ಪೌರತ್ವಕ್ಕೂ ಮುನ್ನವೇ ಮತದಾರರ ಪಟ್ಟಿಯಲ್ಲಿ ಹೆಸರು: ಸೋನಿಯಾ ವಿರುದ್ಧದ ದೂರು ತಿರಸ್ಕರಿಸಿದ್ದೇಕೆ ದೆಹಲಿ ನ್ಯಾಯಾಲಯ?

ಕಾಂಗ್ರೆಸ್ ನಾಯಕಿ ಸೋನಿಯಾ ವಿರುದ್ಧ ವ್ಯಕ್ತಿಯೊಬ್ಬರು ವಂಚನೆ ಮತ್ತು ಫೋರ್ಜರಿ ಆರೋಪ ಮಾಡಿದ್ದರು.
Sonia Gandhi
Sonia Gandhi
Published on

ವ್ಯಕ್ತಿಯ ಪೌರತ್ವಕ್ಕೆ ಸಂಬಂಧಿಸಿದ ವಿಷಯಗಳು ಕೇಂದ್ರ ಸರ್ಕಾರದ ವಿಶೇಷ ವ್ಯಾಪ್ತಿಗೆ ಬರುತ್ತವೆ ಎಂದು ಗುರುವಾರ ತಿಳಿಸಿದ ದೆಹಲಿ ನ್ಯಾಯಾಲಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಕ್ರಿಮಿನಲ್ ದೂರನ್ನು ವಜಾಗೊಳಿಸಿತು.

ಸೋನಿಯಾ ಗಾಂಧಿ ಅವರು 1983ರಲ್ಲಷ್ಟೇ ಭಾರತೀಯ ಪೌರತ್ವ ಪಡೆದರಾದರೂ, 1980ರಲ್ಲಿಯೇ ನವದೆಹಲಿ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇತ್ತು ಎಂದು ವಿಕಾಸ್‌ ತ್ರಿಪಾಠಿ ಎಂಬುವವರು ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಲಾಗಿತ್ತು.

Also Read
ಪೌರತ್ವಕ್ಕೂ ಮುನ್ನವೇ ಮತದಾರರ ಪಟ್ಟಿಯಲ್ಲಿ ಸೋನಿಯಾ ಹೆಸರು: ದೂರು ತಿರಸ್ಕರಿಸಿದ ದೆಹಲಿ ನ್ಯಾಯಾಲಯ

ಹೆಚ್ಚುವರಿ ಮುಖ್ಯ ನ್ಯಾಯಮೂರ್ತಿ ಮ್ಯಾಜಿಸ್ಟ್ರೇಟ್ ವೈಭವ್ ಚೌರಾಸಿಯಾ ಅವರು ಪ್ರಕಟಿಸಿರುವ ವಿವರವಾದ ಆದೇಶದಲ್ಲಿ, ವ್ಯಕ್ತಿಯನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ಅಥವಾ ಹೊರಗಿಡುವ ಅಧಿಕಾರ ಭಾರತೀಯ ಚುನಾವಣಾ ಆಯೋಗಕ್ಕೆ ಸೇರಿದ್ದು ಎಂದಿದ್ದಾರೆ.

"ಅಂತೆಯೇ, ಮತದಾರರ ಪಟ್ಟಿಯಲ್ಲಿ ಸೇರಿಸಲು ಅಥವಾ ಹೊರಗಿಡಲು ವ್ಯಕ್ತಿಯ ಅರ್ಹತೆಯನ್ನು ನಿರ್ಧರಿಸುವ ಅಧಿಕಾರ ಮತ್ತು ಐಪಿಸಿ ಇಲ್ಲವೇ ಬಿಎನ್‌ಎಸ್‌ನ ಅಪರಾಧದೊಂದಿಗೆ ತನ್ನ ಚುನಾವಣಾ ಅಪರಾಧಗಳು 1950ರ ಜನತಾ ಪ್ರಾತಿನಿಧ್ಯ ಕಾಯ್ದೆ, 1951 ರ ಜನತಾ ಪ್ರಾತಿನಿಧ್ಯ ಕಾಯ್ದೆ ಮತ್ತು ಸಂಬಂಧಿತ ಶಾಸನಗಳ ಅಡಿಯಲ್ಲಿ ಕ್ರಮ ಕೈಗೊಳ್ಳುವುದನ್ನು ಭಾರತದ ಚುನಾವಣಾ ಆಯೋಗಕ್ಕೆ ಮಾತ್ರ ನೀಡಲಾಗಿದೆ" ಎಂದು ನ್ಯಾಯಾಧೀಶ ಚೌರಾಸಿಯಾ ಒತ್ತಿ ಹೇಳಿದರು.

