ಮಾನಹಾನಿ ಪ್ರಕರಣ: ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಬಿಡುಗಡೆಗೆ ದೆಹಲಿ ಹೈಕೋರ್ಟ್‌ ಆದೇಶ

ತನ್ನ ಆದೇಶ ಪಾಲಿಸದ ಕಾರಣ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಮೇಧಾ ಪಾಟ್ಕರ್ ಅವರನ್ನು ಇಂದು ಬೆಳಿಗ್ಗೆ ಬಂಧಿಸಿದ್ದರು.
Medha Patkar and Delhi LG VK Saxena
Medha Patkar and Delhi LG VK Saxena
Published on

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ದಾಖಲಿಸಿದ್ದ ಸುಮಾರು ಎರಡೂವರೆ ದಶಕಗಳ ಹಿಂದಿನ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಪಾಲಿಸದಿದ್ದಕ್ಕಾಗಿ ದೆಹಲಿ ಪೊಲೀಸರು ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರನ್ನು ಶುಕ್ರವಾರ ಬಂಧಿಸಿದ ಕೆಲವೇ ಗಂಟೆಗಳ ನಂತರ ದೆಹಲಿ ಹೈಕೋರ್ಟ್‌ ಅವರನ್ನು ಬಿಡುಗಡೆ ಮಾಡುವಂತೆ ಆದೇಶಿಸಿತು.

ವಿಚಾರಣಾ ನ್ಯಾಯಾಲಯದ ನಿರ್ದೇಶನದಂತೆ ಮೇಧಾ ಪಾಟ್ಕರ್‌ ಅವರು ಪ್ರೊಬೇಷನ್‌ ಬಾಂಡ್ ನೀಡಿದರೆ ಅವರು ಶಿಕ್ಷೆಯನ್ನು ಒಪ್ಪಿಕೊಂಡಿದ್ದಾರೆ ಎಂದಾಗುತ್ತದೆ ಮತ್ತು ಹೈಕೋರ್ಟ್‌ನಲ್ಲಿ ಅವರು ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಯು ನಿಷ್ಪ್ರಯೋಜಕವಾಗುತ್ತದೆ ಎಂದು ಅವರ ವಕೀಲರು ಗಮನಸೆಳೆದರು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಶಾಲಿಂದರ್ ಕೌರ್ ಅವರು ₹25,000 ಜಾಮೀನು ಬಾಂಡ್ ನೀಡುವ ಆದೇಶಕ್ಕೆ ಒಳಪಟ್ಟು ಮೇಧಾ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಮಧ್ಯಂತರ ಆದೇಶ ಹೊರಡಿಸಿದರು.

ತದನಂತರ ಮೇಧಾ ಪಾಟ್ಕರ್‌ ಅವರನ್ನು ಸಾಕೇತ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿಪಿನ್ ಖರ್ಬ್ ಅವರ ಮುಂದೆ ಹಾಜರು ಪಡಿಸಲಾಯಿತು. ಹೈಕೋರ್ಟ್‌ನ ಆದೇಶದ ಅನ್ವಯ ಜಾಮೀನು ಬಾಂಡ್ ನೀಡುವುದಾಗಿ ಮೇಧಾ ಪರ ವಕೀಲರು ಹೇಳಿದ ನಂತರ ನ್ಯಾಯಾಧೀಶರು ಅವರನ್ನು ಬಿಡುಗಡೆಗೊಳಿಸಿದರು.

ಮಾನಹಾನಿ ಪ್ರಕರಣದಲ್ಲಿ ವಿಧಿಸಲಾಗಿದ್ದ ಶಿಕ್ಷೆಯನ್ನು ಕಡಿತಗೊಳಿಸಿ ಮಾಡಿದ್ದ ಆದೇಶದಲ್ಲಿನ ಷರತ್ತುಗಳನ್ನು ಪಾಲಿಸದ ಕಾರಣ ಮೇಧಾ ವಿರುದ್ಧ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಅವರನ್ನು ಇಂದು ಬೆಳಿಗ್ಗೆ ಬಂಧಿಸಿದ್ದರು.

Also Read
ಮಾನನಷ್ಟ ಮೊಕದ್ದಮೆ: ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಬಂಧನ

ಮೇಧಾ ಪಾಟ್ಕರ್ ವಿರುದ್ಧ 2001ರಲ್ಲಿ ವಿ ಕೆ ಸಕ್ಸೇನಾ ಅವರು ನ್ಯಾಷನಲ್ ಕೌನ್ಸಿಲ್ ಆಫ್ ಸಿವಿಲ್ ಲಿಬರ್ಟೀಸ್ ಎಂಬ ಸಂಘಟನೆಯ ಅಧ್ಯಕ್ಷರಾಗಿದ್ದಾಗ ಪ್ರಕರಣ ದಾಖಲಿಸಿದ್ದರು. 2000ರಲ್ಲಿ, ಸಕ್ಸೇನಾ ನೇತೃತ್ವದ ಸಂಘಟನೆ ಮೇಧಾ ಅವರ ನರ್ಮದಾ ನದಿಗೆ ಅಣೆಕಟ್ಟುಗಳನ್ನು ನಿರ್ಮಾಣ ಮಾಡುವುದನ್ನು ವಿರೋಧಿಸುವ 'ನರ್ಮದಾ ಬಚಾವೋ ಆಂದೋಲನ'ದ ವಿರುದ್ಧ ಜಾಹೀರಾತು ಪ್ರಕಟಿಸಿತ್ತು. ಜಾಹೀರಾತಿನ ಶೀರ್ಷಿಕೆ 'ಶ್ರೀಮತಿ ಮೇಧಾ ಪಾಟ್ಕರ್ ಮತ್ತು ಅವರ ನರ್ಮದಾ ಬಚಾವೋ ಆಂದೋಲನದ ನೈಜ ಮುಖ' ಎಂಬುದಾಗಿತ್ತು.

