಿಲ್ಲ ಎಂದು ವಕೀಲರು ಹೇಳಿದರು. ಆರೋಪಪಟ್ಟಿ ಸಲ್ಲಿಸಿ ಎಂದು ಹೇಳುತ್ತಿಲ್ಲ, ಆದರೆ ಆ ಅಂಶವನ್ನು ತನಿಖೆ ಮಾಡಲು ಪ್ರಯತ್ನಿಸಿ ಎಂದು ಕೋರಿದರು.

Kannada Bar & Bench
kannada.barandbench.com