ಐಪಿಸಿ/ಬಿಎನ್ಎಸ್‌ ಅಡಿ ಅಪರಾಧ ಎಸಗಿದ್ದರೆ ಅಂತಹವರ ಹೆಸರನ್ನು  ಮತದಾರರ ಪಟ್ಟಿಯಲ್ಲಿ ಸೇರಿಸುವ ಅಥವಾ ಹೊರಗಿಡುವ ಅಧಿಕಾರ 1950ರ ಜನ ಪ್ರತಿನಿಧಿ ಕಾಯಿದೆ ಮತ್ತು 1951ರ ಪ್ರಜಾ ಪ್ರಾತಿನಿಧ್ಯ ಕಾಯಿದೆಯ ಪ್ರಕಾರ ಭಾರತದ ಚುನಾವಣಾ ಆಯೋಗಕ್ಕೆ ಮಾತ್ರ ನಿಹಿತವಾಗಿದೆ ಎಂದು ನ್ಯಾಯಾಲಯ ಹೇಳಿದೆ.

 ನ್ಯಾಯಾಲಯ ಇಂತಹ ಪ್ರಕರಣಗಳ ವಿಚಾರಣೆಗೆ ಮುಂದಾದರೆ ಅದು ಸಾಂವಿಧಾನಿಕ ಪ್ರಾಧಿಕಾರಗಳಿಗೆ ಸ್ಪಷ್ಟವಾಗಿ ವಹಿಸಿಕೊಡಲಾದ ಅಧಿಕಾರದ ಅನಗತ್ಯ ಉಲ್ಲಂಘನೆಯಾಗಲಿದ್ದು ಸಂವಿಧಾನದ 329 ನೇ ವಿಧಿಯ ಉಲ್ಲಂಘಿಸುತ್ತದೆ ಎಂದು ಅದು ತಿಳಿಸಿದೆ.

Also Read
ಪೌರತ್ವಕ್ಕೂ ಮುನ್ನವೇ ಮತದಾರರ ಪಟ್ಟಿಯಲ್ಲಿ ಸೋನಿಯಾ ಹೆಸರು: ಎಫ್ಐಆರ್ ದಾಖಲಿಸುವಂತೆ ದೆಹಲಿ ನ್ಯಾಯಾಲಯಕ್ಕೆ ಅರ್ಜಿ

ನ್ಯಾಯಾಲಯಕ್ಕೆ ನ್ಯಾಯವ್ಯಾಪ್ತಿ ಒದಗಿಸಿಕೊಡುವುದಕ್ಕಾಗಿ ವಂಚನೆ ಮತ್ತು ಫೋರ್ಜರಿಗೆ ಸಂಬಂಧಿಸಿದ ಕ್ರಿಮಿನಲ್‌ ಸೆಕ್ಷನ್‌ಗಳನ್ನು ಹೂಡಲು ದೂರುದಾರ ವಿಕಾಸ್‌ ತ್ರಿಪಾಠಿ ಯತ್ನಿಸಿದ್ದಾರೆ. ಆದರೆ ನಡೆದಿದೆ ಎನ್ನಲಾದ ಕೃತ್ಯಗಳನ್ನು ಸಾಬೀತಪಡಿಸಲು ಅಗತ್ಯವಾದ ಮೂಲಭೂತ ಅಂಶಗಳ ಕೊರತೆ ಸ್ಪಷ್ಟವಾಗಿ ಕಂಡುಬರುತ್ತಿದೆ ಎಂದು ನ್ಯಾಯಾಧೀಶರು ವಿವರಿಸಿದ್ದಾರೆ.

ಫೋರ್ಜರಿ ಅಥವಾ ವಂಚನೆಯ ಆರೋಪ ಸಾಬೀತಾಗುವಂತಹ ಪ್ರಮುಖ ವಿವರಗಳಿಲ್ಲದೆ ಇರುವಾಗ ಕಾನೂನಾತ್ಮಕವಾಗಿ ಸಮರ್ಥನೀಯವಾಗುವುದಿಲ್ಲ. ಹಾಗೆ ಮಾಡಿದರೆ ಮೂಲತಃ ಸಿವಿಲ್‌ ಇಲ್ಲವೇ ಸಾಮಾನ್ಯ ವ್ಯಾಜ್ಯವನ್ನು ಅಪರಾಧ ಎಂದು ಬಿಂಬಿಸಿ ಇಲ್ಲದ ಅಧಿಕಾರ ಸೃಷ್ಟಿಸಲು ಕಾನೂನು ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಂತಾಗುತ್ತದೆ ಎಂದ ನ್ಯಾಯಾಲಯ ಅರ್ಜಿ ತಿರಸ್ಕರಿಸಿದೆ.

Kannada Bar & Bench
kannada.barandbench.com