ಜಾಹೀರಾತು ಪ್ರಕಟವಾದ ನಂತರ, ಪಾಟ್ಕರ್ ಸಕ್ಸೇನಾ ವಿರುದ್ಧ ಪತ್ರಿಕಾ ಪ್ರಕಟಣೆ ಹೊರಡಿಸಿದರು. 'ದೇಶಭಕ್ತನ ನಿಜವಾದ ಸಂಗತಿಗಳು - ಜಾಹೀರಾತಿಗೆ ಪ್ರತಿಕ್ರಿಯೆ' ಎಂಬ ಪತ್ರಿಕಾ ಟಿಪ್ಪಣಿಯಲ್ಲಿ , ಸಕ್ಸೇನಾ ಸ್ವತಃ ಮಾಲೆಗಾಂವ್‌ಗೆ ಭೇಟಿ ನೀಡಿ, ನರ್ಮದಾ ಬಚಾವೋ ಆಂದೋಲನವನ್ನು ಹೊಗಳಿದ್ದಾರೆ ಮತ್ತು ನರ್ಮದಾ ಬಚಾವೋ ಆಂದೋಲನಕ್ಕಾಗಿ ಲೋಕ ಸಮಿತಿಗೆ ₹40,000 ಚೆಕ್ ಮೂಲಕ ಪಾವತಿಸಿದ್ದಾರೆ ಎಂದು ಆರೋಪಿಸಿದ್ದರು. ಲಾಲ್‌ಭಾಯ್ ಸಮೂಹ ಸಂಸ್ಥೆಯಿಂದ ಬಂದ ಚೆಕ್ ಬೌನ್ಸ್ ಆಗಿದೆ ಎಂದು ಸಹ ತಿಳಿಸಲಾಗಿತ್ತು.

Also Read
ಕೋವಿಡ್: ವೃದ್ಧ ಕೈದಿಗಳ ಬಿಡುಗಡೆಗೆ ಏಕರೂಪದ ನೀತಿ ಜಾರಿಗೊಳಿಸಲು ಕೋರಿ ಸುಪ್ರೀಂಕೋರ್ಟ್‌ಗೆ ಮೇಧಾ ಪಾಟ್ಕರ್ ಮನವಿ

ಹೀಗಾಗಿ ಸಕ್ಸೇನಾ 2001ರಲ್ಲಿ ಅಹಮದಾಬಾದ್‌ ನ್ಯಾಯಾಲಯದಲ್ಲಿ ಪಾಟ್ಕರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ತಾನು ಮಾಲೆಗಾಂವ್‌ಗೆ ಎಂದಿಗೂ ಭೇಟಿ ನೀಡಿಲ್ಲ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಯೋಜನೆಗಳ ವಿರುದ್ಧ ಕೆಲಸ ಮಾಡುತ್ತಿರುವ ನರ್ಮದಾ ಬಚಾವೋ ಆಂದೋಲನವನ್ನು ಎಂದಿಗೂ ಹೊಗಳಿಲ್ಲ. ಅಲ್ಲದೆ ತಾನು ಲೋಕ ಸಮಿತಿಗೆ ಯಾವುದೇ ಚೆಕ್ ನೀಡಿಲ್ಲ ಎಂದು ಪ್ರತಿಪಾದಿಸಿದರು.

ಇತ್ತ ಪಾಟ್ಕರ್, ತಾವು ಯಾವುದೇ ಪತ್ರಿಕಾ ಟಿಪ್ಪಣಿಯನ್ನು ಬಿಡುಗಡೆ ಮಾಡಿಲ್ಲ ಅಥವಾ ಅದನ್ನು ಪ್ರಕಟಿಸಿದ rediff.com ಸೇರಿದಂತೆ ಯಾರಿಗೂ ಯಾವುದೇ ಪತ್ರಿಕಾ ಟಿಪ್ಪಣಿ ಅಥವಾ ಇ-ಮೇಲ್ ಕಳುಹಿಸಿಲ್ಲ ಎಂದು ತಮ್ಮ ವಿರುದ್ಧದ ಆರೋಪ ನಿರಾಕರಿಸಿದ್ದರು.

ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ 2003ರಲ್ಲಿ ಪ್ರಕರಣವನ್ನು ದೆಹಲಿಗೆ ವರ್ಗಾಯಿಸಲಾಯಿತು.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪಾಟ್ಕರ್ ಕೂಡ ಸಕ್ಸೇನಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದ ವಿಚಾರಣೆ ಇನ್ನೂ ಬಾಕಿ ಇದೆ.

ಈ ತಿಂಗಳ ಆರಂಭದಲ್ಲಿ, ಹೆಚ್ಚುವರಿ ಸಾಕ್ಷಿಗಳನ್ನು ವಿಚಾರಣೆ ನಡೆಸುವಂತೆ ಪಾಟ್ಕರ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ವಿಚಾರಣಾ ನ್ಯಾಯಾಲಯದ ನಿರ್ಧಾರದ ವಿರುದ್ಧ ಪಾಟ್ಕರ್ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ, ದೆಹಲಿ ಹೈಕೋರ್ಟ್ ಈ ಪ್ರಕರಣದ ಅಂತಿಮ ವಿಚಾರಣೆಯನ್ನು ಮುಂದೂಡಲು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು

ಪ್ರಕರಣವನ್ನು ಹೈಕೋರ್ಟ್ ಮೇ 20ರಂದು ವಿಚಾರಣೆ ನಡೆಸಲಿದೆ.

Kannada Bar & Bench
kannada.barandbench.com