ನ್ಯಾ. ಗೋಗ್ನೆ ಅವರಿಂದ ಪ್ರಕರಣ ವರ್ಗಾವಣೆ ಕೋರಿದ್ದ ರಾಬ್ಡಿ ದೇವಿ ಮನವಿ ತಿರಸ್ಕರಿಸಿದ ದೆಹಲಿ ನ್ಯಾಯಾಲಯ

ಅರ್ಜಿಯನ್ನು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ದಿನೇಶ್ ಭಟ್ ತಿರಸ್ಕರಿಸಿದರು.
(L-R) Lalu Yadav, Rabri Devi and Tejashwi Yadav
(L-R) Lalu Yadav, Rabri Devi and Tejashwi Yadav facebook
Published on

ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ಲಾಲು ಪ್ರಸಾದ್ ಯಾದವ್, ರಾಬ್ಡಿ ದೇವಿ ಹಾಗೂ ಅವರ ಪುತ್ರ ತೇಜಸ್ವಿ ಯಾದವ್ ಮತ್ತಿತರ ಕುಟುಂಬ ಸದಸ್ಯರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯನ್ನು ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರ ಬದಲು ಬೇರೆ ನ್ಯಾಯಾಧೀಶರಿಗೆ ವರ್ಗಾಯಿಸುವಂತೆ ಸಲ್ಲಿಸಿದ್ದ ಮನವಿಯನ್ನು ದೆಹಲಿ ನ್ಯಾಯಾಲಯ ಶುಕ್ರವಾರ ನಿರಾಕರಿಸಿದೆ .

ಈ ಸಂಬಂಧ ರಾಬ್ಡಿ ದೇವಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ದಿನೇಶ್ ಭಟ್ ತಿರಸ್ಕರಿಸಿದರು.

Also Read
ನ್ಯಾ. ಗೋಗ್ನೆ ವಿರುದ್ಧ ಆರೋಪ: ರಾಬ್ಡಿ ದೇವಿ ಅರ್ಜಿ ಕುರಿತು ಪ್ರತಿಕ್ರಿಯಿಸಲು ಸಿಬಿಐಗೆ ಸೂಚಿಸಿದ ದೆಹಲಿ ನ್ಯಾಯಾಲಯ

ನ್ಯಾಯಾಧೀಶ ಗೋಗ್ನೆ ಅವರ ಮುಂದೆ ಬಾಕಿ ಇರುವ ನಾಲ್ಕು ಪ್ರಕರಣಗಳನ್ನು ವರ್ಗಾಯಿಸುವಂತೆ ಕೋರಿ ರಾಬ್ಡಿ ದೇವಿ ನಾಲ್ಕು ಅರ್ಜಿಗಳನ್ನು ಸಲ್ಲಿಸಿದ್ದರು. ಐಆರ್‌ಸಿಟಿಸಿ ಹಗರಣ, ಉದ್ಯೋಗಕ್ಕಾಗಿ ಜಮೀನು ಪಡೆದ ಆರೋಪ ಮತ್ತಿತರ ದಾವೆಗಳನ್ನು ಆಧರಿಸಿ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ಹೂಡಲಾಗಿತ್ತು.

ನ್ಯಾಯಾಧೀಶರು ಪಕ್ಷಪಾತಿಯಾಗಿ ವರ್ತಿಸುತ್ತಿದ್ದು ತಮ್ಮ ಹಾಗೂ ತಮ್ಮ ಕುಟುಂಬದ ವಿರುದ್ಧ ಪೂರ್ವಾಗ್ರಹ ಪೀಡಿತರಾಗಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಅನಗತ್ಯ ಒಲವು ಹೊಂದಿದ್ದಾರೆ ಎಂದು ಅವರು ದೂರಿದ್ದರು.

