ವಕೀಲ- ಕಕ್ಷಿದಾರರ ಸಂವಹನ ರಕ್ಷಣೆ ಸವಲತ್ತು ಸಾಂಸ್ಥಿಕ ನ್ಯಾಯವಾದಿಗಳಿಗೆ ಅನ್ವಯವಾಗದು: ಸುಪ್ರೀಂ ಕೋರ್ಟ್

ಪೂರ್ಣಾವಧಿ ವೇತನ ಪಡೆಯುವ ವಕೀಲರು ಕಾನೂನಿನ ಪ್ರಕಾರ ವಕಾಲತ್ತು ನ್ಯಾಯವಾದಿಗಳಲ್ಲವಾದ್ದರಿಂದ ಬಿಎಸ್ಎ ಸೆಕ್ಷನ್ 132 ರ ಅಡಿಯಲ್ಲಿ ಆ ರಕ್ಷಣೆ ಅವರಿಗೆ ದೊರೆಯದು ಎಂದಿದೆ ಪೀಠ.
In-house Counsel
In-house Counsel
Published on

ಕಾರ್ಪೊರೇಟ್‌ಗಳು/ಕಂಪನಿಗಳು ನೇಮಿಸಿಕೊಳ್ಳುವ ಸಾಂಸ್ಥಿಕ ವಕೀಲರು ಕಾನೂನಿನ ಅರ್ಥದಲ್ಲಿ ವಕೀಲರಲ್ಲ ಹೀಗಾಗಿ ಅವರು ಭಾರತೀಯ ಸಾಕ್ಷ್ಯ ಅಧಿನಿಯಮದ (ಬಿಎಸ್‌ಎ) ಸೆಕ್ಷನ್ 132 ರ ಅಡಿಯಲ್ಲಿ ದಾವೆದಾರರಿಗೆ ಕಾನೂನು ಸಲಹೆ ನೀಡುವ ವಕೀಲರಿಗೆ ಸಮನ್ಸ್‌ ನೀಡದಂತೆ ರಕ್ಷಿಸುವ ʼವಕೀಲ- ದಾವೆದಾರರ ಸಂವಹನ ರಕ್ಷಣೆಯ ಸವಲತ್ತುʼ ಪಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಸ್ಪಷ್ಟಪಡಿಸಿದೆ

ಸೆಕ್ಷನ್ 132 ರ ಅಡಿಯಲ್ಲಿ ಈ ರಕ್ಷಣೆ ನ್ಯಾಯಾಲಯದಲ್ಲಿ ವಕೀಲಿಕೆ ನಡೆಸುವ ವಕೀಲರಿಗೆ ಮಾತ್ರ ಅನ್ವಯವಾಗಿದ್ದು ಕಂಪೆನಿಯಲ್ಲಿ ಉದ್ಯೋಗಸ್ಥರಾಗಿರುವ ಕಾನೂನು ಸಲಹೆಗಾರರಿಗೆ ಅಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ , ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ಪೀಠ ತೀರ್ಪು ನೀಡಿದೆ.

Also Read
ಅಸಾಧಾರಣ ಸಂದರ್ಭಗಳ ಹೊರತಾಗಿ, ಕಕ್ಷಿದಾರರಿಗೆ ಸಲಹೆ ನೀಡುವ ವಕೀಲರಿಗೆ ಸಮನ್ಸ್ ಜಾರಿ ಮಾಡುವಂತಿಲ್ಲ: ಸುಪ್ರೀಂ

"ಬಿಎಸ್ಎಯಲ್ಲಿ ಹೇಳಿದಂತೆ ನ್ಯಾಯಾಲಯಗಳಲ್ಲಿ ಅಭ್ಯಾಸ ಮಾಡುವ ವಕೀಲರಲ್ಲದ ಕಾರಣ, ಸಾಂಸ್ಥಿಕ ವಕೀಲರು ಸೆಕ್ಷನ್ 132 ರ ಅಡಿಯಲ್ಲಿ ಸವಲತ್ತು ಪಡೆಯಲು ಅರ್ಹರಾಗಿರುವುದಿಲ್ಲ" ಎಂದು ಅದು ವಿವರಿಸಿದೆ.

ಕಕ್ಷಿದಾರರಿಗೆ ಸಲಹೆ ನೀಡಿದ ಕಾರಣಕ್ಕೆ ವಕೀಲರಿಗೆ ಜಾರಿ ನಿರ್ದೇಶನಾಲಯ (ಇ ಡಿ) ರೀತಿಯ ತನಿಖಾ ಸಂಸ್ಥೆಗಳು ಸಮನ್ಸ್‌ ನೀಡುತ್ತಿದ್ದ ಸಂಬಂಧ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.

ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿ ಜನರಲ್ ಕೌನ್ಸೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಅರ್ಜಿ ಸಲ್ಲಿಸಿತ್ತು. ಸಾಂಸ್ಥಿಕ ವಕೀಲರಿಗೆ ಕೂಡ ಸ್ವತಂತ್ರ ವಕೀಲರಂತೆಯೇ ಗೌಪ್ಯತೆಯ ರಕ್ಷಣೆ ನೀಡಬೇಕು. ಕಾರ್ಪೊರೇಟ್ ವಕೀಲರು ಒಂದೇ ರೀತಿಯ ಕಾನೂನು ಸಲಹಾ ಕಾರ್ಯಗಳನ್ನು ನಿರ್ವಹಿಸುತ್ತಾರೆ ಮತ್ತು ಕಾನೂನಿನಡಿಯಲ್ಲಿ ಅವರನ್ನು ಸಮಾನವಾಗಿ ಪರಿಗಣಿಸಬೇಕು ಎಂದು ಅದು ವಾದಿಸಿತ್ತು.

ವಿಚಾರಣೆ ವೇಳೆ ನ್ಯಾಯಾಲಯ, ಕಾನೂನು ವೃತ್ತಿಗೆ ಸ್ವಾತಂತ್ರ್ಯಪ್ರಧಾನವಾದುದಾಗಿದ್ದು ಕಂಪನಿಯ ನಿರ್ವಹಣಾ ವ್ಯವಸ್ಥೆಯ ಭಾಗವಾಗಿರುವುದರಿಂದ ಸಾಂಸ್ಥಿಕ ವಕೀಲರು ಆ ಸ್ವಾತಂತ್ರ್ಯ ಹೊಂದಿರುವುದಿಲ್ಲ ಎಂದಿದೆ.

"ಸಾಂಸ್ಥಿಕ ವಕೀಲರು, ಕಾನೂನಿನ ಪ್ರಶ್ನೆಗಳ ಬಗ್ಗೆ ತಮ್ಮ ಉದ್ಯೋಗದಾತರಿಗೆ ಸಲಹೆ ನೀಡುವ ಕೆಲಸದಲ್ಲಿ ನಿರತರಾಗಿದ್ದರೂ,  ತಮ್ಮ ಉದ್ಯೋಗದಾತರು ಪಾಲಿಸುವ ವಾಣಿಜ್ಯ ಮತ್ತು ವ್ಯವಹಾರ ತಂತ್ರಗಳಿಂದ ಪ್ರಭಾವಿತರಾಗಿರುತ್ತಾರೆ. ಅವರು ಸದಾ ತಮ್ಮ ಉದ್ಯೋಗದಾತರಿಗೆ  ಅವರ ಹಿತಾಸಕ್ತಿಗಳ ರಕ್ಷಣೆಗೆ  ಬದ್ಧರಾಗಿರುತ್ತಾರೆ" ಎಂದು ಅದು ಹೇಳಿದೆ.

Also Read
ಹಿರಿಯ ನ್ಯಾಯವಾದಿ ದಾತಾರ್ ಅವರಿಗೆ ಇ ಡಿ ಸಮನ್ಸ್: ಎಸ್‌ಸಿಎಒಆರ್‌ಎ ತೀವ್ರ ಖಂಡನೆ

ಸೆಕ್ಷನ್ 132 ಸಾಂಸ್ಥಿಕ ವಕೀಲರಿಗೆ ರಕ್ಷಣೆ ನೀಡದಿದ್ದರೂ, ಬಿಎಸ್ಎ ಸೆಕ್ಷನ್ 134 ರ ಅಡಿಯಲ್ಲಿ ಅವರು ಈಗಲೂ ಸೀಮಿತ ಗೌಪ್ಯತೆಯ ಸವಲತ್ತು ಪಡೆಯಬಹುದಾಗಿದೆ.  ಸೆಕ್ಷನ್ 134  ತಮ್ಮ ವಕೀಲರೊಂದಿಗೆ ನಡೆದ ಗೌಪ್ಯ ಸಂವಹನ ಬಹಿರಂಗಪಡಿಸದಂತೆ ವ್ಯಕ್ತಿಗಳಿಗೆ ರಕ್ಷಣೆ ಒದಗಿಸುತ್ತದೆ.

ಈ ರಕ್ಷಣೆ ಗೌಪ್ಯತೆಯ ಸಾಮಾನ್ಯ ನಿಯಮದಂತೆ ಕಾರ್ಯನಿರ್ವಹಿಸುತ್ತದೆಯಾದರೂ ಸಾಂಸ್ಥಿಕ ವಕೀಲರನ್ನು ವೃತ್ತಿಪರ ಸವಲತ್ತುಗಳಿಗೆ ಅರ್ಹರಾದ "ವಕೀಲರ" ಸ್ಥಾನಮಾನಕ್ಕೆ ಏರಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

[ತೀರ್ಪಿನ ಪ್ರತಿ]

Attachment
PDF
In_Re___Summoning_Advocates_who_give_legal_opinion_or_represent_parties_during_investigation_of_case
Preview
Kannada Bar & Bench
kannada.barandbench.com