ರಾಬ್ಡಿ ಅವರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಮಣೀಂದರ್‌ ಸಿಂಗ್‌, ನ್ಯಾಯಾಧೀಶ ವಿಶಾಲ್ ಗೊಗ್ನೆ ಅವರ ಮುಂದೆ 29 ಪ್ರಕರಣಗಳು ಬಾಕಿ ಇದ್ದರೂ, ರಾಬ್ಡಿ ದೇವಿ ಮತ್ತು ಅವರ ಕುಟುಂಬದ ವಿರುದ್ಧದ ಪ್ರಕರಣಗಳನ್ನು ಮಾತ್ರ ಅವರು ಅತಿ ಆತುರದಿಂದ ವಿಚಾರಣೆ ನಡೆಸುತ್ತಿದ್ದಾರೆ. 2025ರ ಜನವರಿ 1ರಿಂದ ಡಿಸೆಂಬರ್ 14ರವರೆಗೆ ಯಾದವ್ ಕುಟುಂಬದ ನಾಲ್ಕು ಪ್ರಕರಣಗಳನ್ನು ಕ್ರಮವಾಗಿ 117, 70, 50 ಹಾಗೂ 28 ಬಾರಿ ವಿಚಾರಣೆ ನಡೆಸಲಾಗಿದೆ ಎಂದರು.

ಸಿಬಿಐಯನ್ನು ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ  ಡಿ ಪಿ ಸಿಂಗ್ ಈ ವಾದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನ್ಯಾಯಾಧೀಶರ ಗೌರವಕ್ಕೆ ಚ್ಯುತಿ ತರುವ ಉದ್ದೇಶದಿಂದ ಪ್ರಕರಣದ ವರ್ಗಾವಣೆ ಕೋರಲಾಗಿದೆ. ನ್ಯಾಯಾಲಯಗಳ ಮೇಲೆ ಒತ್ತಡ ಹೇರುವ ಉದ್ದೇಶ ಇದರ ಹಿಂದಿದೆ. ರಾಬ್ಡಿ ದೇವಿ ಮಾಡಿದ ಆರೋಪಗಳು ಸುಳ್ಳು ಮತ್ತು ಅವಹೇಳನಕಾರಿ ಎಂದರು.

Also Read
ನ್ಯಾ. ಗೋಗ್ನೆ ವಿರುದ್ಧ ಪಕ್ಷಪಾತದ ಆರೋಪ ಮಾಡಿದ ರಾಬ್ಡಿ ದೇವಿ: ಪ್ರಕರಣಗಳ ವರ್ಗಾವಣೆಗೆ ಕೋರಿಕೆ

ನ್ಯಾ. ಗೋಗ್ನೆ ಅವರು ನಿಯಮಾನುಸಾರವೇ ವಿಚಾರಣೆ ನಡೆಸುತ್ತಿದ್ದಾರೆ ಎಂದು ಸಿಬಿಐ ಸ್ಪಷ್ಟಪಡಿಸಿತು. ನ್ಯಾಯಾಲಯ ನೀಡಿದ್ದ ಸೂಚನೆ ಮೇರೆಗೆ ನ್ಯಾಯಾಧೀಶ ಗೊಗ್ನೆ ಅವರು ಮುಚ್ಚಿದ ಲಕೋಟೆಯಲ್ಲಿ ತಮ್ಮ ಪ್ರತಿಕ್ರಿಯೆ ಸಲ್ಲಿಸಿದರು. ಕಾನೂನುಬದ್ಧವಾಗಿ ಹಾಗೂ ನಿಷ್ಪಕ್ಷಪಾತವಾಗಿ ವಿಚಾರಣೆ ನಡೆಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಈ ಎಲ್ಲಾ ವಿಚಾರಗಳನ್ನು ಪರಿಗಣಿಸಿದ ನ್ಯಾಯಾಲಯವು, ಪ್ರಕರಣಗಳನ್ನು ವರ್ಗಾಯಿಸುವ ಅಗತ್ಯವಿಲ್ಲ ಎಂದು ನಿರ್ಧರಿಸಿ, ರಾಬ್ಡಿ ದೇವಿಯವರ ಮನವಿಯನ್ನು ತಿರಸ್ಕರಿಸಿತು.

Kannada Bar & Bench
kannada.barandbench.com